ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ ಬಯಲಿಗೆ

Public TV
3 Min Read

ಮಡಿಕೇರಿ: ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಫೋನ್ ಕಳ್ಳತನವಾಗಿದ್ದ ಪ್ರಕರಣ ಕಣ್ಮುಂದೆ ಇರುವಾಗಲೇ, ಮೃತ ವೃದ್ಧೆಯ ಚಿನ್ನದ ತಾಳಿಯ ಸರವನ್ನೇ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೋವಿಡ್ ನಿಂದ ಮೃತಪಟ್ಟ ಕಮಲ ಎಂಬ ವೃದ್ಧೆಯ ಅಂದಾಜು ಒಂದುವರೆ ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರವನ್ನೇ ದಾದಿಯರು ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ರಸೂಲ್ ಪುರ ಗ್ರಾಮದ ಕಮಲಾ ಅವರನ್ನ ಮೇ 1 ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ಸಾಮಾನ್ಯ ವಾರ್ಡಿನಲ್ಲೇ ದಾಖಲಾಗಿದ್ದ ಕಮಲ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದರಿಂದ, ಮೇ 2 ರಂದು ಐಸಿಯು ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ದಾದಿಯರು ಕಮಲ ಅವರ ಕೊರಳಿನಲ್ಲಿದ್ದ ಚಿನ್ನದ ತಾಳಿ ಸರವನ್ನು ತೆಗೆದುಕೊಂಡಿದ್ದರು. ಐಸಿಯು ವಾರ್ಡಿನಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದ ವೃದ್ಧೆ ಕಮಲ ತನ್ನ ಮಗ ಮೊಣ್ಣಪ್ಪ ಅವರಿಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದ್ದರು.

ಇದಾದ ಕೆಲವೇ ದಿನಗಳಲ್ಲಿ ಅಂದರೆ ಮೇ 19 ರಂದು ಕೋವಿಡ್ ಆಸ್ಪತ್ರೆಯಲ್ಲೇ ವೃದ್ಧೆ ಕಮಲ ಮೃತಪಟ್ಟಿದ್ದರು. 20 ರಂದು ಅಂತ್ಯಕ್ರಿಯೆ ನೆರವೇರಿಸಿದ ಮೊಣ್ಣಪ್ಪ 21 ರಂದು ಮಡಿಕೇರಿ ಆಸ್ಪತ್ರೆಗೆ ಬಂದು ತನ್ನ ತಾಯಿಯ ವಸ್ತುಗಳನ್ನು ಕೇಳಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಕೇವಲ ಬ್ಯಾಗನ್ನು ಮಾತ್ರ ನೀಡಿದರು. ತನ್ನ ತಾಯಿಯ ಚಿನ್ನದ ಸರವನ್ನು ಕೊಟ್ಟಿಲ್ಲ ಎಂದು ಮೊಣ್ಣಪ್ಪ ಕೋವಿಡ್ ಆಸ್ಪತ್ರೆ ಡೀನ್ ಮತ್ತು ಮಡಿಕೇರಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ನಮ್ಮ ಸಂಪ್ರದಾಯದ ಪ್ರಕಾರ ಗಂಡ ಇರುವಾಗಲೇ ಹೆಂಡತಿ ಕೊರಳಿನಿಂದ ತಾಳಿಯನ್ನು ತೆಗೆಯುವುದಿಲ್ಲ. ಹೀಗಾಗಿ ತಾಯಿಯನ್ನು ಆಸ್ಪತ್ರೆಗೆ ಕಳುಹಿಸುವಾಗ ಚೈನ್ ತೆಗೆಯದೆ ಆಸ್ಪತ್ರೆಗೆ ಕಳುಹಿಸಿದೆವು. ಆದರೆ ಈಗ ತಾಯಿಯ ಚಿನ್ನದ ತಾಳಿಯ ಸರವನ್ನೇ ಕೊಟ್ಟಿಲ್ಲ. ಈಗ ಧಾರ್ಮಿಕ ಕಾರ್ಯಗಳನ್ನು ಮಾಡಲು ತಾಳಿ ಬೇಕಾಗಿದೆ. ಅದನ್ನು ದಯಮಾಡಿ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ. ಇದನ್ನೂ ಓದಿ: ತಾಯಿ ನೆನಪುಗಳು ಇರುವ ಮೊಬೈಲ್ ಫೋನ್ ಹಿಂದಿರುಗಿಸಿ-ಪುಟ್ಟ ಬಾಲಕಿಯ ಮನವಿ

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ. ಆಸ್ಪತ್ರೆಯಲ್ಲಿ ಈ ರೀತಿ ಆಗಬಾರದಿತ್ತು. ಇದು ಅತ್ಯಂತ ಅಮಾನವೀಯ ಘಟನೆ. ಈ ಕುರಿತು ಈಗಾಗಲೇ ಆಸ್ಪತ್ರೆಯಲ್ಲಿ ತನಿಖೆ ನಡೆಯುತ್ತಿದೆ. ಎಲ್ಲಾ ವಾರ್ಡುಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ. ಒಟ್ಟಿನಲ್ಲಿ ಕೊವಿಡ್ ನಿಂದ ಮೃತಪಟ್ಟವರ ಬೆಲೆ ಬಾಳುವ ವಸ್ತುಗಳು ಕೊವಿಡ್ ಆಸ್ಪತ್ರೆಯಲ್ಲಿ ನಾಪತ್ತೆಯಾಗುತ್ತಿರುವುದು ಎಲ್ಲರೂ ತಲೆತಗ್ಗಿಸುವಂತೆ ಆಗಿದೆ.

ಕೊಡಗಿನಲ್ಲಿ ನಿಯಂತ್ರಣಕ್ಕೆ ಬಾರದ ಸಾವಿನ ಪ್ರಮಾಣ
ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಕೊಂಚ ಪರಿಣಾಮ ಬೀರಿದ್ದು, ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ ಸಾವಿನ ಪ್ರಮಾಣ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ 24 ಗಂಟೆಗಳ ಅವಧಿಯಲ್ಲಿ (ಇಂದು ಬೆಳಗ್ಗೆ 8 ಗಂಟೆಯವರೆಗೆ) 10 ಸಾವು ಸಂಭವಿಸಿದ್ದು, ಇಲ್ಲಿಯವರೆಗೆ ಒಟ್ಟು 295 ಮರಣ ಪ್ರಕರಣಗಳು ವರದಿಯಾಗಿದೆ.

ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ 264 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. 246 ಆರ್.ಟಿ.ಪಿ.ಸಿ.ಆರ್ ಮತ್ತು 18 ಪ್ರಕರಣಗಳು ರಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ 57, ಸೋಮವಾರಪೇಟೆ ತಾಲೂಕಿನಲ್ಲಿ 118 ಹಾಗೂ ವಿರಾಜಪೇಟೆ ತಾಲೂಕಿನಲ್ಲಿ 89 ಹೊಸ ಕೋವಿಡ್-19 ಪ್ರಕರಣಗಳು ಕಂಡು ಬಂದಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 22,732 ಆಗಿದ್ದು, ಪ್ರಸ್ತುತ 2676 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ 452 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇಲ್ಲಿಯವರೆಗೆ ಒಟ್ಟು 19,761 ಮಂದಿ ಗುಣಮುಖರಾಗಿದ್ದಾರೆ. ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 394 ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *