ಮಗಳ ಮದುವೆಗೆ ಸ್ಕ್ಯಾನಿಯಾದಿಂದ ಬಸ್‌ ಗಿಫ್ಟ್‌ – ಇದೊಂದು ದುರುದ್ದೇಶಪೂರಿತ ಕಟ್ಟು ಕಥೆ ಎಂದ ಗಡ್ಕರಿ

Public TV
2 Min Read

ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರ ಕುರಿತ ವರದಿ, ದುರುದ್ದೇಶಪೂರಿತ, ಕಟ್ಟುಕಥೆ ಮತ್ತು ಆಧಾರರಹಿತ ಎಂದು ನಿತಿನ್‌ ಗಡ್ಕರಿ ಅವರ ಕಚೇರಿ ಹೇಳಿದೆ.

ಟ್ರಕ್ ಮತ್ತು ಬಸ್ ತಯಾರಕ ಸ್ಕ್ಯಾನಿಯಾ ಕಂಪನಿ 2016 ರಲ್ಲಿ ಗಡ್ಕರಿ ಮಗಳ ವಿವಾಹಕ್ಕೆ ಐಷಾರಾಮಿ ಬಸ್ಸು ನೀಡಿತ್ತು. ಆದರೆ ಈ ಬಸ್ಸುಗಳ ಖರೀದಿ ಸಂಬಂಧ ಬಿಲ್‌ ಪಾವತಿಸಿಲ್ಲ ಎಂದು ಅಂತರಾಷ್ಟ್ರೀಯ ಮಾಧ್ಯಮಗಳ ವರದಿಗೆ ಗಡ್ಕರಿ ಕಚೇರಿ ಪ್ರತಿಕ್ರಿಯಿಸಿದೆ.

“ನವೆಂಬರ್ 2016 ರಲ್ಲಿ, ಗಡ್ಕರಿಯ ಪುತ್ರರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಕಂಪನಿಗೆ ಸ್ಕ್ಯಾನಿಯಾ ಐಷಾರಾಮಿ ಬಸ್ ವಿತರಿಸಿದೆ ಎಂದು ಮಾಧ್ಯಮಗಳು ಆರೋಪಿಸಿವೆ. ಇದು ದುರುದ್ದೇಶಪೂರಿತ, ಕಟ್ಟುಕಥೆ ಮತ್ತು ಆಧಾರರಹಿತ” ಎಂದು ಹೇಳಿಕೆ ನೀಡಿದೆ.

ಆರೋಪ ಏನು?
ರಾಯಿಟರ್ಸ್ ಸುದ್ದಿ ಸಂಸ್ಥೆ ಸ್ವೀಡಿಷ್ ಮಾಧ್ಯಮ ವರದಿಯನ್ನು ಉಲ್ಲೇಖಿಸಿ, ಸ್ಕ್ಯಾನಿಯಾ ಕಂಪನಿ ಗಡ್ಕರಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ವಿಶೇಷವಾಗಿ ವಿನ್ಯಾಸ ಮಾಡಿದ ಐಷಾರಾಮಿ ಬಸ್ಸನ್ನು ಗಡ್ಕರಿ ಅವರ ಮಗಳ ಮದುವೆಗೆ ಉಡುಗೊರೆಯಾಗಿ ನೀಡಿತ್ತು. ಭಾರತದಲ್ಲಿ ಕಂಪನಿಗೆ ಅವಕಾಶ ಸಿಗಲು ಈ ಉಡುಗೊರೆಯನ್ನು ನೀಡಲಾಗಿತ್ತು. 2017ರಲ್ಲಿ ಸ್ಕ್ಯಾನಿಯಾ ಲೆಕ್ಕ ಪರಿಶೋಧಕರರಿಗೆ ಇದರ ಬಗ್ಗೆ ಮಾಹಿತಿ ಸಿಕ್ಕಿತ್ತು ಎಂದು ವರದಿಯಾಗಿತ್ತು.

ಈ ಆರೋಪಗಳನ್ನು ನಿರಾಕರಿಸಿದ ಗಡ್ಕರಿ ಅವರ ಕಚೇರಿ,” ಬಸ್ ಖರೀದಿ ಅಥವಾ ಮಾರಾಟಕ್ಕೆ ಸಂಬಂಧಿಸಿದಂತೆ ಸಚಿವರು ಮತ್ತು ಅವರ ಕುಟುಂಬ ಸದಸ್ಯರಿಗೆ ಯಾವುದೇ ಸಂಬಂಧವಿಲ್ಲ. ಸ್ಕ್ಯಾನಿಯಾ ಬಸ್‌ನ ಸಂಪೂರ್ಣ ಪ್ರಕರಣ ಸ್ವೀಡಿಷ್ ಕಂಪನಿಯ ಆಂತರಿಕ ವ್ಯವಹಾರವಾಗಿರುವುದರಿಂದ, ಈ ವಿಷಯವನ್ನು ನಿರ್ವಹಿಸಿದ ಸ್ಕ್ಯಾನಿಯಾ ಇಂಡಿಯಾದ ಅಧಿಕೃತ ಹೇಳಿಕೆಗಾಗಿ ಮಾಧ್ಯಮಗಳು ಕಾಯುವುದು ಉತ್ತಮ” ಎಂದು ಹೇಳಿದೆ.

 ಮಾಧ್ಯಮಗಳು ಸ್ಕ್ಯಾನಿಯಾ ಕಂಪನಿಯನ್ನು ಸಂರ್ಪಕಿಸಿದ್ದು, ಬಸ್ಸುಗಳನ್ನು ಬೆಂಗಳೂರು ಮೂಲದ ಡೀಲರ್‌ ಟ್ರಾನ್ಸ್‌ಪ್ರೋ ಮೋಟಾರ್ಸ್‌ ಮೂಲಕ ಸುದರ್ಶನ್‌ ಹಾಸ್ಪಿಟಾಲಿಟಿಗೆ ಮಾರಾಟ ಮಾಡಿದೆ ಎಂದು ಹೇಳಿಕೆ ನೀಡಿದೆ. ನಾಗಪುರದ ಸುದರ್ಶನ್‌ ಹಾಸ್ಪಿಟಾಲಿಟಿ ಪ್ರತಿಕ್ರಿಯಿಸಿ, ಗಡ್ಕರಿ ಅವರ ವೈಯಕ್ತಿಕ ಬಳಕೆಗೆ ಬಸ್ಸು ನೀಡಿಲ್ಲ ಎಂದು ತಿಳಿಸಿದೆ.

2016ರಲ್ಲಿ ಈ ವಿಶೇಷ ಬಸ್ಸನ್ನು ಖಾಸಗಿ ಡೀಲರ್‌ ಖರೀದಿಸಿ ಬಸ್‌ ಆಪರೇಟರ್‌ಗೆ ನೀಡಿದೆ. ಪ್ರಸ್ತುತ ಈ ಬಸ್‌ ಸ್ಥಿತಿಗತಿ ಗೊತ್ತಿಲ್ಲ ಎಂದು ಸ್ಕಾನಿಯಾ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಭಾರತದಲ್ಲಿ ಹಸಿರು ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಥೆನಾಲ್‌ನಿಂದ ಸಂಚರಿಸುವ ಸ್ಕ್ಯಾನಿಯಾ ಬಸ್ಸನ್ನು ನಾಗ್ಪುರದಲ್ಲಿ ಗಡ್ಕರಿ ಪರಿಚಯಿಸಿದ್ದರು. ಪ್ರಯೋಗಿಕ ಯೋಜನೆಯಾಗಿದ್ದು ಈ ಸಂಬಂಧ ನಾಗಪುರ ಆಡಳಿತ ಮತ್ತು ಸ್ಕ್ಯಾನಿಯಾ ಕಂಪನಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರಲ್ಲಿ ಗಡ್ಕರಿ ಮತ್ತು ಅವರ ಕುಟುಂಬದ ಸದಸ್ಯರ ಪಾತ್ರವಿಲ್ಲ ಎಂದು ಗಡ್ಕರಿ ಕಚೇರಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *