ಮಕ್ಕಳಿಗೆ ಮಾಸ್ಕ್ ಹಾಕಿಸಿ ಅಂತರ ಕಾಯಿಸ್ತಾರಂತೆ, ಮಂಡೆ ಸರಿ ಇದ್ಯಾ- ಕಿಮ್ಮನೆ ಪ್ರಶ್ನೆ

Public TV
1 Min Read

ಚಿಕ್ಕಮಗಳೂರು: ಕೇಂದ್ರ ಸಚಿವರು, ಶಾಸಕರೇ ಕೊರೊನಾದಿಂದ ಸಾಯುತ್ತಿದ್ದಾರೆ. ಇನ್ನೂ ಆಟವಾಡೋ ಮಕ್ಕಳಿಗೆ ಇವರು ಮಾಸ್ಕ್, ಸಾಮಾಜಿಕ ಅಂತರದ ಬಗ್ಗೆ ಮಾರ್ಗದರ್ಶನ ಕೊಡುತ್ತೇವೆ. ಸೂಚನೆ ಕೊಡುತ್ತೇವೆ ಅಂತಾರೆ. ಇವ್ರಿಗೆ ಮಂಡೆ ಸರಿ ಇದ್ಯಾ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸರ್ಕಾರದ ವಿರುದ್ದ ಗರಂ ಆಗಿದ್ದಾರೆ.

ಜಿಲ್ಲೆಯ ಕೊಪ್ಪದಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ನಾವೇ ಸರಿಯಾಗಿ ಏನನ್ನೂ ಮಾಡುತ್ತಿಲ್ಲ. ಹೀಗಿರುವಾಗ ಆಟವಾಡೋ ಮಕ್ಕಳಿಗೆ ಮಾಸ್ಕ್ ಹಾಕಲು ಹೇಳುತ್ತೇವೆ, ಅಂತರ ಕಾಯಿಸುತ್ತೇವೆ ಅನ್ನೋದು ಮೂರ್ಖತನ. ಇವರು ಬರೀ ಪಕ್ಷದ ಕಾರ್ಯಕ್ರಮ ಮಾಡುತ್ತಿದ್ದಾರೆ. ಇವರ ಉದ್ದೇಶ ಪಕ್ಷಕ್ಕೆ ಲಾಭವಾಗುವಂತದ್ದು, ದುಡ್ಡು ಹೊಡೆಯೋ ಪ್ರೋಗ್ರಾಂ ಮಾಡುತ್ತಿದ್ದಾರೆ. ಇದರ ಹೊರತು ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಸರ್ಕಾರ ನಿರ್ದಿಷ್ಟವಾಗಿ ಒಂದು ತಿಂಗಳು, ಒಂದು ದಿನಾಂಕವನ್ನು ಹೇಳಬೇಕು. ಅಲ್ಲಿಯವರೆಗೆ ಶಾಲೆ ತೆರೆಯುವುದಿಲ್ಲ ಎಂದು ಹೇಳಬೇಕು. ಶಿಕ್ಷಕರು, ಪೋಷಕರು, ಮಕ್ಕಳನ್ನ ಗೊಂದಲದಲ್ಲಿ ಇಡಬಾರದು. ನಾವು ಯಾವುದೇ ಕಾರಣಕ್ಕೂ ನಿಗದಿತ ದಿನಾಂಕದ ವರೆಗೆ ಶಾಲೆ ತೆರೆಯುವುದಿಲ್ಲ. ಪರಿಸ್ಥಿತಿ ನೋಡಿ ಹೇಳುತ್ತೇವೆ ಎಂದು ಒಂದು ನಿರ್ದಿಷ್ಟ ದಿನಾಂಕ ಹೇಳಬೇಕು. ನಾಳೆ ಶಾಲೆ ತೆರೆಯುತ್ತೆ, ನಾಡಿದ್ದು ತೆರೆಯುತ್ತೆ ಅನ್ನೋ ಗೊಂದಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಪ್ರತಿ ಕ್ಷೇತ್ರದಲ್ಲಿ ಶಾಸಕರು, ಸಚಿವರು, ಸ್ಥಳಿಯರು ಸಂಘ-ಸಂಸ್ಥೆಗಳನ್ನು ಜೊತೆಗೆ ತೆಗೆದುಕೊಳ್ಳಬೇಕು. ಪಕ್ಷ ನೋಡಬಾರದು. ಎಲ್ಲ ಜಾತಿ ಸಂಘಟನೆ, ಸಂಘಗಳು, ಲಯನ್ಸ್, ರೋಟರಿ ಸೇರಿದಂತೆ ಎಲ್ಲರನ್ನೂ ಜೊತೆ ತೆಗೆದುಕೊಳ್ಳಬೇಕು. ಗ್ರಾಮ ಪಂಚಾಯಿತಿಯಲ್ಲಿ ಒಂದು ಸಮಿತಿ ರಚನೆ ಮಾಡಿ ಮಾರ್ಗಸೂಚಿಗಳನ್ನ ಜನರಿಗೆ ತಿಳಿಸುವಂತೆ ಮಾಡಬೇಕು. ಅದು ಒಂದು ರಾಷ್ಟ್ರೀಯ ಮನೋಭಾವನೆಯಿಂದ ಮಾಡುವಂತದ್ದು. ಆದರೆ ಇವರು ಬರೀ ಪಕ್ಷದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *