ಮಕ್ಕಳ ಮೇಲಿನ ಕಾಳಜಿ ಕೊರೊನಾ ಕಾಲಕ್ಕೆ ಮಾತ್ರ ಕೊನೆಯಾಗದಿರಲಿ: ಉಡುಪಿಯಲ್ಲಿ ಪೋಷಕರ ಅಭಿಮತ

Public TV
1 Min Read

ಉಡುಪಿ: ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇತಿಹಾಸ ಸೃಷ್ಟಿ ಮಾಡಿದೆ. ಮಹಾಮಾರಿ ಕೊರೊನಾ ವೈರಸ್ ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿದೆ. ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಪರೀಕ್ಷೆ ಬರೆಯುವ ಮಕ್ಕಳ ಮೇಲೆ ಹಿಂದೆಂದೂ ಇಲ್ಲದಷ್ಟು ಕಾಳಜಿ ತೋರಿದೆ.

ಕೊರೊನಾ ಆವರಿಸಿರೋದ್ರ ಇಡೀ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲ ಆಗಿದೆ. ನಿಗದಿತ ಕಾರ್ಯಕ್ರಮಗಳೆಲ್ಲಾ ರದ್ದಾಗಿವೆ. ಪರೀಕ್ಷೆ ನಡೆಯಬೇಕು, ನಡೆಯಬಾರದು ಎಂಬ ಹಗ್ಗ ಜಗ್ಗಾಟದ ನಡುವೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಿದೆ. ಈ ಬಾರಿ ಶಿಕ್ಷಣ ಸಚಿವರಿಂದ ಆರಂಭಿಸಿ ಕಟ್ಟ ಕಡೆಯ ಶಾಲಾ ಸಿಬ್ಬಂದಿವರೆಗೂ ಮಕ್ಕಳ ಬಗ್ಗೆ ಹಿಂದೆಂದೂ ಇಲ್ಲದೆ ಕಾಳಜಿ, ಜಾಗರೂಕತೆ ತೋರಿದೆ.

ಉಡುಪಿ ಜಿಲ್ಲೆಯೊಂದನ್ನು ತೆಗೆದುಕೊಂಡರೂ ಶಿಕ್ಷಣ ಸಚಿವರು, ಜಿಲ್ಲಾಧಿಕಾರಿ, ಸಿಇಒ, ಡಿಡಿಪಿಐ ಸೇರಿದಂತೆ ಎಲ್ಲಾ ಅಧಿಕಾರಿಗಳು, ಶಿಕ್ಷಕರು ಈ ಬಾರಿ ಪರೀಕ್ಷೆಯ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪರೀಕ್ಷೆ ಆರಂಭದ ಇವತ್ತು ಡಿಸಿ ಜಿ ಜಗದೀಶ್,  ಮಿಲಾಗ್ರೀಸ್, ಕಲ್ಯಾಣಪುರ ಪರೀಕ್ಷಾ ಕೇಂದ್ರಗಳಿಗೆ ಭೇಟಿಕೊಟ್ಟು ಮಕ್ಕಳಿಗೆ ಧೈರ್ಯ ತುಂಬಿದ್ದಾರೆ.

ಉಡುಪಿ ನಗರದ ವಳಕಾಡು ಹೈಸ್ಕೂಲಿಗೆ ಸಿಇಒ ಪ್ರೀತಿ ಗೆಹ್ಲೋಟ್ ಭೇಟಿ ನೀಡಿ ಎಲ್ಲಾ ಕ್ಲಾಸ್ ರೂಂಗೆ ತೆರಳಿ ಶುಭ ಹಾರೈಸಿದರು. ಪೋಷಕರು, ಶಿಕ್ಷಕರು ಸಿಬ್ಬಂದಿಗಳ ಜೊತೆ ಸಮಾಲೋಚನೆ ಮಾಡಿದರು. ಪರೀಕ್ಷಾ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಡಿಡಿಪಿಐ ಶೇಷಶಯನ ಕಾರಿಂಜ ಜಿಲ್ಲೆಯ ಹತ್ತಾರು ಕೇಂದ್ರಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದರು.

ಕೊರೊನಾ ಸಾಂಕ್ರಾಮಿಕ ಇದ್ದಾಗ ಸರ್ಕಾರ, ಶಿಕ್ಷಣ ಇಲಾಖೆ ಮಕ್ಕಳ ಮೇಲೆ ತೋರಿದ ಕಾಳಜಿ ಶ್ಲಾಘನೀಯ. ಈ ಕಾಳಜಿ 2020ಕ್ಕೆ ಸೀಮಿತವಾಗಿರದೆ ಮುಂದಿನ ವರ್ಷಗಳಲ್ಲೂ ಈ ಎಚ್ಚರಿಕೆ ಕ್ರಮ, ಶಿಸ್ತು ಇರಲಿ. ಮಕ್ಕಳು ದೇಶದ ಸಂಪನ್ಮೂಲಗಳು. ಮಕ್ಕಳಿಗೂ ಸರ್ಕಾರದ ಕಾಳಜಿ ಅರ್ಥವಾಗಬೇಕು, ರಾಜ್ಯಕ್ಕೆ ದೇಶಕ್ಕೆ ಸೇವೆ ಮಾಡಬೇಕು ಎಂದು ಪೋಷಕ ದಿವಾಕರ್ ಭಂಡಾರಿ ಪಬ್ಲಿಕ್ ಟಿವಿ ಜೊತೆ ಅಭಿಪ್ರಾಯ ಹಂಚಿಕೊಂಡರು.

ಮತ್ತೋರ್ವ ಪೋಷಕ ಗಣೇಶ್ ಅಂಬಾಗಿಲು ಮಾತನಾಡಿ, ಸವಾಲಾಗಿ ಸ್ವೀಕರಿಸಿ ಈ ಬಾರಿ ಪರೀಕ್ಷೆ ನಡೆಸಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದು ಸರ್ಕಾರದ ದಿಟ್ಟ ಹೆಜ್ಜೆ, ಶಿಕ್ಷಣ ವಿಚಾರದಲ್ಲಿ ಇಂತಹ ತೀರ್ಮಾನ ಮುಂದುವರಿಯಬೇಕು ಎಂದು ಹೇಳಿದರು

Share This Article
Leave a Comment

Leave a Reply

Your email address will not be published. Required fields are marked *