ಮಂಡ್ಯದಲ್ಲಿ ಪಿಂಡ ಪ್ರದಾನ, ಅಸ್ಥಿ ವಿಸರ್ಜನೆ ಪೂಜೆಗೆ ಬೇಕಾಬಿಟ್ಟಿ ವಸೂಲಿ..!

Public TV
1 Min Read

ಮಂಡ್ಯ: ಪಿಂಡ ಪ್ರಧಾನ, ಅಸ್ಥಿ ವಿಸರ್ಜನೆ ಪೂಜೆಗಾಗಿ ಶ್ರೀರಂಗಪಟ್ಟಣಕ್ಕೆ ತೆರಳುವ ಮುನ್ನ ಸ್ವಲ್ಪ ಯೋಚನೆ ಮಾಡಿ. ಯಾಕಂದರೆ ಅಲ್ಲಿ ಹಣ ಸುಲಿಗೆಯಾಗುವುದರ ಜೊತೆಗೆ ನಿಮ್ಮನ್ನೂ ಯಾಮಾರಿಸಬಹುದು. ಕಾವೇರಿ ತೀರದಲ್ಲಿ `ಧಾರ್ಮಿಕ ಕಾರ್ಯ’ ವ್ಯಾಪಾರವಾಗಿ ಬದಲಾಗಿದೆ.

ಮೃತಪಟ್ಟವರಿಗೆ ಮುಕ್ತಿ ಸಿಗಲಿ ಅನ್ನೋ ಕಾರಣಕ್ಕಾಗಿ ಅಸ್ಥಿ ವಿಸರ್ಜನೆ, ಪಿಂಡ ಪ್ರಧಾನ ಹೀಗೆ ಇನ್ನು ಹಲವು ಪೂಜೆಗಳನ್ನ ನೆರವೇರಿಸುವ ಸಂಪ್ರದಾಯ ಹಿಂದು ಧರ್ಮದಲ್ಲಿದೆ. ನದಿ ತಟದಲ್ಲೇ ಈ ವಿಧಿವಿಧಾನಗಳು ನಡೆಯಬೇಕಿರುವುದರಿಂದ ಕಾವೇರಿ ನದಿ ಹರಿಯುವ ಶ್ರೀರಂಗಪಟ್ಟಣದಲ್ಲಿ ಹೆಚ್ಚೆಚ್ಚು ಶ್ರದ್ಧಾ ಪೂಜೆಗಳು ನಡೆಯುತ್ತೆ. ಆದರೆ ಸತ್ತವರಿಗೆ ಮುಕ್ತಿ ನೀಡುವ ಕಾರ್ಯ ಶ್ರೀರಂಗಪಟ್ಟಣದಲ್ಲಿ ಕಂಪ್ಲೀಟ್ ಬದಲಾಗಿದೆ. ಧಾರ್ಮಿಕ ಮನೋಭಾವದಿಂದ ಬರುವ ಜನರ ಬಳಿ ಕೆಲ ಮಂದಿ ವಸೂಲಿಗಿಳಿದಿದ್ದಾರೆ.

ಕಾವೇರಿ ನದಿ ತೀರದಲ್ಲಿರುವ ಪಶ್ಚಿಮವಾಹಿನಿ, ಸಂಗಮ, ಗೋಸಾಯ್ ಘಾಟ್, ಸ್ನಾನಘಟ್ಟಗಳಲ್ಲಿ ಅಕ್ರಮ ಶೆಡ್ ನಿರ್ಮಿಸಿರುವ ಕೆಲ ಪ್ರಭಾವಿಗಳು ಸಂಸ್ಕಾರ ನಡೆಸಲು ಅರ್ಚಕರನ್ನ ನೇಮಿಸಿದ್ದಾರೆ. ವೇದ, ಮಂತ್ರಗಳನ್ನೇ ಅಭ್ಯಾಸ ಮಾಡದ ಕೆಲವರು ಹಣ ಮಾಡುವ ಉದ್ದೇಶದಿಂದ ವಸೂಲಿ ದಂಧೆಗೆ ಇಳಿದಿದ್ದಾರೆ. ನಾರಾಯಣ ಬಲಿ ಪೂಜೆಗೆ 25 ಸಾವಿರ, ಪ್ರೇತ ಸಂಸ್ಕಾರ 18 ಸಾವಿರ, ತಿಲಕಹೋಮ 15ಸಾವಿರ, ಪಿಂಡ ಪ್ರಧಾನ 8 ಸಾವಿರ ಹೀಗೆ ಮನಸ್ಸೋ ಇಚ್ಛೆ ದರ ನಿಗಧಿ ಮಾಡಿ ಜನರ ಬಳಿ ಹಗಲು ದರೋಡೆ ಮಾಡುತ್ತಿದ್ದಾರೆ.

ಈ ಬಗ್ಗೆ ಸಾರ್ವಜನಿಕರು ತಾಲೂಕು ಆಡಳಿತಕ್ಕೆ ಸಾಕಷ್ಟು ದೂರಗಳನ್ನ ನೀಡಿದ್ದು. ಅಧಿಕಾರಿಗಳು ಮಾತ್ರ ಎಲ್ಲರಿಗೂ ನೋಟಿಸ್ ನೀಡಿದ್ದೇವೆ ಎನ್ನುತ್ತಾರೆ. ಒಟ್ಟಾರೆ ಮೃತರ ಸದ್ಗತಿಗಾಗಿ ಪ್ರಾರ್ಥಿಸಲು ಬರುವ ಜನರ ಬಳಿ ಸುಲಿಗೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ವಸೂಲಿಗೆ ಕಡಿವಾಣ ಹಾಕಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *