ಮಂಗಳೂರಲ್ಲಿ ಮೀನಿನ ಹೊಟ್ಟೆಯಲ್ಲಿ ಸಿಕ್ತು 10 ಕೆ.ಜಿ. ಪ್ಲಾಸ್ಟಿಕ್!

Public TV
1 Min Read

ಮಂಗಳೂರು: ಪ್ಲಾಸ್ಟಿಕ್‍ನಿಂದಾಗಿ ಜೀವ ಸಂಕುಲವೇ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ನದಿ, ಸಮುದ್ರಗಳು ಪ್ಲಾಸ್ಟಿಕ್‍ನಿಂದ ತುಂಬುತ್ತಿವೆ. ಇದರಿಂದಾಗಿ ಜಲಚರಗಳಿಗೆ ಆಹಾರದ ಬದಲಿಗೆ ಪ್ಲಾಸ್ಟಿಕ್ ಸಿಗುತ್ತಿದೆ. ನಗರದ ಅತ್ತಾವರದಲ್ಲಿ ಇಂತಹದ್ದೇ ಅಚ್ಚರಿಯ ಘಟನೆಯೊಂದು ನಡೆದಿದ್ದು, ಮೀನಿನಂಗಡಿಗೆ ತಂದಿದ್ದ ರೀಫ್ ಕೋಡ್ ಫಿಶ್ ಹೊಟ್ಟೆಯಲ್ಲಿ ಬರೋಬ್ಬರಿ 10 ಕೆ.ಜಿ.ಯಷ್ಟು ಪ್ಲಾಸ್ಟಿಕ್ ತ್ಯಾಜ್ಯ ಪತ್ತೆಯಾಗಿದೆ.

ಮೀನನ್ನು ಸ್ವಚ್ಛಗೊಳಿಸುವಾಗ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಮಿಶ್ರಿತ ತ್ಯಾಜ್ಯಗಳನ್ನು ಅಂಗಡಿ ಕೆಲಸಗಾರ ಹೊರ ತೆಗೆದಿದ್ದಾರೆ. ಮೀನಿನ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಚೀಲ ನೋಡಿ ಅಂಗಡಿ ಮಾಲೀಕ ಆಘಾತಗೊಂಡಿದ್ದು, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸಮುದ್ರಕ್ಕೆ ಕಸ ಎಸೆಯುವುದರಿಂದಾಗುವ ಪರಿಣಾಮವೇನು ಎಂಬುದನ್ನು ತೋರಿಸಲು ವೀಡಿಯೋ ಮಾಡಿರುವುದಾಗಿ ಅಂಗಡಿ ಮಾಲೀಕ ವಿವರಿಸಿದ್ದಾರೆ.

ಇಂತಹ ಘಟನೆಯನ್ನು ಇದೇ ಮೊದಲ ಬಾರಿಗೆ ನೋಡಿದ್ದೇನೆ. ಇದೇ ರೀತಿ ಸಮುದ್ರಕ್ಕೆ ಪ್ಲಾಸ್ಟಿಕ್ ಎಸೆಯುವುದನ್ನು ಮುಂದುವರಿಸಿದರೆ ಮೀನುಗಳ ಸಂತಾನೋತ್ಪತ್ತಿ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಅವರು ತಿಳಿಸಿದ್ದಾರೆ.

ಮೀನುಗಳು ಸಾಮಾನ್ಯವಾಗಿ ಪ್ಲಾಸ್ಟಿಕ್ ತಿನ್ನುವುದಿಲ್ಲ. ಆಹಾರದ ವಿಚಾರದಲ್ಲಿ ಮೀನುಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಏನು ತಿನ್ನಬೇಕು ಎಂಬುದು ಅವುಗಳಿಗೆ ತಿಳಿದಿದೆ. ಸಮುದ್ರದ ತಳಭಾಗದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ತುಂಬಿರಬಹುದು. ಇದನ್ನೇ ಮೀನು ತಿಂದಿರಬಹುದು ಎಂದು ಮೀನುಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಹಾಗೂ ಡೀನ್ ಡಾ.ಎ. ಸೆಂಥಿಲ್ ಹೇಳಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ವೇಳೆ ಟ್ರಾಲರ್ ಗಳಿಗೆ ಶೇ.40-50ರಷ್ಟು ಪ್ಲಾಸ್ಟಿಕ್ ಸಿಗುತ್ತಿದೆ. ಟ್ರಾಲರ್‍ಗಳಿಗೆ ಸಿಕ್ಕಬಿದ್ದ ಈ ಮೀನು ಸಮುದ್ರದ ಆಳದಲ್ಲಿ ಪ್ಲಾಸ್ಟಿಕ್ ಸೇವಿಸಿರಬಹುದು ಎಂದು ಮೀನುಗಾರ ಮಾಹಿತಿ ನೀಡಿದ್ದಾನೆ.

ಮೀನುಗಳು ಮೈಕ್ರೋಪ್ಲಾಸ್ಟಿಕ್‍ಗಳನ್ನೂ ಸೇವಿಸುತ್ತದೆ. ಅವುಗಳ ಪಾಲಿಗೆ ಇದು ವಿಷಕಾರಿ. ಹೆಚ್ಚಿನ ಪ್ಲಾಸ್ಟಿಕ್ ತ್ಯಾಜ್ಯ ನದಿಗಳು ಹಾಗೂ ಚರಂಡಿಗಳ ಮೂಲಕ ಸಮುದ್ರ ಸೇರುತ್ತಿದೆ. ತ್ಯಾಜ್ಯ ಸಮುದ್ರ ಸೇರುವುದನ್ನು ತಡೆಯಲು ಸರ್ಕಾರ ಪ್ರತ್ಯೇಕ ಗ್ರಿಡ್ ನಿರ್ಮಿಸುವ ಅಗತ್ಯವಿದೆ. ಪ್ಲಾಸ್ಟಿಕ್ ತಿನ್ನಬಾರದು ಎಂದು ನಾವು ಮೀನುಗಳಿಗೆ ಹೇಳಲು ಸಾಧ್ಯವಿಲ್ಲ. ಆದರೆ ನಾವು ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಬಹುದು ಎಂದು ಓಷಿಯನ್ ಪ್ಲಾಸ್ಟಿಕ್ ರಿಸೈಕ್ಲಿಂಗ್ ಕೋಆರ್ಡಿನೇಟರ್ ನಾಗರಾಜ್ ರಾಘವ್ ಅಂಚನ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *