ಮಂಡ್ಯದಲ್ಲಿ ಗೋಲ್ಡ್ ದೋಖಾ- ಬಡ್ಡಿ ಆಸೆ ತೋರಿಸಿ ಮಹಿಳೆಯರಿಗೆ 20 ಕೋಟಿ ರೂ. ಚಿನ್ನ ವಂಚನೆ

Public TV
2 Min Read

– 40ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ

ಮಂಡ್ಯ: ಜಿಲ್ಲೆಯ ಮಹಿಳೆಯರು ಗೋಲ್ಡ್ ದೋಖಾಗೆ ಸಿಲುಕಿದ್ದು, ಬಡ್ಡಿ ಆಮೀಷಕ್ಕೆ ಒಳಗಾಗಿ 40ಕ್ಕೂ ಹೆಚ್ಚು ಮಹಿಳೆಯರು ಚಿನ್ನಾಭರಣ ಕಳೆದುಕೊಂಡಿದ್ದಾರೆ. ಬರೋಬ್ಬರಿ 20 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಚಿನ್ನವನ್ನು ವಂಚಿಸಲಾಗಿದೆ.

ಮಂಡ್ಯ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸೋಮಶೇಖರ್ ಹಾಗೂ ಪೂಜಾ ಬರೋಬ್ಬರಿ 40 ಮಹಿಳೆಯರಿಗೆ 20 ಕೋಟಿ ರೂ.ಗೂ ಅಧಿಕ ಬೆಲೆ ಬಾಳುವ ಚಿನ್ನವನ್ನು ವಂಚಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ಪೂರ್ವ ಠಾಣಾ ಪೊಲೀಸರು, ಪೂಜಾ ಹಾಗೂ ಸೋಮಶೇಖರ್ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ. ತಲೆ ಮರೆಸಿಕೊಂಡಿದ್ದ ಆರೋಪಿ ಸೋಮಶೇಖರ್ ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಬ್ಯಾಂಕ್ ನೌಕರನೆಂದು ಹೇಳಿ ವಂಚಿಸಿದ್ದಾನೆ. ಆದರೆ ಆರೋಪಿಗೂ ನಮಗೂ ಸಂಬಂಧ ಇಲ್ಲ. ಕಳೆದ 2 ತಿಂಗಳ ಹಿಂದೆಯೇ ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಫೆಡ್ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.

ಬಂಧಿತ ಸೋಮಶೇಖರ್ ಶೋಕಿಗಾಗಿ ಈ ಕೃತ್ಯ ಎಸಗಿರೋದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದು, ಮಹಿಳೆಯರಿಂದ ಪಡೆದ ಚಿನ್ನವನ್ನು ಬೇರೆ ಬೇರೆ ಫೈನಾನ್ಸ್ ನಲ್ಲಿ ಅಡವಿಟ್ಟಿರೋದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತರು ಮತ್ತು ದೂರುದಾರರ ಮಾಹಿತಿ ಪಡೆದು ಪೊಲೀಸರು ಚಿನ್ನವನ್ನು ವಶಕ್ಕೆ ಪಡೆಯುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಪ್ರಕರಣ ಸಂಬಂಧ ನಾಲ್ಕು ತಂಡ ರಚನೆ ಮಾಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಮಹಿಳೆಯರನ್ನು ಹೇಗೆ ಸೆಳೀತಿದ್ರು?
ಪೂಜಾಗೆ ಪತಿ ಇಲ್ಲ, ಸೋಮಶೇಖರ್ ಗೆ ಪತ್ನಿ ಇಲ್ಲ. ಇಬ್ಬರು ಸ್ನೇಹಿತರು ಎಂದು ಹೇಳಿಕೊಂಡು ಅಧಿಕ ಬಡ್ಡಿ ಆಸೆ ತೋರಿಸಿ ಮಹಿಳೆಯರಿಂದ ಚಿನ್ನ ಪಡೆದು ವಂಚಿಸಿದ್ದಾರೆ. ಸೋಮಶೇಖರ್ ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ, ಪೂಜಾ ಮಂಡ್ಯದ ದೊಡ್ಡ ವರ್ತಕರ ಸೊಸೆ. ಫೆಡ್ ಬ್ಯಾಂಕ್ ನಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಸೋಮಶೇಖರ್, ಪೂಜಾ ಜೊತೆಗೂಡಿ 20 ಕೋಟಿ ರೂ.ಗೂ ಹೆಚ್ಚಿನ ಚಿನ್ನಾಭರಣ ವಂಚಿಸಿದ್ದಾನೆ. ಸೋಮಶೇಖರ್‍ನ ನಯವಾದ ಮಾತು ನಂಬಿ 40ಕ್ಕೂ ಹೆಚ್ಚು ಮಹಿಳೆಯರು ತಮ್ಮ ಒಡವೆ ಕೊಟ್ಟು ಯಮಾರಿದ್ದಾರೆ.

ಚಿನ್ನ ಮನೆಯಲ್ಲಿ ಇದ್ದರೆ ಪ್ರಯೋಜನವಿಲ್ಲ. ನಮ್ಮ ಬ್ಯಾಂಕ್ ನಲ್ಲಿ ಚಿನ್ನ ಇಡಿ ಹೆಚ್ಚು ಬಡ್ಡಿ ಕೊಡಿಸುತ್ತೇನೆ. ತಿಂಗಳಿಗೆ ಪ್ರತಿ ನೂರು ಗ್ರಾಂ.ಗೆ ಶೇ.10ರಂತೆ 10 ಸಾವಿರ ರೂ. ಬಡ್ಡಿ ಬರುತ್ತೆ ಎಂದಿದ್ದ. ಚಿನ್ನವನ್ನು ಮನೆಯಲ್ಲಿ ಇಟ್ಟು ಏನು ಮಾಡುವುದು, ಬ್ಯಾಂಕ್‍ನಲ್ಲಿ ಇದ್ದರೆ ಬಡ್ಡಿ ಸಿಗುತ್ತೆ ಎಂದು ಯೋಚಿಸಿದ್ದ ಮಹಿಳೆಯರು ನೂರಾರು ಗ್ರಾಂ. ಚಿನ್ನವನ್ನು ಸೋಮಶೇಖರ್ ಬ್ಯಾಂಕ್‍ನಲ್ಲಿ ಇಟ್ಟಿದ್ದರು. ತಾವು ಮಾತ್ರವಲ್ಲದೆ ಪರಿಚಯಸ್ಥ ಮಹಿಳೆಯರಿಗೂ ಹೇಳಿ ಅವರ ಒಡವೆಯನ್ನೂ ಕೊಡಿಸಿದ್ದರು.

ಹೀಗೆ ಮಹಿಳೆಯರಿಂದ ಪಡೆದ ಚಿನ್ನವನ್ನು ಬ್ಯಾಂಕ್‍ನಲ್ಲಿ ಇಟ್ಟಿದ್ದಾಗಿ ಹೇಳಿದ್ದ. ಕೆಲ ತಿಂಗಳು ತಾನು ಹೇಳಿದಂತೆ ಬಡ್ಡಿ ಹಣವನ್ನು ಸಹ ಸೋಮಶೇಖರ್ ನೀಡಿದ್ದ. ಹೀಗಾಗಿ ಮಹಿಳೆಯರು ನಂಬಿ ಇತರ ಮಹಿಳೆಯರು ಕೆ.ಜಿ.ಗಟ್ಟಲೆ ಚಿನ್ನ ನೀಡಿದ್ದರು. ಹೀಗೆ 40ಕ್ಕೂ ಹೆಚ್ಚು ಮಹಿಳೆಯರಿಯಿಂದ ಬರೋಬ್ಬರಿ 20 ಕೋಟಿ ರೂ. ಮೌಲ್ಯದ ಕೆಜಿ ಗಟ್ಟಲೆ ಚಿನ್ನವನ್ನು ಸೋಮಶೇಖರ್ ಸಂಗ್ರಹಣೆ ಮಾಡಿದ್ದ.

ಮಹಿಳೆಯರಿಂದ ಚಿನ್ನ ಪಡೆದು ಕೆಲ ದಿನಗಳ ಬಳಿಕ ನಾಪತ್ತೆಯಾಗಿದ್ದ. ಎಲ್ಲ ಕಡೆ ವಿಚಾರಿಸಿದರೂ ಪತ್ತೆಯಾಗಿಲ್ಲ. ಒಡವೆಯನ್ನು ಕಳೆದುಕೊಂಡು ಹೆಂಗಸರು ಕಂಗಾಲಾಗಿದ್ದರು. ಕಡೆಗೆ ಮಂಗಳಮುಖಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರಿಂದ ಈ ವಂಚನೆ ಪ್ರಕರಣ ಬಯಲಿಗೆ ಬಂದಿದೆ. ತಾವೂ ಅದೇ ಜೋಡಿಯಿಂದ ವಂಚನೆಗೊಳಗಾದ ವಿಷಯ ತಿಳಿಯುತ್ತಿದ್ದಂತೆ ಇದೀಗ ಚಿನ್ನ ಕಳೆದುಕೊಂಡ ಮಹಿಳೆಯರು ಪೂರ್ವ ಪೊಲೀಸ್ ಠಾಣೆ ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡ್ತಿದ್ದಾರೆ. ಚಿನ್ನ ಕೊಡಿಸಿ ಎಂದು ಕಣ್ಣೀರು ಹಾಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *