ಮತ್ತೆ ಲಾಕ್‌ಡೌನ್‌ ಜಾರಿಯಾಗದಿರಲು ಕಟ್ಟುನಿಟ್ಟಾಗಿ ಕೊರೊನಾ ನಿಯಮ ಪಾಲಿಸಿ – ಬಿಎಸ್‌ವೈ ಎಚ್ಚರಿಕೆ

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಯಾಗದಿರಲು ಜನರು ಕಟ್ಟು ನಿಟ್ಟಿನ ಕೊರೊನಾ ನಿಯಮಗಳನ್ನು ಪಾಲಿಸಬೇಕು ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಸಿಎಂ ಯಡಿಯೂರಪ್ಪ ತಜ್ಞರ ಜೊತೆ ಸಭೆ ನಡೆಸಿದರು.

ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 14 ದಿನಗಳಲ್ಲಿ ಪಾಸಿಟಿವ್ ಕೇಸ್ ಹೆಚ್ಚಳವಾಗಿದ್ದು ಮರಣ ಪ್ರಮಾಣ ಕಡಿಮೆಯಾಗಿದೆ. ಬೀದರ್, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು ನಗರದಲ್ಲಿ ಪಾಸಿಟಿವ್ ಕೇಸ್ ಹೆಚ್ಚಳವಾಗಿದ್ದು ಇದು ಕೊರೊನಾ 2ನೇ ಅಲೆಯ ಮುನ್ಸೂಚನೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಲಸಿಕೆ ಪ್ರಮಾಣ ಹೆಚ್ಚಿಸಬೇಕೆಂದು ಅವರು ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.

ಅಪಾರ್ಟ್‍ಮೆಂಟ್‍ಗಳಲ್ಲಿ ಲಸಿಕೆ ಹಾಕುವುದನ್ನು ಹೆಚ್ಚಿಸಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತದಾರ ಪಟ್ಟಿ ಆಧರಿಸಿ, ಹಿರಿಯ ನಾಗರಿಕರನ್ನು ಗುರುತಿಸಿ ಲಸಿಕೆ ಹಾಕಿಸಬೇಕು.  ಮಹಾರಾಷ್ಟ್ರ, ಕೇರಳದಿಂದ ಬರುವವರ ಮೇಲೆ ನಿಗಾ ಇಡುವ ಬಗ್ಗೆ ತಜ್ಷರಿಂದ ಸಲಹೆ ಬಂದಿದೆ ಎಂದರು.

ಮಾ.17 ರಂದು ಪ್ರಧಾನಿ ನರೇಂದ್ರ ಮೋದಿ ಕೋವಿಡ್‌ ನಿಯಂತ್ರಣ ವಿಚಾರವಾಗಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯ ನಂತರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದ್ದು, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಬೇಕು. ಇದನ್ನು ಉಲ್ಲಂಘಿಸಿದರೆ ದಂಡ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಮದುವೆ, ಸಮಾರಂಭ, ಧಾರ್ಮಿಕ ಸಮಾರಂಭ 500 ಜನಕ್ಕೆ ಸೀಮಿತ ಮಾಡಿದ್ದು ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಂಪರ್ಕಿತರ ಪತ್ತೆ ಕಾರ್ಯ ಚುರುಕು ಮಾಡಿ ಕೋವಿಡ್ ಕೇರ್ ಸ್ಥಾಪನೆಗೆ ಸಿದ್ಧತೆ ಮಾಡುತ್ತೇವೆ. ಈ ಹಿಂದಿನಂತೆ ಖಾಸಗಿ ಆಸ್ಪತ್ರೆಗಳೊಂದಿಗೆ ಮಾತುಕತೆ ಮಾಡುತ್ತೇವೆ. ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುತ್ತೇವೆ ಎಂದು ಸಿಎಂ ಬಿಎಸ್‌ವೈ ಈ ವೇಳೆ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *