ಭಾರತೀಯ ವಿದ್ಯಾರ್ಥಿಯ ಗಡಿಪಾರಿಗೆ ಚೀನಿ ನೆಟ್ಟಿಗರ ಆಗ್ರಹ

Public TV
2 Min Read

ಬೀಜಿಂಗ್‌: ಚೀನಾದಲ್ಲಿ ಓದುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಚೀನಿಯರನ್ನು ಅವಮಾನ ಮಾಡಿದ್ದಾನೆ ಎಂಬ ಆರೋಪ ಬಂದಿದೆ.

ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿರುವ ಜಿಯಾಂಗ್ಸು ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿ ವಿಡಿಯೋ ಶೇರಿಂಗ್‍ ಅಪ್ಲಿಕೇಶನ್‍ ಡೌಯಿನ್‍(ಚೀನಾದ ಟಿಕ್‍ಟಾಕ್‍)ನಲ್ಲಿ ಚೀನಾ ಮತ್ತು ಚೀನಿಯರ ಬಗ್ಗೆ ಕೆಟ್ಟದಾಗಿ ಕಮೆಂಟ್‍ ಮಾಡಿದ್ದ.

ಲಡಾಖ್‌ ಕಿತ್ತಾಟದ ವಿಚಾರ ಚೀನಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದ್ದು ಭಾರತೀಯ ಮೂಲದ ವಿದ್ಯಾರ್ಥಿ ಚೀನಾದವರ ಬಗ್ಗೆ ಹಾಸ್ಯ ಮಾಡಿ ಹಂದಿಗಳು ಮತ್ತು ಕೆಟ್ಟವರು ಎಂದು ಬರೆದಿದ್ದ. ಕಮೆಂಟ್‍ ಚೀನಿಯರಿಗೆ ತಿಳಿಯುತ್ತಿದ್ದಂತೆ ಸ್ಕ್ರೀನ್‍ ಶಾಟ್‍ ತೆಗೆದು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಇದು ಚೀನಿಯರ ಗಮನಕ್ಕೆ ಬಂದ ಕೂಡಲೇ ವಿದ್ಯಾರ್ಥಿ ಕಮೆಂಟ್‌ ಡಿಲೀಟ್‌ ಮಾಡಿ ಕ್ಷಮೆ ಕೇಳಿದ್ದಾನೆ. ಅಷ್ಟೇ ಅಲ್ಲದೇ ಇನ್ನು ಮುಂದೆ ನಾನು ಈ ರೀತಿ ಕಮೆಂಟ್‌ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾನೆ.

ಜಿಯಾಂಗ್ಸು ವಿಶ್ವವಿದ್ಯಾಲಯ ನೀಡುವ ಟಾಪ್‌ 10 ಅತ್ಯುತ್ತಮ ಯುವ ಪ್ರಶಸ್ತಿ ಈ ವಿದ್ಯಾರ್ಥಿಗೆ ಸಿಗಲಿದೆ ಎಂದು ತಿಳಿದು ಚೀನಾ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ನಡೆದಿದೆ. ಈ ವಿದ್ಯಾರ್ಥಿಗೆ ಯಾವುದೇ ಕಾರಣಕ್ಕೂ ಈ ಪ್ರಶಸ್ತಿ ನೀಡಬಾರದು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಈ ಬಗ್ಗೆ ಜಿಯಾಂಗ್ಸು ವಿಶ್ವವಿದ್ಯಾಲಯ ಪ್ರತಿಕ್ರಿಯಿಸಿ, ಈ ಪ್ರಶಸ್ತಿಗೆ ಈ ವಿದ್ಯಾರ್ಥಿ ಆಯ್ಕೆ ಆಗಿಲ್ಲ ಎಂದು ತಿಳಿಸಿದೆ. ಚೀನಾದ ನೆಟ್ಟಿಗರು ಅನಿವಾಸಿ ವಿದ್ಯಾರ್ಥಿ ನಮ್ಮ ದೇಶದ ಕಾನೂನುನ್ನು ಒಪ್ಪಿ ನಡೆಯಬೇಕು. ದೇಶಕ್ಕೆ ಅವಮಾನ ಮಾಡಿದಕ್ಕೆ ಚೀನಾದಿಂದ ಗಡಿಪಾರು ಮಾಡುವಂತೆ ಆಗ್ರಹಿಸುತ್ತಿದ್ದಾರೆ ಎಂದು ಸರ್ಕಾರಿ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ಹೇಳಿದೆ. ಈ ಸಂಬಂಧ ದೂರು ದಾಖಲಾಗಿದೆ, ತನಿಖೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದಲ್ಲಿ ಸರ್ಕಾರ, ಸರ್ಕಾರದ ವಿರುದ್ಧ ಮಾತನಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಕೊರೊನಾ ವೈರಸ್‌ ಸಂದರ್ಭದಲ್ಲೂ ಚೀನಾ ಕೆಲವೊಂದು ಪದಗಳ ಬಳಕೆ ಹುಡುಕಾಟಕ್ಕೆ ಇಂಟರ್‌ನೆರ್ಟ್‌ ನಲ್ಲಿ ನಿರ್ಬಂಧ ಹೇರಿತ್ತು. ಫೇಸ್‌ಬುಕ್‌, ಟ್ವಿಟ್ಟರ್‌, ಯೂಟ್ಯೂಬ್‌ ಸೇರಿದಂತೆ ವಿಶ್ವಾದ್ಯಂತ ಬಳಸುವ ಜಾಲತಾಣಗಳು ಚೀನಾದಲ್ಲಿ ಲಭ್ಯವಿಲ್ಲ. ಅವರೇ ಸೆನ್ಸರ್‌ ಮಾಡಬಲ್ಲ ಸಾಮಾಜಿಕ ಜಾಲತಾಣಗಳನ್ನು ಮಾತ್ರ ಬಳಕೆಗೆ ಸರ್ಕಾರ ಅನುಮತಿ ನೀಡಿದೆ.

ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಇರುವಷ್ಟು ಮಾಧ್ಯಮ ಸ್ವಾತಂತ್ರ್ಯ ಕಮ್ಯೂನಿಸ್ಟ್ ಚೀನಾದಲ್ಲಿ ಇಲ್ಲ. ಈ ಹಿಂದೆ ವುಹಾನ್‌ ಕೊರೊನಾ ವೈರಸ್‌ ಬಗ್ಗೆ ವರದಿ ಮಾಡಿದ್ದಕ್ಕೆ ಎರಡು ತಿಂಗಳ ಕಾಲ ಪತ್ರಕರ್ತರೊಬ್ಬರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು.  ಇದನ್ನೂ ಓದಿ: 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವುಹಾನ್ ಪತ್ರಕರ್ತ

ಡಿಸೆಂಬರ್‌ ಕೊನೆಯಲ್ಲಿ ಚೀನಾದ ವೈದ್ಯ ಲಿ ವೆನ್ಲಿಯಾಂಗ್ ಈ ವೈರಸ್ ರೋಗದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಸಾರ್ಸ್ ರೀತಿಯ ಹೊಸ ರೋಗ ಲಕ್ಷಣ ಹೊಂದಿರುವ 7 ಮಂದಿ ರೋಗಿಗಳನ್ನು ನಾನು ಗುರುತಿಸಿದ್ದೇನೆ. ಹೀಗಾಗಿ ಸುರಕ್ಷಾ ಸಾಧನಗಳನ್ನು ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಈ ಜಾಗೃತಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ಜನವರಿ 1 ರಂದು ಡಾ. ಲಿ ವೆನ್ಲಿಯಾಂಗ್ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಖಂಡಿಸಲಾಗಿತ್ತು. ಅಷ್ಟೇ ಅಲ್ಲದೇ ಪೊಲೀಸರು ಅವರಿಗೆ ಟಾರ್ಚರ್‌ ನೀಡಿದ್ದರು. ಫೆ.6 ರಂದು ಕೊರೊನಾ ವೈರಸ್ ಬಗ್ಗೆ ಮೊದಲ ಬಾರಿಗೆ ಎಚ್ಚರಿಕೆ ನೀಡಿದ್ದ ವೈದ್ಯ ಲಿ ವೆನ್ಲಿಯಾಂಗ್ ಮೃತಪಟ್ಟಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *