ಚಾಮರಾಜನಗರ: ಕೊರೊನಾ ಮಹಾಮಾರಿ ಬಂದ ಬಳಿಕ ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಬಿಡುವಿಲ್ಲದೆ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಸಬ್ ಇನ್ಸ್ ಪೆಕ್ಟರ್ ಪತ್ನಿಗೆ ಹೆರಿಗೆಯಾಗಿ 37 ದಿನಗಳೇ ಕಳೆದಿದ್ದು, ವಿಡಿಯೋ ಮೂಲಕವೇ ಮಗಳನ್ನು ನೋಡಿ ಖುಷಿ ಪಟ್ಟಿದ್ದಾರೆ.
ಕೊರೊನಾ ವಾರಿಯರ್ ಆಗಿ ದುಡಿಯುತ್ತಿರುವ ಸಬ್‍ಇನ್ಸ್ ಪೆಕ್ಟರ್ ಗೆ ಮಗು ನೋಡಬೇಕೆಂಬ ಹಂಬಲವಿದ್ದರೂ ಕರ್ತವ್ಯವೇ ಮೊದಲು ಎಂದು ಪತ್ನಿ ಹಾಗೂ ಮಗುವನ್ನು ನೋಡಲು ಹೋಗದೆ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ. ಯಾವುದೇ ವ್ಯಕ್ತಿ ತಂದೆಯಾದಾಗ ಅದೊಂದು ಅವಿಸ್ಮರಣೀಯ ಕ್ಷಣ. ಆ ಕ್ಷಣದಲ್ಲಿ ಪತ್ನಿಯ ಜೊತೆಗಿರಬೇಕು. ತನ್ನ ಮಗುವನ್ನು ನೋಡಬೇಕು ಎಂದು ಆಸೆ ಆಕಾಂಕ್ಷೆ ಸಹಜ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಪೊಲೀಸ್ ಠಾಣೆಯ ಸಬ್‍ಇನ್ಸ್ ಪೆಕ್ಟರ್ ಲತೇಶ್ ಕುಮಾರ್ ಅವರ ಪತ್ನಿಗೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಹೆರಿಗೆಯಾಗಿದೆ. ಆದರೆ ಮಗು ಜನಿಸಿ 37 ದಿನ ಕಳೆದರೂ ನೋಡಲು ಹೋಗದೆ ಪಿಎಸ್‍ಐ ಕರ್ತವ್ಯನಿಷ್ಠೆ ಮೆರೆದಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಪತ್ನಿಯ ಜೊತೆಗಿರಬೇಕು ಆಕೆಗೆ ಧೈರ್ಯ ತುಂಬಬೇಕು ಎಂದುಕೊಂಡಿದ್ದ ಲತೇಶ್ ಕುಮಾರ್ ಗೆ ಲಾಕ್ ಡೌನ್ ಹಿನ್ನಲೆಯಲ್ಲಿ ಅದು ಸಾಧ್ಯವಾಗಲೇ ಇಲ್ಲ. ಹಾಗಾಗಿ ವಿಡಿಯೋ ಕಾಲ್ ಮೂಲಕವೇ ಮಗು ನೋಡಿ ಬೇಸರ ಮರೆಯುತ್ತಿದ್ದಾರೆ. ಇದನ್ನೂ ಓದಿ: ಪತ್ನಿ, ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟು ಕಚೇರಿಯಲ್ಲೇ ಗ್ರಾಮಲೆಕ್ಕಾಧಿಕಾರಿ ವಾಸ
ಇತ್ತ ಅಪ್ಪನನ್ನು ಕಳೆದ 37 ದಿನಗಳಿಂದ ನೋಡದ ಇನ್ನೊಬ್ಬ ಮಗಳು ಅಪ್ಪ ಮನೆಗೆ ಯಾವಾಗ ಬರ್ತೀಯಾ ಎಂದು ಪ್ರತಿ ದಿನ ಕೇಳುತ್ತಾಳಂತೆ. ಕೇರಳಗಡಿಗೆ ಹೊಂದಿಕೊಂಡಂತಿರುವ ಗುಂಡ್ಲುಪೇಟೆಗೆ ಸದಾ ಕೊರೊನಾ ಆತಂಕ ಕಾಡುತ್ತಲೇ ಇದೆ. ಹಾಗಾಗಿ ಪ್ರತಿ ದಿನ ಗಡಿಭಾಗದ ಮೂಲೆ ಹೊಳೆ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಕೊರೊನಾ ಸೊಂಕು ಹರಡದಂತೆ ಎಚ್ಚರಿಕೆ ವಹಿಸುತ್ತಾ ಗುಂಡ್ಲುಪೇಟೆ ತಾಲೋಕಿನಲ್ಲಿ ಲಾಕ್ ಡೌನ್ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಸಬ್ ಇನ್ಸ್ ಪೆಕ್ಟರ್ ಶ್ರಮಿಸುತ್ತಿದ್ದಾರೆ.