ಭಾರತ ಚೀನಾ ಗಡಿಯಲ್ಲಿ ಗುಂಡಿನ ಕಾಳಗ ನಡೆಯಲ್ಲ ಯಾಕೆ?

Public TV
3 Min Read

ʼಭಾರತ ಮತ್ತು ಪಾಕಿಸ್ತಾನ ಮಧ್ಯೆ ಗುಂಡಿನ ಕಾಳಗʼ, ʼಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿʼ ಈ ರೀತಿಯ ಹೆಡ್‌ಲೈನ್‌ಗಳನ್ನು ನೀವು ಓದಿರಬಹುದು. ಆದರೆ ʼಭಾರತ ಚೀನಾ ನಡುವೆ ಗುಂಡಿನ ದಾಳಿʼ ಈ ರೀತಿಯ ವರದಿಗಳು ಪ್ರಕಟವಾಗುವುದಿಲ್ಲ. ಯಾಕೆ ಈ ಗುಂಡಿನ ದಾಳಿ ನಡೆಯುವುದಿಲ್ಲ ಎಂಬ ಪ್ರಶ್ನೆ ಏಳುವುದು ಸಹಜ. ಈ ಪ್ರಶ್ನೆಗೆ ಇತಿಹಾಸದಲ್ಲಿ ಉತ್ತರ ಸಿಗುತ್ತದೆ.

1967 ರಲ್ಲಿ ನಾಥು ಲಾ ಮತ್ತು ಚೋ ಲಾ ಬಳಿ ನಡೆದ ಭಾರತ ಮತ್ತು ಚೀನಾ ಸೈನಿಕರ ಸಂಘರ್ಷದಲ್ಲಿ ಭಾರತದ 88 ಮತ್ತು ಚೀನಾದ 340 ಸೈನಿಕರು ಸಾವನ್ನಪ್ಪಿದರು. ಇದಾದ ಬಳಿಕ 1975 ರಲ್ಲಿ ಅರುಣಾಚಲ ಪ್ರದೇಶದ ತುಲುಂಗ್ ಲಾ ಪಾಸ್‌ ಗಡಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಅಸ್ಸಾಂ ರೈಫಲ್ಸ್ ನಾ ನಾಲ್ಕು ಯೋಧರನ್ನು ಚೀನಾ ಸೇನೆ ಹತ್ಯೆ ಮಾಡಿತ್ತು. ಇದೆ ಕೊನೆಯ ಬಾರಿ ನಡೆದ ಗುಂಡಿನ ದಾಳಿ. ಇದಾದ ಬಳಿಕ ಇಲ್ಲಿಯವರೆಗೆ ಭಾರತ ಮತ್ತು ಚೀನಾ ನಡುವೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ.

ಭಾರತ ಮತ್ತು ಚೀನಾ ನಡುವೆ ಅಂತಾರಾಷ್ಟ್ರೀಯ ಗಡಿ ರೇಖೆ ಇಲ್ಲದ ಕಾರಣ ಗಡಿಯಲ್ಲಿ ಈ ರೀತಿ ಕಿತ್ತಾಟಗಳು ನಡೆಯುತಿತ್ತು. ಎರಡು ದೇಶಗಳ ಗಡಿಯನ್ನು ವಾಸ್ತವ ಗಡಿ ರೇಖೆಯಿಂದ(ಎಲ್‌ಎಸಿ – ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಗುರುತಿಸಲಾಗಿದೆ. ಆದರೆ ಹಲವು ಭಾಗಗಳಲ್ಲಿ ಭಾರತ ಮತ್ತು ಚೀನಾದ ನಡುವಿನ ಗಡಿಗಳು ನಿರ್ಧಾರವಾಗಿಲ್ಲ. ಹೀಗಾಗಿ ಹಲವು ಬಾರಿ ಎರಡು ಕಡೆಯ ಸೈನಿಕರು ಗಡಿಯಲ್ಲಿ ಪಹರೆ ಕಾಯುತ್ತಿದ್ದಾಗ ಕಿತ್ತಾಟಗಳು ನಡೆಯುತ್ತಿದ್ದವು. ಎರಡು ಕಡೆಯಿಂದಲೂ ಪ್ರತಿರೋಧಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ 1993, 1996ರಲ್ಲಿ ಭಾರತ ಮತ್ತು ಚೀನಾ ನಡುವೆ ಒಪ್ಪಂದ ನಡೆಯಿತು.

1993ರ ಒಪ್ಪಂದದ ಪ್ರಕಾರ ಎಲ್‌ಎಸಿ ದಾಟಿ ಯಾರೇ ಒಳಬಂದರೂ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಬೇಕು. 1996ರ ಪ್ರಕಾರ ಎಲ್‌ಎಸಿಯ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಎರಡು ದೇಶಗಳು ಯಾವುದೇ ಸ್ಫೋಟ ನಡೆಸಬಾರದು, ಗುಂಡಿನ ದಾಳಿ ನಡೆಸಕೂಡದು ಎಂಬ ಒಪ್ಪಂದಕ್ಕೆ ಬರಲಾಗಿದೆ. ಹೀಗಾಗಿ ಭಾರತ ಚೀನಾ ಗಡಿಯಲ್ಲಿ ಸೈನಿಕರು ಈ ಒಪ್ಪಂದಕ್ಕೆ ಬದ್ಧವಾಗಿದ್ದಾರೆ. ಗುಂಡಿನ ದಾಳಿಯ ಬದಲು ಪರಸ್ಪರ ಕಲ್ಲು, ದೊಣ್ಣೆಗಳಿಂದ ಬಡಿದಾಡಿಕೊಳ್ಳುತ್ತಾರೆ.

ಏನಿದು ಎಲ್‍ಎಸಿ?
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪದೇ ಪದೇ ಗುಂಡಿನ ಚಕಮಕಿ ಬಂದಾಗ ಎಲ್‍ಒಸಿ(ಗಡಿ ನಿಯಂತ್ರಣ ರೇಖೆ ಅಥವಾ ಲೈನ್ ಆಫ್ ಕಂಟ್ರೋಲ್) ಪದ ಬರುತ್ತದೆ. ಭಾರತ ಮತ್ತು ಪಾಕಿಸ್ತಾನವನ್ನು ಜಮ್ಮು ಕಾಶ್ಮೀರದಲ್ಲಿ ಬೇರ್ಪಡಿಸುವ ಅಂತಾರಾಷ್ಟ್ರೀಯ ಗಡಿಯನ್ನು ಎಲ್‍ಒಸಿ ಎಂದು ಕರೆಯಲಾಗುತ್ತದೆ. ಅದೇ ರೀತಿಯಾಗಿ ಈ ಹಿಂದೆ ರಾಜ್ಯವಾಗಿದ್ದ ಜಮ್ಮು ಕಾಶ್ಮೀರದಲ್ಲಿ ಭಾರತ ಮತ್ತು ಚೀನಾವನ್ನು ಬೇರ್ಪಡಿಸುವ ಗಡಿಯನ್ನು ಎಲ್‍ಎಸಿ(ಗಡಿ ವಾಸ್ತವಿಕ ನಿಯಂತ್ರಣ ರೇಖೆ ಅಥವಾ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಎಂದು ಕರೆಯಲಾಗುತ್ತದೆ. 1962ರಲ್ಲಿ ಭಾರತ ಚೀನಾ ನಡುವೆ ಯುದ್ಧ ನಡೆಯಿತು. ಈ ಯುದ್ಧದ ಬಳಿಕ ಮುಂದೆ ಎರಡು ರಾಷ್ಟ್ರಗಳು ತಮ್ಮ ಭೂ ಪ್ರದೇಶವನ್ನು ಗುರುತಿಸಲು ಎಲ್‍ಎಸಿಯನ್ನು ಬಳಸುತ್ತಿವೆ. ಈ ಎಲ್‍ಎಸಿ ಅಂತರಾಷ್ಟ್ರೀಯ ಗಡಿ ರೇಖೆಯಲ್ಲ. ಈ ಲಡಾಖ್ ಪೂರ್ವ ಭಾಗದಲ್ಲಿರುವ ಅಕ್ಸಾಯ್ ಚೀನಾ ನಮ್ಮದು ಎನ್ನುವುದು ಭಾರತದ ವಾದ.

ಸಂಘರ್ಷ ಶುರುವಾಗಿದ್ದು ಹೇಗೆ?
ಗಾಲ್ವಾನ್‌ ನದಿ ಕಣಿವೆಯಲ್ಲಿ 5 ವಾರಗಳಿಂದ ನಡೆಯುತ್ತಿದ್ದ ಕಿತ್ತಾಟ ಮಾತುಕತೆಯ ಮೂಲಕ ಪರಿಹಾರ ಮಾಡಲು ಎರಡು ದೇಶಗಳು ನಿರ್ಧರಿಸಿತ್ತು. ಹೀಗಾಗಿ ಸೋಮವಾರ ಚೀನಾ ಸೈನಿಕರು ಜಾಗದಿಂದ ಹಿಂದಕ್ಕೆ ಸರಿಯಲು ಮುಂದಾಗಿದ್ದರು. ಗಾಲ್ವಾನ್ ನದಿ ಭೂಪ್ರದೇಶ ಬಳಿಯ ಪೆಟ್ರೋಲಿಂಗ್ ಪಾಯಿಂಟ್ 14ರ ಬಳಿ ಸ್ಥಾಪಿಸಲಾದ ಪೀಪಲ್ಸ್ ಲಿಬರೇಶನ್ ಸೇನೆ ಅಕ್ರಮವಾಗಿ ನಿರ್ಮಿಸಿದ್ದ ಟೆಂಟ್ ಅನ್ನು ಭಾರತೀಯ ಸೇನೆ ತೆರವು ಮಾಡಲು ಮುಂದಾಗುತ್ತಿದ್ದಂತೆ ಘರ್ಷಣೆ ಆರಂಭವಾಯಿತು.

ಪಾಯಿಂಟ್ 14 ರ ಮೇಲಿನ ಎತ್ತರ ಪ್ರದೇಶದಿಂದ ಕಲ್ಲು ತೂರುವ ಮೂಲಕ ಚೀನಾ ಸೈನಿಕರು ಮೊದಲು ದಾಳಿ ಮಾಡಿದರು. ಬಳಿಕ ಕಬ್ಬಣದ ಸರಳುಗಳ ಮೂಲಕ ಹಲ್ಲೆ ಮಾಡಿದ್ದಾರೆ. ಚೀನಾದ ಕುತಂತ್ರಕ್ಕೆ ಬಗ್ಗದ ಭಾರತೀಯ ಸೈನಿಕರು ಸರಿಯಾಗಿಯೇ ತಿರುಗೇಟು ನೀಡಿದರು. ಈ ವೇಳೆ ಸೈನಿಕರು ಪರಸ್ಪರ ಗು‌ಪಾಗಿ ಬಡಿದಾಡಿಕೊಂಡಿದ್ದಾರೆ. ಕಳೆದ ವಾರ ಲೆಫ್ಟಿನೆಂಟ್ ಕಮಾಂಡರ್ ಮಟ್ಟದಲ್ಲಿ ನಡೆದ ಸಭೆಯಲ್ಲಿ ಈ ಸ್ಥಳದಲ್ಲಿ ಹಾಕಿದ್ದ ಎರಡು ಸೇನೆಯ ಟೆಂಟ್‌ಗಳನ್ನು ತೆರವು ಮಾಡಲು ಮಾತುಕತೆ ನಡೆದಿತ್ತು.

ಮಂಗಳವಾರ ಈ ಸುದ್ದಿ ಆರಂಭದಲ್ಲಿ ಬಂದಾಗ ಗುಂಡಿನ ದಾಳಿ ನಡೆದಿದೆ. ಎರಡು ಕಡೆ ಸಾವು ನೋವು ಸಂಭವಿಸಿದೆ ಎಂಬ ಸುದ್ದಿಗಳು ಪ್ರಕಟವಾಗಿತ್ತು. ಕೂಡಲೇ ಭಾರತೀಯ ಸೇನೆ ಸ್ಪಷ್ಟನೆ ನೀಡಿ ಎರಡು ಕಡೆಯ ಸೇನೆ ಹಿಂದಕ್ಕೆ ಸರಿಯುವಾಗ ಈ ಸಂಘರ್ಷ ನಡೆದಿದೆ ಎಂಧು ತಿಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *