ಮಂಗಳೂರಲ್ಲಿ 16.80 ಲಕ್ಷದ ಸ್ಟಾಂಪ್ ಡ್ರಗ್ಸ್ ವಶ- ಕಿಂಗ್ ಪಿನ್ ಬಂಧನ

Public TV
1 Min Read

– ಶಿವನ ಚಿತ್ರವಿರುವ ಎಲ್‍ಎಸ್‍ಡಿ ಸ್ಟಾಂಪ್ ಡ್ರಗ್ಸ್ ಪತ್ತೆ

ಮಂಗಳೂರು: ನಗರದ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐಷಾರಾಮಿ ವ್ಯಕ್ತಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಮೂಲಕ ಡ್ರಗ್ಸ್ ವಿರುದ್ಧದ ಸಮರವನ್ನು ಮುಂದುವರಿಸಿದ್ದಾರೆ.

ನಿಷೇಧಿತ ಮಾದಕವಸ್ತು ಎಲ್‍ಎಸ್‍ಡಿ ಮಾರಾಟ ಮಾಡುತ್ತಿದ್ದ ಕೇರಳದ ಕ್ಯಾಲಿಕಟ್ ಮೂಲದ ಆರೋಪಿ ಮೊಹಮ್ಮದ್ ಅಜಿನಾಸ್ ನನ್ನು ಖೆಡ್ಡಾಕೆ ಬೀಳಿಸಿದ್ದಾರೆ. ಈತ ವಿದ್ಯಾರ್ಥಿಯಾಗಿದ್ದು, ಪಿ.ಜಿಯಲ್ಲಿ ವಾಸವಾಗಿದ್ದ. ನಗರದ ಕದ್ರಿ ಮೈದಾನದಲ್ಲಿ ಗ್ರಾಹಕರ ಬರುವಿಕೆಗಾಗಿ ಕಾಯುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು. 16.80ಲಕ್ಷ ರೂ. ಮೌಲ್ಯದ 15.15 ಗ್ರಾಂ ತೂಕದ 840 ಎಲ್.ಎಸ್.ಡಿ ಸ್ಟಾಂಪ್ ಡ್ರಗ್ಸ್‍ನ್ನು ರೆಡ್ ಹ್ಯಾಂಡ್ ಆಗಿ ವಶಪಡಿಸಿಕೊಂಡಿದ್ದಾರೆ.

ಆರೋಪಿ ಶಿವನ ಚಿತ್ರ ಇರುವ ಎಲ್.ಎಸ್.ಡಿ ಸ್ಟಾಂಪ್ ಡ್ರಗ್ ಇಟ್ಟುಕೊಂಡಿದ್ದ. ಈತನಿಗೆ ಮಂಗಳೂರು ಮಾತ್ರವಲ್ಲದೆ ಕಾಸರಗೋಡು, ಗೋವಾದಲ್ಲೂ ಜಾಲವಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಮಂಗಳೂರು ನಗರದಲ್ಲಿ ಈತ ಐಷಾರಾಮಿ ವ್ಯಕ್ತಿಗಳಿಗೆ, ವಿದ್ಯಾರ್ಥಿಗಳಿಗೆ, ಹೈ ಎಂಡ್ ಪಾರ್ಟಿಗಳಿಗೆ ಈ ಡ್ರಗ್ಸ್ ಗಳನ್ನು ಸಪ್ಲೈ ಮಾಡುತ್ತಿದ್ದ. ಸದ್ಯ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಕದ್ರಿ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಈತನ ಡ್ರಗ್ಸ್ ಲಿಂಕ್ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಪ್ರಕರಣ ಭೇದಿಸಿರುವ ಡಿ.ಸಿ.ಪಿ ಹರಿರಾಂ ಶಂಕರ್ ನೇತೃತ್ವದ ತನಿಖಾ ತಂಡಕ್ಕೆ ಕಮೀಷನರ್ ಎನ್.ಶಶಿಕುಮಾರ್ ಅಭಿನಂದನೆ ಜೊತೆಗೆ 10 ಸಾವಿರ ರೂಪಾಯಿ ನಗದು ಪುರಸ್ಕಾರ ನೀಡಿದ್ದಾರೆ. ಪೊಲೀಸರ ಈ ಕೆಲಸ ಇಲಾಖೆಗೆ ಹೆಮ್ಮೆಯ ವಿಚಾರ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಕಳೆದ ಹತ್ತು ದಿನಗಳಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಎರಡು ಬೃಹತ್ ಡ್ರಗ್ಸ್ ಜಾಲವನ್ನು ಪೊಲೀಸ್ ತಂಡ ಭೇದಿಸಿದೆ. ಎರಡು ಪ್ರಕರಣದಲ್ಲಿ ಒಟ್ಟು 27.35 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *