ಮಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸುವ ಸೇತುವೆ ಬಿರುಕು – ಬದಲಿ ಮಾರ್ಗ ವ್ಯವಸ್ಥೆ

Public TV
1 Min Read

ಮಂಗಳೂರು: ಏರ್ ಪೋರ್ಟಿಗೆ ತೆರಳುವ ಮರವೂರು ಮುಖ್ಯ ಸೇತುವೆ ಬಿರುಕು ಬಿಟ್ಟಿದೆ. ಕಾವೂರು ಸಮೀಪದ ಮರವೂರಿನ ಫಲ್ಗುಣಿ ನದಿಯ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದನ್ನು ತಿಳಿದ ಕಾವೂರು ಪೊಲೀಸರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಹಾಕಿದ್ದು ಹೆಚ್ಚಿನ ಅಪಾಯವಾಗುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲಾಗಿದೆ.

ಸೋಮವಾರ ರಾತ್ರಿಯೇ ಹಿರಿಯ ಅಧಿಕಾರಿಗಳು ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕ ಉಮಾನಾಥ್ ಕೋಟ್ಯಾನ್, ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸ್ಥಳಕ್ಕೆ ಆಗಮಿಸಿದ್ದು ಬ್ಯಾರಿಕೇಡ್ ಹಾಕಿ, ರಸ್ತೆಯನ್ನು ಬಂದ್ ಮಾಡಲು ಸೂಚಿಸಿದ್ದರು. ಮಂಗಳೂರು ನಗರದಿಂದ ಬಜ್ಪೆ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಸಂಪರ್ಕ ಕಡಿತಗೊಂಡಿರೋದ್ರಿಂದ ಬಜ್ಪೆ ಏರ್‍ಪೋರ್ಟ್‍ಗೆ ತೆರಳುವ ವಾಹನಗಳನ್ನು ಕಾವೂರಿನಲ್ಲಿ ಡೈವರ್ಟ್ ಮಾಡಲಾಗುತ್ತಿದೆ.

ಕಾವೂರು ಕಡೆಯಿಂದ ಕಟೀಲು, ಬಜ್ಪೆಗೆ ತೆರಳುವ ವಾಹನಗಳಿಗೂ ಸಂಚಾರಕ್ಕೆ ಅವಕಾಶ ಇಲ್ಲ. ಮಂಗಳೂರು ನಗರ ಭಾಗದಿಂದ ಬಜ್ಪೆಗೆ ತೆರಳಬೇಕಿದ್ದರೆ ಇನ್ನು ನಂತೂರು, ವಾಮಂಜೂರು, ಗುರುಪುರ, ಕೈಕಂಬ, ಬಜ್ಪೆ ಮೂಲಕ ಸುತ್ತು ಬಳಸಿ ತೆರಳಬೇಕಾಗಿದೆ. ಉಡುಪಿಯಿಂದ ಬರುವವರೂ ಮುಲ್ಕಿ, ಕಿನ್ನಿಗೋಳಿ, ಕಟೀಲು ಮಾರ್ಗವಾಗಿ ಬಜ್ಪೆಗೆ ಬರಬೇಕಾಗುತ್ತದೆ. ಮಂಗಳೂರು ಗ್ರಾಮೀಣ ಭಾಗದಿಂದ ನಗರಕ್ಕೆ ಪ್ರಮುಖ ಕೊಂಡಿಯಾಗಿದ್ದ ಸೇತುವೆ ಇಂದು ಕುಸಿಯುವ ಭೀತಿಯಲ್ಲಿದೆ. ಇಲ್ಲಿ ಹೊಸ ಸೇತುವೆ ಕಾಮಗಾರಿ ನಡಿಯುತ್ತಿದ್ದು, ಒಂದೇ ಭಾಗದಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಸೇತುವೆ ಒಂದು ಭಾಗದ ಪಿಲ್ಲರ್ ಕುಸಿದು ಸೇತುವೆ ಬಿರುಕು ಬಿಟ್ಟಿದೆ. ಇದನ್ನೂ ಓದಿ: ಬೀದರ್‌ನಲ್ಲಿ ಅಪರೂಪದ ನೀಲ್‍ಗಾಯ್ ಪ್ರತ್ಯಕ್ಷ- ರೈತರಲ್ಲಿ ಆತಂಕ

Share This Article
Leave a Comment

Leave a Reply

Your email address will not be published. Required fields are marked *