ಮತ್ತೆ ಮೈಸೂರು ಮೇಯರ್ ಎಲೆಕ್ಷನ್ ಫಿಕ್ಸ್- ಅವತ್ತು ಯಾಮಾರಿದ್ದ ಸಿದ್ದು, ಈ ಬಾರಿ ಪ್ರತಿಷ್ಠೆ ಉಳಿಸಿಕೊಳ್ತಾರಾ?

Public TV
1 Min Read

ಮೈಸೂರು: ಮಹಾನಗರಪಾಲಿಕೆ ಮೇಯರ್ ರುಕ್ಮಿಣಿ ಮಾದೇಗೌಡರ ಪಾಲಿಕೆ ಸದಸ್ಯತ್ವವನ್ನು ಹೈಕೋರ್ಟ್ ರದ್ದು ಮಾಡಿದ ಹಿನ್ನೆಲೆಯಲ್ಲಿ ಈಗ ಮತ್ತೆ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಚರ್ಚೆ ಮುನ್ನೆಲೆಗೆ ಬಂದಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಮೂರು ತಿಂಗಳ ಹಿಂದೆ ಮೈಸೂರು ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡ ಮಹಾನಗರ ಪಾಲಿಕೆಯ ಚುನಾವಣೆ ವೇಳೆ ಸೂಕ್ತ ಆದಾಯ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರ ಪಾಲಿಕೆ ಸದಸ್ಯತ್ವ ರದ್ದು ಮಾಡಿದ್ದು, ಈಗ ಮೇಯರ್ ಸ್ಥಾನ ಕಳೆದುಕೊಳ್ಳುವಂತಾಗಿದೆ.

ಹೈಕೋರ್ಟ್ ಆದೇಶ ಪ್ರಶ್ನಿಸಿ ರುಕ್ಮಿಣಿ ಮಾದೇಗೌಡ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕುವ ಸಾಧ್ಯತೆ ಇದ್ದರೂ, ಸುಪ್ರೀಂ ಕೋರ್ಟ್ ನಿಂದ ಹೈ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಸಿಗುವವರೆಗೂ ಮೇಯರ್ ಸ್ಥಾನ ಉಳಿಯುವ ಸಾಧ್ಯತೆ ಕಡಮೆ ಇದೆ. ಹೀಗಾಗಿ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ವಿಚಾರ ಗರಿಗೆದರಿದೆ.

ಈ ಚುನಾವಣೆ ಕಳೆದ ಬಾರಿ ಇಡೀ ರಾಜ್ಯದ ಗಮನ ಸೆಳೆದಿತ್ತು. ಜೆಡಿಎಸ್ ಜೊತೆ ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ಅಕ್ಷರಶಃ ಒಡೆದ ಮನೆಯಾಗಿತ್ತು. ಕಾಂಗ್ರೆಸ್ ಗೆ ಮೇಯರ್ ಸ್ಥಾನ ಬೇಕೆಂದು ಪಟ್ಟು ಹಿಡಿದಿದ್ದ ಸಿದ್ದರಾಮಯ್ಯನವರಿಗೆ ಕೊನೆ ಕ್ಷಣದಲ್ಲಿ ನಡೆದ ಟ್ವಿಸ್ಟ್‍ನಲ್ಲಿ ಜೆಡಿಎಸ್ ಗೆ ಮೇಯರ್ ಸ್ಥಾನ ಸಿಕ್ಕ ಕಾರಣ ತೀವ್ರ ಅಸಮಾಧಾನಕ್ಕೆ ಒಳಗಾಗಿದ್ದರು. ಇದೀಗ ಮೂರೆ ತಿಂಗಳಲ್ಲಿ ಸದಸ್ಯತ್ವ ಕಳೆದುಕೊಂಡಿರುವ ರುಕ್ಮಿಣಿ ಮಾದೇಗೌಡಗೆ ಮೇಯರ್ ಸ್ಥಾನ ಕಳೆದುಕೊಳ್ಳುವ ಆತಂಕವಿದೆ.

ರುಕ್ಮಿಣಿ ಮಾದೇಗೌಡ ಮೇಯರ್ ಸ್ಥಾನದಿಂದ ಕೆಳಗೆ ಇಳಿದ ಕೂಡಲೇ ಮತ್ತೆ ಚುನಾವಣೆ ನಡೆಸಬೇಕು. ಆಗ ಯಾರ ಜೊತೆ ಯಾರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದು ಮುಖ್ಯ. ಕಾಂಗ್ರೆಸ್ ಈ ಬಾರಿ ಮೇಯರ್ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ಸಾಧ್ಯತೆ ಬಹಳ ಕಡಮೆ. ಹೀಗಾಗಿ ಜೆಡಿಎಸ್, ಬಿಜೆಪಿ ಜೊತೆ ಸಖ್ಯ ಬೆಳೆಸುತ್ತಾ ಎಂಬ ಚರ್ಚೆ ಶುರುವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *