ಮಂಗಳಮುಖಿ ಹತ್ಯೆ ಪ್ರಕರಣ- ಆರೋಪಿ ಆಟೋ ಚಾಲಕನನ್ನು ಬಂಧಿಸಿದ ಪೊಲೀಸರು

Public TV
2 Min Read

– ತನ್ನ ಜೊತೆಗಿರುವ ವಿಡಿಯೋ ಲೀಕ್ ಮಾಡುವುದಾಗಿ ಮಂಗಳಮುಖಿ ಬೆದರಿಕೆ
– ವಿಡಿಯೋ ಲೀಕ್ ಆಗುವ ಭಯದಲ್ಲಿ ಮಂಗಳಮುಖಿ ಕೊಲೆ

ಚಿತ್ರದುರ್ಗ: ಮಂಗಳಮುಖಿ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿ ಆಟೋ ಚಾಲಕನನ್ನು ಬಂಧಿಸಿದ್ದಾರೆ.

ಜಿಲ್ಲೆಯ ಹಿರಿಯೂರು ತಾಲೂಕಿನ ಪಾಲವ್ವನಹಳ್ಳಿ ಬಳಿ ಆಗಸ್ಟ್ 28ರಂದು ಮಂಗಳಮುಖಿ ಅಂಜಲಿ(27) ಹತ್ಯೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಯ್ಯನಹಟ್ಟಿಯ ಆಟೋ ಚಾಲಕ ಮಧುಸೂಧನ್ (24) ನನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಟೋ ಚಾಲಕ ಮಧುಸೂಧನ್ ಮಂಗಳಮುಖಿ ಅಂಜಿ ಜೊತೆ ಲವ್ವಿ ಡವ್ವಿ ನಡೆಸಿದ್ದಾನೆ. ಇದನ್ನು ಅಂಜಲಿ ವಿಡಿಯೋ ಮಾಡಿಟ್ಟುಕೊಂಡಿದ್ದಳು. ಹೀಗೆ ಯಾವುದೋ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರಿಗೂ ಜಗಳವಾಗಿದೆ. ಈ ವೇಳೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಅಂಜಲಿ ಮಧುಸೂಧನ್‍ಗೆ ಬೆದರಿಕೆ ಹಾಕಿದ್ದಾಳೆ. ಅಂಜಲಿ ಬೆದರಿಕೆ ಹಾಕಿದ ಹಿನ್ನೆಲೆ ಹತ್ಯೆ ಮಾಡಿರುವುದಾಗಿ ಮಧು ತಪ್ಪೊಪ್ಪಿಕೊಂಡಿದ್ದಾನೆ.

ಭಿಕ್ಷೆ ಬೇಡುತ್ತಾ ತಮ್ಮ ಜೀವನ ಸಾಗಿಸುವ ಮಂಗಳಮುಖಿ ನಡುವೇ ಅಪರೂಪದ ವ್ಯಕ್ತಿತ್ವ ಎನಿಸಿದ್ದ ಚಿತ್ರದುರ್ಗದ ಮಂಗಳಮುಖಿ ಅಂಜಲಿ (34) ಯಾರಿಗೂ ಭಾರವಾಗದೇ ತನ್ನಲ್ಲಿದ್ದ ಕಲೆಯನ್ನು ಬಂಡವಾಳವಾಗಿಸಿಕೊಂಡು ಬದುಕು ಕಟ್ಟಿಕೊಂಡಿದ್ದರು. ಚಿತ್ರದುರ್ಗದ ಗಾಂಧಿ ನಗರದಲ್ಲೊಂದು ಬಾಡಿಗೆ ಮನೆಮಾಡಿಕೊಂಡಿದ್ದರು. ದೈನಂದಿನ ಜೀವನಕ್ಕಾಗಿ ತನ್ನಲ್ಲಿದ್ದ ನೃತ್ಯ, ಕರಗ ಹಾಗೂ ನಟನೆಯ ಕಲೆಯನ್ನೇ ಬಂಡವಾಳವನ್ನಾಗಿಸಿಕೊಂಡು ಬದುಕು ಕಟ್ಟಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಂಜಲಿಯ ಶವ ಭಾನುವಾರ ಬರ್ಬರವಾಗಿ ಕೊಲೆಯಾಗಿರುವ ಸ್ಥಿತಿಯಲ್ಲಿ ಪಾಲವ್ವನಹಳ್ಳಿ ಬಳಿಯ ಜಮೀನೊಂದರಲ್ಲಿ ಪತ್ತೆಯಾಗಿತ್ತು.

ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿರುವ ಶಂಕೆ ವ್ಯಕ್ತವಾಗಿತ್ತು. ಕಳೆದ ಮೂರು ವರ್ಷಗಳಿಂದ ಚಿತ್ರದುರ್ಗದಲ್ಲಿ ನೆಲೆಸಿದ್ದ ಈಕೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ಗೌರವ ಧನ ಪಡೆಯುತಿದ್ದಳು. ಘಟನೆ ಬಳಿಕ ಅಂಜಲಿಯೊಂದಿಗೆ ಹೆಚ್ಚಿನ ಒಡನಾಟ ಹಾಗೂ ಬಾಂಧವ್ಯವನ್ನು ಹೊಂದಿದ್ದ ಚಿತ್ರದುರ್ಗದ ಮಂಗಳಮುಖಿಯರು ಘಟನಾ ಸ್ಥಳಕ್ಕೆ ಧಾವಿಸಿ ಕಣ್ಣೀರಿಟ್ಟಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು. ಸ್ಥಳಕ್ಕೆ ಎಪ್‍ಸಿ ರಾಧಿಕಾ ಹಾಗೂ ಎಎಸ್‍ಪಿ ನಂದಗಾವಿ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದ ಪೊಲೀಸರು, ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *