– 500 ಕೋಟಿ ಹಣದ ನಿರೀಕ್ಷೆಯಲ್ಲಿ ಸ್ಟಾರ್ ಸ್ಪೋರ್ಟ್ಸ್
ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗಾಗಿ ಎರಡು ತಂಡದ ಆಟಗಾರರು ಸಜ್ಜಾಗುತ್ತಿದ್ದರೆ ಇತ್ತ ಈ ಸರಣಿಯ ನೇರ ಪ್ರಸಾರದ ಹಕ್ಕನ್ನು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ 500 ಕೋಟಿ ಹಣದ ನಿರೀಕ್ಷೆಯಲ್ಲಿದೆ.
ಕಳೆದ ವರ್ಷ ಕೋವಿಡ್‍ನಿಂದಾಗಿ ಅನೇಕ ಪಂದ್ಯಾಟಗಳು ರದ್ದುಗೊಂಡಿದ್ದವು. ಇದರಿಂದ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದ ಭಾರತದ ಜನಪ್ರಿಯ ಕ್ರೀಡಾ ಚಾನಲ್ ಸ್ಟಾರ್ ಸ್ಪೋರ್ಟ್ಸ್ ಭಾರತ ಹಾಗೂ ಇಂಗ್ಲೆಂಡ್ ಸರಣಿಯಿಂದ ಈ ನಷ್ಟವನ್ನು ಸರಿದೂಗಿಸುವ ಕಾರ್ಯಕ್ಕೆ ಮುಂದಾಗುತ್ತಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ 4 ಟೆಸ್ಟ್, 5 ಟಿ20, ಮತ್ತು 3 ಏಕದಿನ ಸೇರಿ ಒಟ್ಟು 12 ಪಂದ್ಯಗಳು ನಡೆಯಲಿದೆ. ಭಾರತದಲ್ಲಿ ನೇರ ಪ್ರಸಾರದ ಹಕ್ಕನ್ನು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು ಜಾಹೀರಾತಿನ ಮೂಲಕ 500 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಲ್ಲಿದೆ.
ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟದ ರೋಚಕತೆಯನ್ನು ನೋಡಲು ಬಯಸುವ ಅಭಿಮಾನಿಗಳಿಗೆ ಸ್ಟಾರ್ ಸ್ಪೋರ್ಟ್ಸ್ ನೇರಪ್ರಸಾರ ನೀಡುತ್ತಿದೆ. ಅರದಲ್ಲೂ ಟಿ20 ಪಂದ್ಯಕ್ಕೆ ಭಾರೀ ಬೇಡಿಕೆ ಇರುವ ಕಾರಣ ನೇರ ಪ್ರಸಾರದ ವೇಳೆ ಪ್ರತಿ ಹತ್ತು ಸೆಕೆಂಡ್ ಜಾಹೀರಾತನ್ನು ವಾಹಿನಿಯು 7 ರಿಂದ 8 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಒಟ್ಟು 5 ಭಾಷೆಗಳಲ್ಲಿ ಪ್ರಸಾರದ ಹಕ್ಕನ್ನು ಹೊಂದಿರುವ ಸ್ಟಾರ್ ವಾಹಿನಿ ಈ ಮೂಲಕ ಕಳೆದ ವರ್ಷದ ಆರ್ಥಿಕ ಸಂಕಷ್ಟವನ್ನು ಪೂರೈಸಿಕೊಳ್ಳುವ ನಿರೀಕ್ಷೆ ಹೊಂದಿದೆ.
ಭಾರತದ ಹಾಗೂ ಇಂಗ್ಲೆಂಡ್ ಸರಣಿಗಾಗಿ ಇಂಗ್ಲೆಂಡ್‍ನಲ್ಲೂ ಬೇಡಿಕೆ ಹೆಚ್ಚಿರುವ ಕಾರಣ ಸ್ಟಾರ್ ಸ್ಪೋರ್ಟ್ಸ್ ಅಲ್ಲಿರುವ ವಾಹಿನಿಯೊಂದಿಗೆ 200 ಕೋಟಿ ರೂಪಾಯಿಗಳ ಪ್ರಸಾರ ಹಕ್ಕಿನ ಒಪ್ಪಂದಕ್ಕೆ ಸಹಿ ಹಾಕಲು ತುದಿಗಾಲಿನಲ್ಲಿ ನಿಂತಿದೆ. ಈಗಾಗಲೇ ಅಲ್ಲಿನ ಪ್ರತಿಷ್ಠಿತ ವಾಹಿನಿಗಳಾದ ಚಾನಲ್ 4 ಮತ್ತು ಸ್ಕೈ ಸ್ಪೋರ್ಟ್ಸ್, ಸ್ಟಾರ್ ಸ್ಪೋರ್ಟ್ಸ್ ನೊಂದಿಗೆ ಕೈ ಜೋಡಿಸಲು ಎದುರುನೋಡುತ್ತಿದೆ.