ಮತ್ತೊಂದು ಹೊಡೆತ – ಚೀನಾದಿಂದ ಟಿವಿ ಆಮದಿಗೆ ನಿರ್ಬಂಧ

Public TV
2 Min Read

ನವದೆಹಲಿ: ಗಲ್ವಾನ್‌ ಘರ್ಷಣೆಯ ಬಳಿಕ ಅಪ್ಲಿಕೇಶನ್‌ಗಳು ನಿಷೇಧಿಸಿ ಹೊಡೆತ ನೀಡಲು ಆರಂಭಿಸಿದ ಭಾರತ ಈಗ ಚೀನಾದಿಂದ ಟಿವಿ ಆಮದು ಮಾಡುವುದಕ್ಕೆ ನಿರ್ಬಂಧ ಹೇರಿದೆ.

ವಿದೇಶ ವ್ಯಾಪಾರದ ಮಹಾನಿರ್ದೇಶನಾಲಯ(ಡಿಜಿಎಫ್‌ಟಿ) ಗುರುವಾರ ಈ ಆದೇಶ ಹೊರಡಿಸಿ ಟಿವಿ ಸೆಟ್‌ಗಳ ಆಮದನ್ನು ʼಮುಕ್ತʼ ವಿಭಾಗದಿಂದ ʼನಿರ್ಬಂಧಿತʼ ವಿಭಾಗಕ್ಕೆ ಸೇರಿಸಿದೆ.

ಈ ಆದೇಶದ ಪ್ರಕಾರ ಇನ್ನು ಮುಂದೆ 36 ಸೆಂ.ಮೀ ಒಳಗಿನ ಸ್ಕ್ರೀನ್‌ನಿಂದ ಆರಂಭಿಸಿ 105 ಸೆಂ.ಮೀಗಿಂತ ದೊಡ್ಡ ಅಳತೆಯಿ ಟಿವಿ ಸೆಟ್‌ಗಳ ಆಮದಿಗೆ ನಿರ್ಬಂಧ ಹೇರಲಾಗಿದೆ. ಇದರ ಜೊತೆ 63 ಸೆಂ.ಮೀ ವರೆಗಿನ ಎಲ್‌ಸಿಡಿ ಟಿವಿ ಸೆಟ್‌ಗಳನ್ನು ಆಮದು ಮಾಡುವಂತಿಲ್ಲ.

ಇನ್ನು ಮುಂದೆ ಟಿವಿಯನ್ನು ನಿರ್ಬಂಧಿತ ವಿಭಾಗದಲ್ಲಿದ್ದು, ಟೀವಿಯನ್ನು ಆಮದು ಮಾಡಬೇಕಾದರೆ ಡೀಲರ್‌ಗಳು ಡಿಜಿಎಫ್‌ಟಿಯಿಂದ ಲೈಸೆನ್ಸ್‌ ಪಡೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದಲ್ಲಿ ಅತಿ ದೊಡ್ಡ ಟಿವಿ ಮಾರುಕಟ್ಟೆಯಿದ್ದು ಈ ಪೈಕಿ ಶೇ.36ರಷ್ಟು ಚೀನಾದಿಂದ ಆಮದು ಆಗುತ್ತಿದೆ. ಚೀನಾ ಅಲ್ಲದೇ ವಿಯೆಟ್ನಾಂ, ಮಲೇಷ್ಯಾ, ಹಾಂಕಾಂಗ್‌, ಕೊರಿಯಾ, ಇಂಡೋನೇಷ್ಯಾ, ಥಾಯ್ಲೆಂಡ್‌ ಮತ್ತು ಜರ್ಮನಿಯಿಂದ ಕಲರ್‌ ಟೀವಿಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಸರ್ಕಾರದ ಈ ನಡಗೆ ಗೋಡ್ರೆಜ್‌ ಕಂಪನಿಯ ಬಿಸಿನೆಸ್‌ ಹೆಡ್‌ ಮತ್ತು ಉಪಾಧ್ಯಕ್ಷ ಕಮಲ್‌ ನಂದಿ ಪ್ರತಿಕ್ರಿಯಿಸಿ, ಸರ್ಕಾರ ದಿಟ್ಟ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆಮದಿನ ಮೇಲೆ ನಿರ್ಬಂಧ ಹೇರಿದ್ದರಿಂದ ಭಾರತೀಯ ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಬಹುತೇಕ ದೊಡ್ಡ ಬ್ರಾಂಡ್‌ಗಳು ಭಾರತದಲ್ಲೇ ಉತ್ಪಾದನಾ ಘಟಕವನ್ನು ಹೊಂದಿದೆ. ಈ ನಿರ್ಧಾರದಿಂದ ಸ್ಥಳೀಯ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

ಮಾರ್ಚ್‌ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 781 ದಶಲಕ್ಷ ಡಾಲರ್‌ ಮೌಲ್ಯದ ಟಿವಿ ಸೆಟ್‌ಗಳನ್ನು ಆಮದು ಮಾಡಿದೆ. ಈ ಪೈಕಿ ವಿಯೆಟ್ನಾಂನಿಂದ 428 ದಶಲಕ್ಷ ಡಾಲರ್‌, ಚೀನಾದಿಂದ 292 ದಶಲಕ್ಷ ಡಾಲರ್‌ ಮೌಲ್ಯದ ಟೀವಿಗಳನ್ನು ಆಮದು ಮಾಡಿಕೊಂಡಿದೆ.

ಭಾರತದ ಎಲೆಕ್ಟ್ರಾನಿಕ್ಸ್‌ ಉತ್ಪಾದನೆ 2014ರಲ್ಲಿ 29 ಶತಕೋಟಿ ಡಾಲರ್‌ ಆಗಿದ್ದರೆ 2019ರಲ್ಲಿ ಇದು 70 ಶತಕೋಟಿ ಡಾಲರ್‌ಗೆ ಬೆಳವಣಿಗೆಯಾಗಿದೆ.

ಟಿವಿಗಳಲ್ಲಿ ಬಳಕೆಯಾಗುತ್ತಿರುವ ವಿಶೇಷ ಭಾಗಗಳಾದ ಓಪನ್‌ ಸೆಲ್‌, ಫಿಲ್ಮ್‌ ಚಿಪ್‌, ಪ್ರಿಂಟೆಡ್‌ ಸರ್ಕ್ಯೂಟ್‌ ಬೋರ್ಡ್‌ ಅಸೆಂಬ್ಲಿ(ಪಿಸಿಬಿಎ) ಈಗಲೂ ವಿನಾಯಿತಿ ನೀಡಲಾಗಿದೆ.

ಏಷ್ಯಾ ರಾಷ್ಟ್ರಗಳ ಜೊತೆಗಿನ ವ್ಯಾಪಾರ ಸಂಬಂಧ ಯುಪಿಎ ಸರ್ಕಾರ 2009ರಲ್ಲಿ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್‌, ಮಲೇಷ್ಯಾ, ಮ್ಯಾನ್ಮಾರ್‌, ಫಿಲಿಪೈನ್ಸ್‌, ಸಿಂಗಾಪೂರ, ಥಾಯ್ಲೆಂಡ್‌ ಮತ್ತು ವಿಯೆಟ್ನಾಂ ದೇಶಗಳಿಂದ ಆಮದು ಆಗುವ ವಸ್ತುಗಳ ಮೇಲೆ ವಿನಾಯಿತಿ ನೀಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *