ಮಗಳು ನಾಪತ್ತೆಯಾದ ತಕ್ಷಣ ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್- 14ರ ಪುತ್ರಿಯ ರಹಸ್ಯ ಬಯಲು

Public TV
2 Min Read

– ಇನ್‍ಸ್ಟಾಗ್ರಾಂ ಗೆಳೆಯನಿಗಾಗಿ 14ರ ಬಾಲೆ ಎಸ್ಕೇಪ್
– ಬೆಂಗಳೂರಿನ ಏರ್‌ಪೋರ್ಟಿನಲ್ಲೇ ತಂದೆಗೆ ಸಿಕ್ಕಿಬಿದ್ಳು

ಬೆಂಗಳೂರು: ಗೆಳೆಯನನ್ನು ಭೇಟಿಯಾಗಲು ಹೈದರಾಬಾದ್‍ಗೆ ಪರಾರಿಯಾಗುತ್ತಿದ್ದ 14 ವರ್ಷದ ಹುಡುಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕೆಯ ತಂದೆಯ ಕೈಗೆ ಸಿಕ್ಕಿಬಿದ್ದಿದ್ದಾಳೆ. ತಂದೆ ಸೋಶಿಯಲ್ ಮೀಡಿಯಾದಲ್ಲಿ ಮಗಳ ಖಾತೆಯನ್ನು ಹ್ಯಾಕ್ ಮಾಡಿದಾಗ ಹೈದರಾಬಾದ್‍ಗೆ ಪರಾರಿಯಾಗುವ ಪ್ಲಾನ್ ಬಹಿರಂಗವಾಗಿದೆ.

ತಂದೆಯ ದೂರಿನ ಮೇರೆಗೆ ದಕ್ಷಿಣ ಸಿಇಎನ್ (ಸೈಬರ್ ಕ್ರೈಂ ಪೊಲೀಸ್‍ ಠಾಣೆ) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಹುಡುಗಿಯ ಇನ್‍ಸ್ಟಾಗ್ರಾಂ ಮೂಲಕ ಪರಿಯಚವಾಗಿದ್ದ ಹುಡುಗನಿಗಾಗಿ ಹುಡುಕುತ್ತಿದ್ದಾರೆ.

ಏನಿದು ಪ್ರಕರಣ?
ಹುಡುಗಿ ಉತ್ತರಹಳ್ಳಿಯ ಎಜಿಎಸ್ ಲೇಔಟ್ ನಿವಾಸಿಯಾಗಿದ್ದು, ಬೆಂಗಳೂರಿನ ಹೆಸರಾಂತ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಹುಡುಗಿಯ ತನ್ನ ಮೊಬೈಲ್ ಫೋನ್‍ನಲ್ಲಿ ಇನ್‍ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು, ಸದಾ ಸಕ್ರಿಯಳಾಗಿದ್ದಳು. ನಂತರ ಇನ್‍ಸ್ಟಾಗ್ರಾಂ ಮೂಲಕ ವಿಶಾಲ್ ಎಂಬಾತನ ಪರಿಚಯವಾಗಿದೆ. ಆತನೊಂದಿಗೆ ಪ್ರತಿದಿನ ಚಾಟ್ ಮಾಡುತ್ತಿದ್ದಳು. ಕೆಲವೇ ದಿನಗಳಲ್ಲಿ ಇಬ್ಬರು ಪ್ರೀತಿಸುತ್ತಿದ್ದು, ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ವಿಶಾಲ್ ತಾನು ಹೈದರಾಬಾದ್ ಮೂಲದವನು, ನಾನು ನಿನ್ನ ಜೊತೆ ಇರಲು ಇಷ್ಟಪಡುತ್ತೇನೆ ಎಂದು ಹುಡುಗಿಗೆ ನಂಬಿಸಿದ್ದಾನೆ.

ಹುಡುಗಿ ಕೂಡ ಗೆಳೆಯನೊಂದಿಗೆ ವಾಸಿಸುಲು ತನ್ನ ಕುಟುಂಬವನ್ನು ಬಿಡಲು ನಿರ್ಧರಿಸಿದ್ದಳು. ಅದರಂತೆಯೇ ಜೂನ್ 8 ರಂದು ಬೆಳಗ್ಗೆ ಸುಮಾರು 10.30ಕ್ಕೆ ಸಂಗೀತ ತರಗತಿಗೆಂದು ಮನೆಯಿಂದ ಹೋಗಿದ್ದಾಳೆ. ಅಲ್ಲಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಹೋಗಿದ್ದಾಳೆ. ಇತ್ತ ತುಂಬಾ ಸಮಯವಾದರೂ ಮನೆಗೆ ಮಗಳು ಬರಲಿಲ್ಲ ಎಂದು ಪೋಷಕರು ಆತಂಕಗೊಂಡಿದ್ದರು.

ಕೆಲವು ದಿನಗಳಿಂದ ಮಗಳ ನಡವಳಿಕೆಯ ಬದಲಾವಣೆಯ ಬಗ್ಗೆ ತಂದೆ ಗಮನಿಸಿದ್ದರು. ಹೀಗಾಗಿ ಮಗಳು ನಾಪತ್ತೆಯಾದ ತಕ್ಷಣ ಆಕೆಯ ಇನ್‍ಸ್ಟಾಗ್ರಾಂ ಖಾತೆಯನ್ನು ಡಿಕೋಡ್ ಮಾಡಿದ್ದಾರೆ. ಈ ವೇಳೆ ಮಗಳು ವಿಶಾಲ್ ಜೊತೆ ಚಾಟ್ ಮಾಡುತ್ತಿರುವುದು ಗೊತ್ತಾಗಿದೆ. ಅಲ್ಲದೆ ಆತನೊಂದಿಗೆ ತನ್ನ ಖಾಸಗಿ ಫೋಟೋಗಳನ್ನು ಸಹ ಹಂಚಿಕೊಂಡಿದ್ದಳು. ಕೊನೆಯ ಚಾಟ್‍ನಲ್ಲಿ ವಿಶಾಲ್ ಹೈದರಾಬಾದ್‍ಗೆ ಬರುವಂತೆ ತಿಳಿಸಿರುವುದು ಮತ್ತು ಆಕೆಗೆ ಟಿಕೆಟ್ ಕೂಡ ಕಾಯ್ದಿರಿಸಿರುವ ಬಗ್ಗೆ ತಂದೆ ತಿಳಿದುಕೊಂಡಿದ್ದಾರೆ.

ಕೂಡಲೇ ತಂದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧಾವಿಸಿದ್ದು, ಅಲ್ಲಿ ಮಗಳನ್ನು ನೋಡಿದ್ದಾರೆ. ತಕ್ಷಣ ಆಕೆಯನ್ನು ಮನೆಗೆ ಕರೆದುಕೊಂಡು ಬಂದು ಬುದ್ಧಿವಾದ ಹೇಳಿದ್ದಾರೆ. ನಂತರ ಪೋಷಕರು ಜೂನ್ 17 ರಂದು ದಕ್ಷಿಣ ಸಿಇಎನ್ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ.

ನಕಲಿ ಎಸ್‍ಎಸ್‍ಎಲ್‍ಸಿ ಮಾರ್ಕ್ಸ್ ಕಾರ್ಡ್
ವಿಶಾಲ್ ಆಕೆಯೊಂದಿಗೆ ತುಂಬಾ ದಿನಗಳಿಂದ ಸಂಪರ್ಕದಲ್ಲಿದ್ದನು. ಅಲ್ಲದೇ ಆಕೆಗೆ 18 ವರ್ಷ ವಯಸ್ಸಾಗಿದೆ ಎಂದು ತೋರಿಸಲು ವಿಶಾಲ್ ಆಕೆಯ ಹೆಸರಿನಲ್ಲಿ ನಕಲಿ ಎಸ್‍ಎಸ್‍ಎಲ್‍ಸಿ ಮಾರ್ಕ್ಸ್ ಕಾರ್ಡ್ ಕೂಡ ತಯಾರಿಸಿದ್ದನು. 15 ಫೋಟೋಗಳು, ಆಧಾರ್ ಕಾರ್ಡ್ ಮತ್ತು 10,000 ರೂ. ತರುವಂತೆ ಹುಡುಗಿಗೆ ತಿಳಿಸಿದ್ದನು. ಆಕೆಯೂ ಕೂಡ ಆತನ ಹೇಳಿದಂತೆ ಎಲ್ಲವನ್ನು ತೆಗೆದುಕೊಂಡು ಹೋಗುತ್ತಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ.

ಆತನ ವಯಸ್ಸು ಅಥವಾ ಗುರುತಿನ ಬಗ್ಗೆ ಯಾವುದೇ ವಿವರ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಐಪಿಸಿ ಸೆಕ್ಷನ್ 468 (ಮೋಸ), ಪೋಕ್ಸೋ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ತರಗತಿಗಳು ಆನ್‍ಲೈನ್‍ನಲ್ಲಿ ನಡೆಯುತ್ತಿದೆ. ಹೀಗಾಗಿ ಪೋಷಕರು ಹೆಚ್ಚಿನ ಜವಾಬ್ದಾರಿಯಾಗಿ ತಮ್ಮ ಮಕ್ಕಳನ್ನು ಗಮನಿಸುತ್ತಿರಬೇಕು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *