ಮಂಗಳೂರು: ಹಿಂದೂ ಯುವ ಸೇನೆಯ ಮುಖಂಡ ಎಕ್ಕೂರು ಬಾಬ ಯಾನೆ ಶುಭಕರ ಶೆಟ್ಟಿ(61) ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಂಗಳೂರಿನ ಮಂಗಳಾ ಆಸ್ಪತ್ರೆಗೆ ಎರಡು ದಿನದ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಾಖಲಾಗಿದ್ದರು. ಇಂದು ಸಂಜೆ ವೇಳೆಗೆ ತೀವ್ರ ಉಸಿರಾಟದ ತೊಂದರೆಯಾಗಿದ್ದು, ಬಳಿಕ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.
ಒಂದು ವಾರದ ಹಿಂದೆ ಇವರ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಇದಾದ ಬಳಿಕ ಬಾಬ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿದ್ದು, ವರದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಸುಮಾರು 30 ವರ್ಷದ ಹಿಂದೆ ಮಂಗಳೂರಿನಲ್ಲಿ ಸಣ್ಣಪುಟ್ಟ ಗಲಾಟೆಯೊಂದಿಗೆ ಫೀಲ್ಡ್ ಗೆ ಇಳಿದಿದ್ದ ಶುಭಕರ ಶೆಟ್ಟಿ ಕೊಲೆ, ಕೊಲೆ ಯತ್ನ, ಹಪ್ತಾ ವಸೂಲಿ ಸೇರಿದಂತೆ ಹಲವು ಪಾತಕ ಕೃತ್ಯದಲ್ಲಿ ತೊಡಗಿ ಎಕ್ಕೂರು ಬಾಬಾ ಆಗಿ ಫೇಮಸ್ ಆಗಿದ್ದರು.
ಕಳೆದ ಹತ್ತು ವರ್ಷದಿಂದ ಪಾತಕ ಲೋಕದ ಸಂಪರ್ಕದಿಂದ ದೂರ ಇದ್ದು ಹಿಂದೂ ಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ರೌಡಿಸಂನಿಂದ ದೂರವಿದ್ದು ಟ್ಯಾಂಕರ್, ಕಲ್ಲಿನ ಕೋರೆ ಹೀಗೆ ಬೇರೆ ಬೇರೆ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು. ಎಕ್ಕೂರು ಬಾಬ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಸಾವಿರಾರು ಕಾರ್ಯಕರ್ತರು, ಹಿತೈಷಿಗಳು ಆಗಮಿಸಿದ್ದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.