ಮ್ಯಾನ್ಮಾರ್: 59 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಚೀನಾ ಸರ್ಕಾರಕ್ಕೆ ಭಾರತ ಬಿಸಿ ಮುಟ್ಟಿಸಿದ ಬಳಿಕ ಈಗ ಮ್ಯಾನ್ಮಾರ್ ಸಹ ಪರೋಕ್ಷವಾಗಿ ಕಿಡಿಕಾರಿದೆ.
ದೇಶದ ಒಳಗಿನ ಉಗ್ರರಿಗೆ ‘ಬಲಾಢ್ಯʼ ರಾಷ್ಟ್ರವೊಂದು ಬೆಂಬಲ ನೀಡುತ್ತಿದೆ ಎಂದು ಮ್ಯಾನ್ಮಾರ್‌ನ ಹಿರಿಯ ಜನರಲ್ ಮಿನ್ ಆಂಗ್ ಹೇಲಿಂಗ್ ಹೇಳುವ ಮೂಲಕ ಚೀನಾ ವಿರುದ್ಧ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.
ರಷ್ಯಾದ ಸರ್ಕಾರಿ ಟಿವಿ ಚಾನೆಲ್ ಒಂದಕ್ಕೆ ಇತ್ತೀಚೆಗೆ ಮಿನ್ ಆಂಗ್ ಹೇಲಿಂಗ್ ಸಂದರ್ಶನ ನೀಡಿದ್ದರು. ಈ ವೇಳೆ ದೇಶದೊಳಗಿನ ಬಂಡುಕೋರ ಗುಂಪುಗಳಿಗೆ ‘ಬಲಾಢ್ಯ’ ರಾಷ್ಟ್ರ ಸಹಕಾರ ನೀಡುತ್ತಿದೆ. ಉಗ್ರರು ಚೈನಾ ನಿರ್ಮಿತ ಅತ್ಯಾಧ್ಯುನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಉಗ್ರರನ್ನು ಮಟ್ಟ ಹಾಕಲು ಅಂತಾರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಚೀನಾದ ಗಡಿಯ ಪಶ್ಚಿಮ ಮ್ಯಾನ್ಮಾರ್‌ನ ರಾಖೈನ್ ರಾಜ್ಯದಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆಗಳಾದ ಅರಾಕನ್ ಆರ್ಮಿ (ಎಎ) ಮತ್ತು ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಎಆರ್‌ಎಸ್‌ಎ) ಯನ್ನುಉಲ್ಲೇಖಿಸಿ ಮಿನ್ ಆಂಗ್ ಹೇಲಿಂಗ್, ಈ ಉಗ್ರ ಸಂಘಟನೆಯನ್ನು ‘ಬಲಾಢ್ಯ ರಾಷ್ಟ್ರʼವೊಂದು ಬೆಂಬಲಿಸುತ್ತದೆ ಎಂದಿದ್ದಾರೆ.
ಕಳೆದ ವರ್ಷ ಸೇನೆಯ ಮೇಲೆ ಚೀನಾ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಲಾಗಿತ್ತು. 2019ರ ನವೆಂಬರ್‌ನಲ್ಲಿ ಮ್ಯಾನ್ಮಾರ್ ಸೇನೆ ನಿಷೇಧಿತ ತಾಂಗ್ ನ್ಯಾಷನಲ್ ಲಿಬರೇಶನ್ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಭಾರೀ ಪ್ರಮಾಣದಲ್ಲಿ ಕ್ಷಿಪಣಿಗಳು ಪತ್ತೆಯಾಗಿತ್ತು. ಈ ಕ್ಷಿಪಣಿಗಳು ಚೀನಾದಲ್ಲೇ ತಯಾರಾಗಿತ್ತು ಎಂದು ಮಿಲಿಟರಿ ವಕ್ತಾರ ಮೇಜರ್ ಜನರಲ್ ತುನ್ ನೈ ತಿಳಿಸಿದ್ದಾರೆ.
ಆಗ್ನೇಯ ಏಷ್ಯಾದ ಭಾಗದಲ್ಲಿ ಉಗ್ರರಿಗೆ ಚೀನಾ ಸಹಾಯ ಮಾಡುತ್ತದೆ ಎನ್ನುವ ಆರೋಪ ಹೊಸದಲ್ಲ. ವಿಶ್ವದ ನಂಬರ್‌ಒನ್ ಪಟ್ಟ ಏರಲು ಹವಣಿಸುತ್ತಿರುವ ಚೀನಾ ಪಾಕಿಸ್ತಾನ ಸೇನೆಗೆ ಸಹಕಾರ ನೀಡುವ ನೆಪದಲ್ಲಿ ಉಗ್ರರಿಗೂ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತದೆ ಎಂಬ ಆರೋಪವಿದೆ.