ಮತ್ತೊಂದು ಬಿಗ್ ಇಂಪ್ಯಾಕ್ಟ್- ಆನ್‍ಲೈನ್ ಕ್ಲಾಸ್ ಹೆಸ್ರಲ್ಲಿ ಫೀಸ್ ತಗೊಳೋ ಹಾಗಿಲ್ಲ

Public TV
3 Min Read

– ಮಾನವೀಯತೆ ದೃಷ್ಟಿಯಿಂದ ಅರ್ಧ ಫೀಸ್ ಮಾತ್ರ ತಗೆದುಕೊಳ್ಳಿ
– ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತೆ
– ಪ್ರತಿಯೊಬ್ಬ ವಿದ್ಯಾರ್ಥಿಗೆ ಮಾಸ್ಕ್

ಬೆಂಗಳೂರು: ಆನ್‍ಲೈನ್ ಕ್ಲಾಸ್ ಹೆಸರಿನಲ್ಲಿ ಹೆಚ್ಚು ಶುಲ್ಕ ತೆಗೆದುಕೊಳ್ಳುವ ಹಾಗಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಕೆಲ ಖಾಸಗಿ ಶಾಲೆಗಳು ಆನ್‍ಲೈನ್ ಕ್ಲಾಸ್ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಮೊಬೈಲ್ ಶಾಲೆಗೆ ಬ್ರೇಕ್, 1ರಿಂದ 5ನೇ ತರಗತಿಯ ಆನ್‍ಲೈನ್ ಕ್ಲಾಸ್ ರದ್ದು

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಆನ್‍ಲೈನ್ ತರಗತಿ ಬಗ್ಗೆ ಚರ್ಚೆ ಆಗುತ್ತಿದೆ. ಈ ವಿಚಾರಕ್ಕೆ ಸಾಕಷ್ಟು ದೂರುಗಳು ಬಂದಿದ್ದು, ಮಕ್ಕಳಿಗೆ ವಿವೇಚನ ರಹಿತವಾಗಿ ತರಗತಿ ಮಾಡಲಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಜೂನ್ 2ರಂದು ಈ ಕುರಿತು ಸಭೆ ಮಾಡಿದ್ವಿ. ಆದರೆ ಸಭೆ ಅಪೂರ್ಣವಾಗಿತ್ತು. ಇವತ್ತು ಕೂಡ ಸಭೆ ಮಾಡಿದ್ದೇವೆ ಎಂದು ತಿಳಿಸಿದರು.

ಸಭೆಯಲ್ಲಿ ಜ್ಞಾನ ಆಯೋಗದ ಸದಸ್ಯರಾದ ಪ್ರೊ.ಶ್ರೀಧರ್, ಶಿಕ್ಷಣ ತಜ್ಞರು, ಚಿಂತಕ ಗುರುರಾಜ ಕರ್ಜಗಿ, ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಹೃಷಿಕೇಶ್, ನಿಮ್ಹಾನ್ಸ್ ನ ಪ್ರೊ. ಡಾ.ಜಾನ್ ವಿಜಯ್ ಸಾಗರ್, ಅರ್ಲಿ ಚೈಲ್ ಹುಡ್ ಅಸೋಸಿಯೇಷನ್ ಪ್ರತಿನಿಧಿ ಸೇರಿ ಹಲವರು ಇದ್ದರು. ಎಲ್ಲರ ಅನಿಸಿಕೆ ಆನ್‍ಲೈನ್ ಕ್ಲಾಸ್ ತರಗತಿ ಕಲಿಕೆ ಪರ್ಯಾಯ ಅಲ್ಲ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನ ಕಲಿಕೆಯಲ್ಲಿ ತೊಡಗಿಸುವುದು ಹೇಗೆ ಅಂತ ಚರ್ಚೆ ಆಗಿದೆ. ಪಠ್ಯಕ್ರಮ ಮುಗಿಸಲು ಪಾಠ ಆಗಬಾರದು. ಬದಲಾಗಿ ಜ್ಞಾನಾರ್ಜನೆಗೆ ಪಾಠ ಆಗಬೇಕು ಎನ್ನುವ ಅಭಿಪ್ರಾಯ ಬಂದಿದೆ ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಎರಡು ಪ್ರಮುಖ ನಿರ್ಧಾರ ಕೈಗೊಂಡಿದ್ದೇವೆ. ಮೊದಲು ಎಲ್‍ಕೆಜಿ, ಯುಕೆಜಿಗೆ ಆನ್‍ಲೈನ್ ರದ್ದುಗೊಳಿಸುವುದು ಹಾಗೂ 1ರಿಂದ 5ನೇ ತರಗತಿಗಳೂ ಆನ್‍ಲೈನ್ ಕ್ಲಾಸ್ ನಿಲ್ಲಿಸಬೇಕು. ಮತ್ತೊಂದು ಪ್ರಮುಖ ನಿರ್ಧಾರವೆಂದರೆ ಆನ್‍ಲೈನ್ ಹೆಸರಲ್ಲಿ ಫೀಸ್ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಅಷ್ಟೇ ಅಲ್ಲದೆ ಯಾರು ಕೂಡ ಈ ವರ್ಷದ ಫೀಸ್ ಹೆಚ್ಚಳ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ.

ಶಾಲೆಗಳು ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಮಾನವೀಯತೆ ದೃಷ್ಟಿಯಿಂದ ಬೇಕಾದರೆ ಅರ್ಧದಷ್ಟು ಫೀಸ್ ತಗೆದುಕೊಳ್ಳಬಹುದು. ಆದರೆ ಆನ್‍ಲೈನ್ ಹೆಸರಿನಲ್ಲಿ ಫೀಸ್ ತಗೆದುಕೊಳ್ಳುವಂತಿಲ್ಲ ಎಂದು ತಿಳಿಸಿದರು.

ಪರೀಕ್ಷೆ:
ಎಸ್‍ಎಸ್‍ಎಲ್‍ಸಿ ಜೂನ್ 25ರಿಂದ ಪರೀಕ್ಷೆಗಳು ನಡೆಯುತ್ತವೆ. ವಿಶೇಷ ಸನಿವೇಶದಲ್ಲಿ ಪರೀಕ್ಷೆ ನಡೆಸಬೇಕಿದ್ದು, ರಾಜ್ಯದ ಪ್ರಮುಖರ ಅಭಿಪ್ರಾಯ ಪಡೆದಿದ್ದೇನೆ. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಗೆ ತೆರಳಿ ಸಭೆ ಮಾಡಿದ್ದೇನೆ ಎಂದು ತಿಳಿಸಿದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಸಂಬಂಧ ಚರ್ಚೆಗಾಗಿ ಸುಮಾರು 4 ಸಾವಿರ ಕಿ.ಮೀ ಸಂಚಾರ ಮಾಡಿದ್ದೇನೆ. ಮೈಕ್ರೋ ಲೆವಲ್ ಪ್ಲಾನಿಂಗ್ ಮಾಡಿದ್ದೇವೆ. ಸಾರಿಗೆ, ಆರೋಗ್ಯ, ಗೃಹ ಇಲಾಖೆ ಕೈಜೋಡಿಸುತ್ತಿದೆ. ರಾಜ್ಯದ ಎಲ್ಲಾ ಶಾಸಕರು, ಜಿಲ್ಲಾ ಪಂಚಾಯತ ಸದಸ್ಯರು ಪರೀಕ್ಷೆ ನಡೆಯಬೇಕು ಅಂತ ಸಹಕಾರ ನೀಡಿದ್ದಾರೆ. ಪ್ರತಿಯೊಬ್ಬರಿಗೆ 2-3 ಮಾಸ್ಕ್ ನಂತೆ 8.5 ಲಕ್ಷ ಮಕ್ಕಳಿಗೆ ಮಾಸ್ಕ್ ಕೊಡುತ್ತೇವೆ. ಇದಕ್ಕೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮಾಸ್ಕ್ ಸಹಕಾರ ನೀಡಿದೆ ಎಂದು ಮಾಹಿತಿ ನೀಡಿದರು.

ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಅನಾರೋಗ್ಯ ಕಂಡು ಬಂದರೆ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಪರೀಕ್ಷೆ ಬರೆಸುತ್ತೇವೆ. ಸಾರಿಗೆ ವ್ಯವಸ್ಥೆಗೆ ಅಗತ್ಯ ಕ್ರಮ ವಹಿಸಿದ್ದೇವೆ. ಖಾಸಗಿ ಶಾಲೆಗಳ ವಾಹನಗಳನ್ನ ಬಳಸಿಕೊಳ್ಳಲಾಗುತ್ತದೆ. ಎಲ್ಲರೂ ಪರೀಕ್ಷೆ ನಡೆಸಲು ಸಹಕಾರ ಮಾಡಬೇಕು ಎಂದು ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *