ಮಗನ ಮದ್ವೆ ಖುಷಿಯಲ್ಲಿರೋ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಾಹುಕಾರನ ಶಾಕ್

Public TV
2 Min Read

– ಹೆಬ್ಬಾಳ್ಕರ್ ಸೋಲಿಸಲು ಕಣಕ್ಕಿಳಿದ ಜಾರಕಿಹೊಳಿ

ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಮತ್ತೊಂದು ಸುತ್ತಿನ ಫೈಟ್ ಆರಂಭವಾಗಿದೆ. ಬಿಜೆಪಿಗೆ ಸೇರ್ಪಡೆಯಾಗಿ ಗೆದ್ದು ಬಂದ ದಿನವೇ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ ಸೋಲಿಸುವುದೇ ನನ್ನ ಗುರಿ ಅಂತ ರಮೇಶ್ ಜಾರಕಿಹೊಳಿ ಶಪಥ ಮಾಡಿದ್ದರು. ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದ್ದು ಆದ್ರೆ ರಮೇಶ್ ಜಾರಕಿಹೊಳಿ ಮಾತ್ರ ಈಗಲೇ ಅಖಾಡಕ್ಕಿಳಿದಿದ್ದಾರೆ.

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಸದ್ಯ ಆಪರೇಷನ್ ಕಮಲ ಆರಂಭವಾಗಿದೆ. ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಆಪರಷೇನ್ ಕಮಲ ನಡೆದು ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ಬಂತು. ಇದಕ್ಕೆ ಇದೇ ಶೈಲಿಯಲ್ಲಿ ಸಾಹುಕಾರ್ ಬೆಳಗಾವಿಯ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಕೈ ಚಳಕ ತೋರಿಸುತ್ತಿದ್ದು, ಆಪರೇಷನ್ ಕಮಲ ಮಾಡುವುದರ ಮೂಲಕ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸುವ ಪ್ಲಾನ್ ಮಾಡಿಕೊಂಡಿದಂತೆ ಕಾಣಿಸುತ್ತಿದೆ.

ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಉಪಚುನಾವಣೆ ಎದುರಿಸಿ ಗೆದ್ದು ಬಂದ ಸಾಹುಕಾರ್ ಅಂದೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸುವುದಾಗಿ ಶಪಥ ಮಾಡಿದ್ದರು. ಅದೇ ರೀತಿ ಇದೀಗ ಅಖಾಡಕ್ಕಿಳಿದಿರುವ ರಮೇಶ್ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಹೆಬ್ಬಾಳ್ಕರ್ ಅವರನ್ನ ಸೋಲಿಸುವ ಪ್ಲಾನ್ ಮಾಡಿದ್ದಾರೆ. ಇದರ ಆರಂಭಿಕ ಹಂತವಾಗಿ ಇಂದು ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಕಾಂಗ್ರೆಸ್‍ನ ಪಕ್ಕಾ ಕಾರ್ಯಕರ್ತ ಕೃಷ್ಣಾ ಅನಗೋಳ್ಕರ್ ಕಮಲ ಹಿಡಿದಿದ್ದಾರೆ.

ಬೆಳಗಾವಿ ತಾಲೂಕಿನ ಸಾಂಬ್ರಾ ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣ ಅನಗೋಳ್ಕರ್ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುವುದರ ಜತೆಗೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಕೊಟ್ಟಿದ್ದಾರೆ. ಈ ಕುರಿತು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೃಷ್ಣ ಅನಗೋಳ್ಕರ್, ರಾಜೀನಾಮೆ ನೀಡುತ್ತಿರುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದರು. ರಮೇಶ್ ಜಾರಕಿಹೊಳಿ ಆಶೀರ್ವಾದ ನಮ್ಮ ಮೇಲಿದ್ದು, ಮುಂಬರುವ ಲೋಕಸಭಾ ಬೈ ಎಲೆಕ್ಷನ್ ಗೆ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಕೃಷ್ಣಾ ಅನಗೋಳ್ಕರ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೃಷ್ಣ ಅನಗೋಳ್ಕರ್ ಮತ್ತೊಂದು ಹೊಸ ಬಾಂಬ್ ಕೂಡ ಸಿಡಿಸಿದ್ದು ಗ್ರಾಮೀಣ ಕ್ಷೇತ್ರದಲ್ಲೇ ಇನ್ನೂ ಇನ್ನೂರಕ್ಕೂ ಅಧಿಕಮುಖಂಡರು ರಾಜೀನಾಮೆ ನೀಡಿ ಬಿಜೆಪಿಗೆ ಬರಲಿದ್ದಾರೆ. ಇದರ ಜತೆಗೆ ಬೆಳಗಾವಿ ಜಿಲ್ಲೆಯ ಪ್ರಮುಖ ಮುಖಂಡರು ಕೂಡ ಕೈ ಬಿಡಲಿದ್ದು, ಅವರೆಲ್ಲರೂ ಆದಷ್ಟು ಬೇಗ ಬಿಜೆಪಿಯತ್ತ ಮುಖ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಸದ್ಯ ಮಗನ ಮದುವೆ ಖುಷಿಯಲ್ಲಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ರಮೇಶ್ ಜಾರಕಿಹೊಳಿ ಶಾಕ್ ನೀಡಿದ್ದಾರೆ. ಇದಕ್ಕೆ ಯಾವುದೇ ಪ್ರತಿಕ್ರಿಯೆನ್ನ ಹೆಬ್ಬಾಳ್ಕರ್ ನೀಡುವುದಿಲ್ಲ ಅಂತಾ ಹೇಳಿದ್ದು ಆದರೆ ಯಾವ ರೀತಿ ಕ್ಷೇತ್ರದಲ್ಲಿ ತಮ್ಮ ಆಪ್ತ ಕಾರ್ಯಕರ್ತರನ್ನ ಹಿಡದಿಡಬೇಕು ಎಂಬ ಚಿಂತೆ ಶಾಸಕಿ ಹೆಬ್ಬಾಳ್ಕರ್ ಗೆ ಶುರುವಾಗಿದೆ.

ರಾಜೀನಾಮೆ ನೀಡುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಪರಿಣಾಮ ಬೀರುವುದಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ನಡೆಯುತ್ತಿರುತ್ತದೆ. ಆದ್ರೇ ಮತಗಳು ಹೋಗುವುದಿಲ್ಲ. ಕಾಂಗ್ರೆಸ್ ನಲ್ಲಿ ಯಾವುದೇ ಅನ್ಯಾಯ ಆಗಿಲ್ಲ, ಆದರೆ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಕೊಡುತ್ತಿದ್ದೇನೆ ಅಂತಾ ಕೃಷ್ಣ ಹೇಳಿದ್ದಾರೆ. ಅನುದಾನದ ಹೆಸರಿನಲ್ಲಿ ಬ್ಲ್ಯಾಕ್‍ಮೇಲ್ ಮಾಡಿ ಕಾಂಗ್ರೆಸ್ ನವರನ್ನ ಸೆಳೆಯುತ್ತಿದ್ದಾರೆ ಎಂದು ಬೆಳಗಾವಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *