ಮಂಗಳೂರಿನ ನಾಲ್ಯಪದವು ಶಾಲಾ ಮಕ್ಕಳಿಗೆ ವೇದವ್ಯಾಸ ಕಾಮತ್ ದೇಣಿಗೆಯಿಂದ ಟ್ಯಾಬ್‌ ವಿತರಣೆ

Public TV
1 Min Read

ಮಂಗಳೂರು: ಪಬ್ಲಿಕ್ ಟಿವಿ ಮತ್ತು ರೋಟರಿ ಸಂಸ್ಥೆಯ ಮಹತ್ವಾಕಾಂಕ್ಷೆಯ ಯೋಜನೆ ಜ್ಞಾನ ದೇವಿಗೆ ಕಾರ್ಯಕ್ರಮ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಶಕ್ತಿನಗರದ ನಾಲ್ಯಪದವು ಸರ್ಕಾರಿ ಫ್ರೌಡ ಶಾಲೆಯ 29 ವಿದ್ಯಾರ್ಥಿಗಳಿಗೆ 15 ಟ್ಯಾಬ್ ವಿತರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅವರು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರ ದೇಣಿಗೆಯಿಂದ ಈ ಟ್ಯಾಬ್‍ಗಳನ್ನು ನೀಡಲಾಗಿದ್ದು ಸ್ವತಃ ಶಾಸಕರೇ ವಿತರಿಸಿದರು.

ಟ್ಯಾಬ್‍ಗಳನ್ನು ಪಡೆದ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸುವ ಭರವಸೆ ನೀಡಿದರು. ಮನೆಯಲ್ಲಿ ಮೊಬೈಲ್ ಇದ್ದರೂ ನೆಟ್ವರ್ಕ್ ಸಮಸ್ಯೆ ಕಾಡುತ್ತಿತ್ತು. ಒಂದು ಮೊಬೈಲನ್ನು ಕುಟುಂಬದವರು ತೆಗೆದುಕೊಂಡು ಹೋಗುತ್ತಿದ್ದರು. ಇದೀಗ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಪಬ್ಲಿಕ್ ಟಿವಿ, ರೋಟರಿ ಸಂಸ್ಥೆಗೆ ಧನ್ಯವಾದ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಡಿಡಿಪಿಐ ಮಲ್ಲೇಸ್ವಾಮಿ, ಸ್ಥಳೀಯ ಕಾರ್ಪೋರೇಟರ್ ಗಳಾದ ವನಿತಾ ಪ್ರಸಾದ್ ಹಾಗೂ ಶಕೀಲಾ ಕಾವ, ರೋಟರಿ ಸಂಸ್ಥೆಯ ಡಿಸ್ಟ್ರಿಕ್ಟ್ ಅಸಿಸ್ಟೆಂಟ್ ಗವರ್ನರ್ ಡಾ.ಶಿವಪ್ರಸಾದ್, ಶಾಲಾಭಿವೃದ್ದಿ ಮಂಡಳಿಯ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪಬ್ಲಿಕ್ ಟಿವಿ, ರೋಟರಿ ಯಶಸ್ವಿ ಕಾರ್ಯಕ್ರಮದಲ್ಲಿ ನಾನು ಕೈ ಜೋಡಿಸಿದ್ದೇನೆ ಎಂಬುವುದು ಬಹಳ ಸಂತಸದ ವಿಚಾರ. ಸಾಮಾಜಿಕ ಚಟುವಟಿಕೆಯಲ್ಲಿ ಒಬ್ಬ ರಾಜಕಾರಣಿಯಾಗಿ ಬಹಳ ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಂಡ ಖುಷಿ ಆಗುತ್ತಿದೆ. ಮಾಧ್ಯಮವೊಂದು ಮಾದರಿ ಕಾರ್ಯಕ್ರಮ ಮಾಡುತ್ತಿದೆ. ಜನ ಮುಂದೆ ಬಂದು ಸರಕಾರಿ ಶಾಲೆಯ ವಿದ್ಯಾರ್ಥಿಗಳ ಹಿತಕ್ಕಾಗಿ ಸಹಾಯ ಮಾಡಬೇಕು ಎಂದು ಟ್ಯಾಬ್‍ನ ದಾನಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಟ್ಯಾಬ್‍ಗಳನ್ನು ಹತ್ತನೇ ತರಗತಿ ವಿದ್ಯಾರ್ಥಿಗಳು ಬಳಸಿ ಮುಂದೆ ಅದನ್ನು ಶಾಲೆಗೆ ವಾಪಸ್ ಕೊಡಬೇಕು. ಇದು ಸರಕಾರಿ ಶಾಲೆಯ ಸೊತ್ತು. ಮಕ್ಕಳ ಮುಂದಿನ ಪರೀಕ್ಷೆಗೆ ಜೀವನಕ್ಕೆ ಜ್ಞಾನದೀವಿಗೆ ದಾರಿದೀಪವಾಗಲಿ. ಇಂತಹ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಸಂತಸದ ವಿಚಾರ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *