ಮಗನನ್ನೇ ಕೊಲ್ಲಲು 2 ಲಕ್ಷಕ್ಕೆ ಸುಪಾರಿ – ಪಾಪಿ ತಂದೆ ಸೇರಿ 6 ಮಂದಿ ಅರೆಸ್ಟ್

Public TV
1 Min Read

– ಏರಿ ಮೇಲೆ ಮಗನಿಗೆ ಗುಂಡು ಹೊಡೆಸಿದ್ದ ಅಪ್ಪ

ಹಾಸನ: ಆಸ್ತಿ ವಿವಾದದ ವಿಚಾರವಾಗಿ ಮಗನನ್ನೇ ಕೊಲೆ ಮಾಡಿಸಿದ ಅಪ್ಪನನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಕೆರೆ ಏರಿ ಮೇಲೆ ಕಳೆದ ತಿಂಗಳು ಕೊಲೆಯಾಗಿತ್ತು. ಆಗಸ್ಟ್ 27ರ ರಾತ್ರಿ ಬೈಕಿನಲ್ಲಿ ಬರುತ್ತಿದ್ದ ಪುನೀತ್(26) ಎಂಬಾತನನ್ನು ಶೂಟೌಟ್ ಮಾಡಲಾಗಿತ್ತು. ಕುಟುಂಬ ಕಲಹ ಮತ್ತು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿದ್ದು, ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಪುನೀತ್ ತಂದೆ ಹೇಮಂತ್, ಕಾಂತರಾಜು, ಪ್ರಶಾಂತ್, ಸುನಿಲ್, ನಂದೀಶ, ನಾಗರಾಜ್ ಎಂದು ಗುರುತಿಸಲಾಗಿದೆ. ಮಗನ ಜೀವ ತೆಗೆಯಲು ನಾಲ್ಕೈದು ತಿಂಗಳಿಂದ ಪ್ಲಾನ್ ಮಾಡಿದ್ದ ತಂದೆ ಹೇಮಂತ್, ಇದಕ್ಕಾಗಿ 2 ಲಕ್ಷ ರೂಪಾಯಿಗೆ ಸುಪಾರಿ ಕೂಡ ನೀಡಿದ್ದ. ಕೆರೆ ಏರಿ ಮೇಲೆ ಆರೋಪಿಗಳಾದ ಸ್ವಾಮಿ, ನಂದೀಶ್ ಮತ್ತು ಕಾಂತರಾಜು ಬಂದೂಕಿನಿಂದ ಶೂಟ್ ಮಾಡಿ ಕೊಲೆ ಮಾಡಿದ್ದರು. ಇನ್ನಿಬ್ಬರು ಪುನೀತ್ ಬೈಕ್‍ನಲ್ಲಿ ಬರುತ್ತಿರುವ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡಿದ್ದರು.

ಪುನೀತ್ ಕೊಲೆಯ ನಂತರ ಆತನ ತಾಯಿ ಯಶೋಧಮ್ಮ ದೂರು ನೀಡಿದ್ದು, ತಂದೆ ಹೇಮಂತ್ ಮತ್ತು ಪುನೀತ್ ನಡುವೆ ಕೆಲ ವರ್ಷಗಳಿಂದ ಆಸ್ತಿ ಹಂಚಿಕೆ ವಿಚಾರವಾಗಿ ವೈಷಮ್ಯ ಇತ್ತು. ಈ ಕಾರಣದಿಂದ ಪತಿ ಹಾಗೂ ಇನ್ನೊಬ್ಬ ಮಗ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಆರೋಪದ ಮೇರೆಗೆ ತಂದೆ ಹೇಮಂತ್ ಅನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆಯ ವಿಚಾರ ಹೊರಗೆ ಬಂದಿದೆ.

2 ಲಕ್ಷ ರೂ.ಗೆ ಮಗನನ್ನೇ ಡೀಲ್ ಮಾಡಿದ್ದ ತಂದೆ ಮುಂಗಡವಾಗಿ 5 ಸಾವಿರ ನೀಡಿದ್ದ ಎನ್ನಲಾಗಿದೆ. ಈಗ ಪಾಪಿ ತಂದೆ ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 5 ಮೊಬೈಲ್, 1.88 ಲಕ್ಷ ರೂ ನಗದು ವಶಕ್ಕೆ ಪಡೆದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್.ಪಿ ಶ್ರೀನಿವಾಸ್ ಗೌಡ, ಕಗ್ಗಂಟಾಗಿದ್ದ ಪ್ರಕರಣ ಬೇಧಿಸಿದ ತನಿಖಾ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *