ಮಣಿಪಾಲ ಆಸ್ಪತ್ರೆಯಲ್ಲಿ ಶಿರಾ ಶಾಸಕ ಸತ್ಯನಾರಾಯಣ ವಿಧಿವಶ

Public TV
1 Min Read

ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಶಿರಾ ಶಾಸಕ ಸತ್ಯನಾರಾಯಣ (69) ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಶಾಸಕ ಸತ್ಯನಾರಾಯಣ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ರಾತ್ರಿ 10.45ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಸತ್ಯನಾರಾಯಣ ಅವರು ನಾನ್ ಕೋವಿಡ್ ಆಗಿದ್ದು, ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ಬಂದಿದೆ. ಇವರಿಗೆ ಅನೇಕ ವರ್ಷಗಳಿಂದ ಲಿವರ್ ಸಮಸ್ಯೆ ಇತ್ತು ಎಂದು ತಿಳಿದುಬಂದಿದೆ.

ಶಾಸಕ ಸತ್ಯನಾರಾಯಣ ಅವರು ನಾಲ್ಕು ಬಾರಿ ಶಿರಾದಲ್ಲಿ ಶಾಸಕರಾಗಿದ್ದು, ಎರಡು ಬಾರಿ ಸಚಿವರಾಗಿದ್ದರು. ಸಣ್ಣ ಕೈಗಾರಿಕಾ, ನೀರಾವರಿ ಮತ್ತು ಲಾಟರಿ ಸಚಿವರಾಗಿದ್ದರು. ಸತ್ಯನಾರಾಯಣ ಅವರು ಮೂಲತಃ ಶಿರಾದ ಭುವನಹಳ್ಳಿ ಗ್ರಾಮದವರಾಗಿದ್ದು, ವಕೀಲರಾಗಿದ್ದರು. ಇವರು ಓರ್ವ ಪುತ್ರ ಮತ್ತು ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ಸತ್ಯನಾರಾಯಣ ನಿಧನ ಬಗ್ಗೆ ಸಂತಾಪ ಸೂಚಿಸಿದ್ದಾರೆ. “ಮಾಜಿ ಸಚಿವರು ಮತ್ತು ಶಾಸಕರು ಹಾಗೂ ನನ್ನ ಸನ್ಮಿತ್ರರು ಆದ ಶ್ರೀ ಬಿ. ಸತ್ಯನಾರಾಯಣ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಸತ್ಯನಾರಾಯಣ್ ಮತ್ತು ನನ್ನ ಸ್ನೇಹ ಸುಮಾರು 3 ದಶಕಗಳದ್ದು ಅವರಿಲ್ಲದ ದಿನಗಳನ್ನು ನೆನೆಯಲು ನನ್ನಿಂದ ಸಾಧ್ಯವೇ ಇಲ್ಲ” ಎಂದು ನೆನಪಿಸಿಕೊಂಡಿದ್ದಾರೆ.

ಸತ್ಯನಾರಾಯಣ್ ಅವರು ತುಂಬಾ ಮೃದು ಸ್ವಭಾವದವರು ಅವರ ಅಗಲಿಕೆಯಿಂದ ನಮ್ಮ ನಾಡಿಗೆ ತುಂಬಲಾಗದ ನಷ್ಟ ಉಂಟಾಗಿದೆ. ಮೃತರ ಆತ್ಮಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *