ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಅಸ್ಪತ್ರೆಯಲ್ಲಿ ಒಂದೇ ತಿಂಗಳಲ್ಲಿ 800 ಶಿಶುಗಳ ಜನನ

Public TV
2 Min Read

– ಆಸ್ಪತ್ರೆಯ ಇತಿಹಾಸದಲ್ಲೇ ದಾಖಲೆ

ಮಂಗಳೂರು: ಸರ್ಕಾರಿ ಆಸ್ಪತ್ರೆ ಅಂದ್ರೆ ಜನ ಮಾರುದ್ದ ಓಡ್ತಾರೆ. ಸರಿಯಾದ ಚಿಕಿತ್ಸೆ ಸಿಗೋದಿಲ್ಲ ಅನ್ನೋರೇ ಹೆಚ್ಚು. ಆದ್ರೆ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ಖಾಸಗಿ ಆಸ್ಪತ್ರೆಗಿಂತ ಏನು ಕಡಿಮೆ ಇಲ್ಲ ಎನ್ನುವಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಕೊರೊನಾದ ಬಳಿಕ ಜನ ಈ ಆಸ್ಪತ್ರೆಯತ್ತ ಮುಗಿ ಬೀಳಲಾರಂಭಿಸಿದ್ದಾರೆ. ಈ ಆಸ್ಪತ್ರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸುಮಾರು 800 ಶಿಶುಗಳ ತಿಂಗಳೊಂದರಲ್ಲೇ ಜನಿಸುವ ಮೂಲಕ ದಾಖಲೆ ನಿರ್ಮಿಸಿದೆ.

ಪ್ರತಿ ತಿಂಗಳು ಈ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯಲ್ಲಿ 400ರಿಂದ 450 ಮಕ್ಕಳ ಜನನವಾಗುತಿತ್ತು. ಕಳೆದ ಸೆಪ್ಟೆಂಬರ್ ನಲ್ಲಿ ಸುಮಾರು 600 ಶಿಶುಗಳು ಜನಿಸಿದ್ದವು. ಆದರೆ ಅಕ್ಟೋಬರ್ ತಿಂಗಳಿನಲ್ಲಿ 800 ಅಸುಪಾಸು ಸಂಖ್ಯೆಯಲ್ಲಿ ಶಿಶುಗಳು ಜನಿಸಿದ್ದು ಮಾತ್ರ ವಿಶೇಷ. 800ರ ಗಡಿ ದಾಟಿರುವ ಈ ಹೆರಿಗೆಯಲ್ಲಿ 379 ಸಿಸೇರಿಯನ್ ಹೆರಿಗೆಯಾಗಿದ್ರೆ, ಇನ್ನುಳಿದ ಎಲ್ಲವೂ ನಾರ್ಮಲ್ ಡೆಲಿವರಿ ಎಂಬುದು ಇನ್ನೊಂದು ಗುಡ್ ನ್ಯೂಸ್. ಕೇವಲ ಒಂದೇ ತಿಂಗಳಿನಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶಿಶುಗಳ ಜನನವಾಗಿರುವುದು ಆಸ್ಪತ್ರೆಯ ಇತಿಹಾಸದಲ್ಲೇ ಇದೇ ಮೊದಲು.

ಲೇಡಿಗೋಶನ್ ಆಸ್ಪತ್ರೆ ಸರ್ಕಾರಿ ಹೆರಿಗೆ ಆಸ್ಪತ್ರೆಯಾಗಿದ್ದರೂ, ಸಹ ಇಲ್ಲಿ ಸಿಗುವ ಸೇವೆ ಬೇರೆ ಯಾವುದೇ ಖಾಸಗಿ ಆಸ್ಪತ್ರೆಗಿಂತ ಕಡಿಮೆಯೇನಿಲ್ಲ. ಆಸ್ಪತ್ರೆಯಲ್ಲಿ ಸಿಗುವ ಗುಣಮಟ್ಟದ ಸೇವೆ, ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆ, ಸಮಸ್ಯೆ ನಿವಾರಣೆ ಸೇರಿದಂತೆ ರೋಗಿಗಳಿಗೆ ಸೂಕ್ತ ಸ್ಪಂದನೆ ನಿರಂತರ ಸಿಗುತ್ತಿರುವುದೇ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿ ಸ್ತ್ರೀಯರು ದಾಖಲಾಗುವುದಕ್ಕೆ ಕಾರಣವಾಗಿದೆ.

ಈ ಆಸ್ಪತ್ರೆಗೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಮಾತ್ರವಲ್ಲದೇ ಉಡುಪಿ, ದಾವಣಗೆರೆ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಪಕ್ಕದ ಕೇರಳ ರಾಜ್ಯದಿಂದಲೂ ಹೆರಿಗೆಗೆಂದು ಗರ್ಭಿಣಿಯರನ್ನು ಕರೆತರಲಾಗುತ್ತೆ. ಈ ಆಸ್ಪತ್ರೆಯಲ್ಲಿ 272 ಹಾಸಿಗೆ ಸಾಮಥ್ರ್ಯವಿದ್ದು, ಹೆಚ್ಚುವರಿ 28 ಬೆಡ್‍ಗಳಿವೆ. ನವಜಾತ ಶಿಶು ವಿಭಾಗದಲ್ಲಿ 12 ವೆಂಟಿಲೇಟರ್ ಸೇರಿದಂತೆ ಅತ್ಯಾಧುನಿಕ ಚಿಕಿತ್ಸಾ ಉಪಕರಣಗಳಿವೆ. ಕೊರೊನಾದ ಬಳಿಕ ಈ ಆಸ್ಪತ್ರೆಗೆ ಬರುವವರ ಸಂಖ್ಯೆಯೂ ಹೆಚ್ಚಾಗಿರೋದು ಸಂತೋಷದ ವಿಚಾರ. ಒಟ್ಟಿನಲ್ಲಿ ಮಂಗಳೂರಿನ ಈ ಸರ್ಕಾರಿ ಲೇಡಿಗೋಶನ್ ಹೆರಿಗೆ ಆಸ್ಪತ್ರೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೂ ಮಾದರಿ ಆಸ್ಪತ್ರೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *