ಭಾರತದ ಕೋವ್ಯಾಕ್ಸಿನ್ ಸುರಕ್ಷಿತ, ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲ: ಲ್ಯಾನ್ಸೆಟ್

Public TV
2 Min Read

ನವದೆಹಲಿ: ಭಾರತದ ಎರಡು ಕೊರೊನಾ ಲಸಿಕೆಗಳು ಇದೀಗ ಹಂಚಿಕೆಯಾಗುತ್ತಿದ್ದು, ಕೊರೊನಾ ವಾರಿಯರ್ಸ್‍ಗಳಿಗೆ ನೀಡಲಾಗುತ್ತಿದೆ. ಎರಡೂ ವ್ಯಾಕ್ಸಿನ್‍ಗಳು ಸುರಕ್ಷಿತ ಎಂದು ತಜ್ಞರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಸಂಪೂರ್ಣ ಸ್ವದೇಶಿ ಆಗಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಬಗ್ಗೆ ಲ್ಯಾನ್ಸೆಟ್ ವರದಿಯಲ್ಲಿ ಪ್ರಕಟಿಸಲಾಗಿದ್ದು, ಸಂಪೂರ್ಣ ಸುರಕ್ಷಿತವಾಗಿದೆ ಎಂದು ಬ್ರಿಟಿಷ್ ಜರ್ನಲ್ ಹೇಳಿದೆ.

ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ‘ದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್’ ನಲ್ಲಿ ಸಂಶೋಧನಾ ವರದಿಯನ್ನು ಪ್ರಕಟಿಸಲಾಗಿದೆ. ಭಾರತ್ ಬಯೋಟೆಕ್ ನಡೆಸಿದ ಮೊದಲ ಹಂತದ ಟ್ರಯಲ್‍ನ ದತ್ತಾಂಶಗಳನ್ನು ಆಧರಿಸಿ ಜರ್ನಲ್ ಲಸಿಕೆಯ ಕುರಿತು ಅಧ್ಯಯನ ವರದಿ ಬಿತ್ತರಿಸಿದೆ. ಲ್ಯಾನ್ಸೆಟ್ ಬ್ರಿಟಿಷ್ ಜರ್ನಲ್ ಆಗಿದ್ದು, ಕೊವ್ಯಾಕ್ಸಿನ್ ಎಫೆಕ್ಟ್ ಕುರಿತು ಅಧ್ಯಯನ ವರದಿ ಪ್ರಕಟಿಸಿದೆ. ವ್ಯಾಕ್ಸಿನ್ ಡೋಸ್‍ಗಳು ಸುರಕ್ಷಿತವಾಗಿದ್ದು, ಲಸಿಕೆಗೆ ಸಂಬಂಧಿಸಿದ ಗಂಭೀರ ಪ್ರತಿಕೂಲ ಪ್ರಕರಣಗಳು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತ್ ಬಯೋಟೆಕ್ ನಡೆಸಿದ ಮೊದಲ ಹಂತದ ಟ್ರಯಲ್ ಡಾಟಾವನ್ನು ಆಧರಿಸಿ ಲ್ಯಾನ್ಸೆಟ್ ಈ ಅಧ್ಯಯನ ವರದಿಯನ್ನು ಪ್ರಕಟಿಸಿದೆ. ಭಾರತ್ ಬಯೋಟೆಕ್ ಲಾಕ್‍ಡೌನ್ ವೇಳೆ ಜುಲೈ 13 ಹಾಗೂ 30ರಲ್ಲಿ ಮೊದಲ ಹಂತದ ಟ್ರಯಲ್ ನಡೆಸಿದ್ದು, ಸುಮಾರು 375 ಸ್ವಯಂಸೇವಕರು ಭಾಗಿಯಾಗಿದ್ದರು. ಮೊದಲ ಹಂತದ ಟ್ರಯಲ್ ಅನ್ನು ದೇಶಾದ್ಯಂತ 11 ಆಸ್ಪತ್ರೆಗಳಲ್ಲಿ ನಡೆಸಲಾಗಿದ್ದು, 28 ದಿನಗಳ ಬದಲಿಗೆ 14 ದಿನಗಳ ಅಂತರದಲ್ಲಿ ಡೋಸೇಜ್‍ಗಳನ್ನು ನೀಡಲಾಗಿತ್ತು.

ಟ್ರಯಲ್‍ನಲ್ಲಿ ಭಾಗವಹಿಸಿದವರನ್ನು ಪ್ರತ್ಯೇಕ ಗುಂಪುಗಳನ್ನಾಗಿ ಮಾಡಲಾಗಿತ್ತು. ರೋಗನಿರೋಧ ಶಕ್ತಿಯನ್ನು ವೃದ್ಧಿಸುವಲ್ಲಿ ವ್ಯಾಕ್ಸಿನ್ ಕಾರ್ಯನಿರ್ವಹಿಸಿದೆ. ಅಲ್ಲದೆ ಟ್ರಯಲ್ ನಡೆಸಿದ ಬಳಿಕ ಎರಡು ಗಂಟೆಗಳ ಕಾಲ ವೀಕ್ಷಣೆಗೊಳಪಡಿಸಲಾಗಿತ್ತು. ಈ ವೇಳೆ ಯಾವುದೇ ಸೈಡ್ ಎಫೆಕ್ಟ್ ಕಂಡುಬಂದಿಲ್ಲ. ಪ್ರತಿ ಡೋಸ್ ಪಡೆದ ಬಳಿಕ 7 ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಲಸಿಕೆ ಪಡೆದವರಿಗೆ ಸೂಚಿಸಲಾಗಿತ್ತು ಎಂದು ಲ್ಯಾನ್ಸೆಟ್ ಅಧ್ಯಯನ ವರದಿಯಲ್ಲಿ ತಿಳಿಸಿದೆ.

ಈಗಾಗಲೇ ಭಾರತದಲ್ಲಿ ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದ್ದು, ಯವುದೇ ರೀತಿಯ ಗಂಭೀರ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ. ಈ ಕುರಿತು ಐಸಿಎಂಆರ್ ಸಹ ಸ್ಪಷ್ಟಪಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *