ಭೂಮಿ ರಹಿತ ರೈತರ ಸಹಾಯಕ್ಕೆ ಮುಂದಾದ ಜೂಹಿ ಚಾವ್ಲಾ

Public TV
2 Min Read

ಮುಂಬೈ: ಲಾಕ್‍ಡೌನ್ ರೈತರನ್ನು ಹಿಂಡಿ ಹಿಪ್ಪೆ ಮಾಡಿದೆ. ಬೆಳೆ ಕೈಗೆ ಬಂದರೂ ಇತ್ತ ದರ ಸಿಗದೆ ರೈತರು ಕಂಗಾಲಾಗಿದ್ದರೆ, ಇನ್ನೊಂದೆಡೆ ಭೂಮಿ ಇಲ್ಲದೆ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ರೈತರು ಇನ್ನೂ ಹೆಚ್ಚಿನ ಸಂಕಷ್ಟದಲ್ಲಿದ್ದಾರೆ. ತುತ್ತು ಅನ್ನಕ್ಕೂ ಕಷ್ಟ ಪಡುತ್ತಿದ್ದಾರೆ. ಇಂತಹವರಿಗೆ ಸಹಾಯ ಮಾಡಲು ಬಾಲಿವುಡ್ ನಟಿ ಜೂಹಿ ಚಾವ್ಲಾ ಮುಂದಾಗಿದ್ದು, ಅವರಿಗಾಗಿ ಹೊಸ ಯೋಜನೆ ರೂಪಿಸಿದ್ದಾರೆ.

ಕೊರೊನಾ ಹಿನ್ನೆಲೆ ಸಾಕಷ್ಟು ಜನ ಸಂಕಷ್ಟ ಎದುರಿಸುತ್ತಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಬಾಲಿವುಡ್ ನಟ, ನಟಿಯರು, ಧನಿಕರು ಬಡವರ ನಿರ್ಗತಿಕರ ಸಹಾಯಕ್ಕೆ ಧಾವಿಸಿದ್ದಾರೆ. ಹಲವು ನಟ, ನಟಿಯರು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಕೆಲವರು ಅಗತ್ಯ ವಸ್ತುಗಳನ್ನು ನೀಡುತ್ತಿದ್ದರೆ, ಇನ್ನೂ ಕೆಲವರು ಊಟವನ್ನೇ ನೀಡುತ್ತಿದ್ದಾರೆ. ಆದರೆ ಪ್ರೇಮ ಲೋಕದ ಬೆಡಗಿ ಜೂಹಿ ಚಾವ್ಲಾ ರೈತರಿಗೆ ವಿಭಿನ್ನವಾಗಿ ಸಹಾಯ ಮಾಡುತ್ತಿದ್ದಾರೆ. ತಮ್ಮದೇ ಸ್ವಂತ ಭೂಮಿಯಲ್ಲಿ ಕೃಷಿ ಮಾಡಲು ಆಹ್ವಾನ ನೀಡಿದ್ದಾರೆ.

ಭೂಮಿ ರಹಿತ ರೈತರಿಗೆ ಈ ಕುರಿತು ಆಹ್ವಾನ ನೀಡಿದ್ದು, ಮುಂಬೈನ ಹೊರ ವಲಯದಲ್ಲಿರುವ ವಾಡಾ ಫಾರ್ಮ್ ಹೌಸ್ ಬಳಿ 2 ಕಡೆ ಜಮೀನು ಹೊಂದಿದ್ದು, ಸಾವಯವ ಕೃಷಿ ಮಾಡುವಂತೆ ಆಹ್ವಾನ ನೀಡಿದ್ದಾರೆ. ಜೂಹಿ ಅವರಿಗೆ ಈ ಜಮೀನು ತಂದೆ ನೀಡಿದ್ದಾರಂತೆ. 20 ವರ್ಷಗಳ ಹಿಂದೆ ನಮ್ಮ ತಂದೆ ನಿವೃತ್ತರಾದ ನಂತರ ಮುಂಬೈ ಹೊರ ವಲಯದ ವಾಡಾದಲ್ಲಿ ಜಮೀನು ಖರೀದಿಸಿದರು. ಇದು ವೈತಾರ್ಣ ನದಿಯ ದಡದಲ್ಲಿದೆ. ನಮ್ಮ ತಂದೆಯವರು ಹೊಲದ ಕೆಲಸದಲ್ಲಿ ಬ್ಯುಸಿಯಾಗಿದ್ದರು. ನಾನು ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದೆ. ಕಳೆದ 10 ವರ್ಷಗಳ ಹಿಂದೆ ಅವರು ಸಾವನ್ನಪ್ಪಿದರು. ನಂತರ ಅದನ್ನು ನನ್ನ ಸುಪರ್ದಿಗೆ ಬಂತು ಎಂದು ಹೇಳಿಕೊಂಡಿದ್ದಾರೆ.

ಅಲ್ಲದೆ ಪತಿ ಜಯ್ ಮೆಹ್ತಾ ಸಹ ತಮ್ಮ ರೆಸ್ಟೋರೆಂಟ್‍ಗಾಗಿ ತರಕಾರಿ ಬೆಳೆಯಲು ನಿರ್ಧರಿಸಿದ್ದರು. ಹೀಗಾಗಿ ಸಾವಯವ ತೋಟಗಾರಿಕೆ ಕುರಿತು ಅಧ್ಯಯನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸಾವಯವ ಕೃಷಿಗೆ ಒತ್ತು ನೀಡುವ ಜೂಹಿ, ತಮ್ಮ ಭೂಮಿಯಲ್ಲಿ ಕೃಷಿ ಮಾಡುವ ರೈತರಿಗೂ ಇದೇ ಕಂಡೀಶನ್ ಹಾಕಿದ್ದಾರೆ. ರೈತರು ಸಾವಯವ ಕೃಷಿ ಮೂಲಕ ಭತ್ತ ಬೆಳೆದರೆ ಅದರ ಫಸಲಿನಲ್ಲಿ ಒಂದು ಪಾಲು ನೀಡುವುದಾಗಿ ಹೇಳಿದ್ದಾರೆ.

ಇದು ಹೊಸ ಪದ್ಧತಿಯೇನಲ್ಲ, ದಶಕಗಳ ಹಿಂದಿನ ಕೃಷಿ ಪದ್ಧತಿಯೇ ಆಗಿದೆ. ಇದು ಚಾಣಾಕ್ಷ ಮಾರ್ಗವಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಗರವಾಸಿಗಳು ಪಠ್ಯದ ಮೂಲಕ ನೈಸರ್ಗಿಕತೆ, ಕೃಷಿ ಬಗ್ಗೆ ತಿಳಿದುಕೊಂಡಿರುತ್ತೇವೆ. ಆದರೆ ನಮ್ಮ ರೈತರ ಬದುಕೇ ಕೃಷಿ. ಹೀಗಾಗಿ ಭೂಮಿ, ಮಣ್ಣು, ಗಾಳಿ ಬಗ್ಗೆ ಅವರಿಗೆ ವಿಶೇಷವಾಗಿ ಹೇಳಬೇಕಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *