ಭಾರತಕ್ಕೆ ಮತ್ತೊಂದು ರಜತ ಪದಕ – ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿ

Public TV
1 Min Read

ಟೋಕಿಯೋ: ಒಲಿಂಪಿಕ್ಸ್ ಕುಸ್ತಿಯ ಪುರುಷರ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ 23 ವರ್ಷದ ರವಿ ದಹಿಯಾ ಬೆಳ್ಳಿಯನ್ನು ಗೆದ್ದಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಎರಡನೇ ಬೆಳ್ಳಿ ಪದಕವನ್ನು ಗೆದ್ದಂತಾಗಿದೆ.

2 ಬಾರಿ ವಿಶ್ವಚಾಂಪಿಯನ್ ರಷ್ಯಾದ ಚೌರ್ ಉಗುವೆವ್ ವಿರುದ್ಧ  7-4 ಅಂಕಗಳಿಂದ ರವಿ ದಹಿಯಾ ಸೋತು ಎರಡನೇ ಸ್ಥಾನವನ್ನು ಪಡೆದರು. ಉಗುವೆವ್ ಸತತ 16 ಪಂದ್ಯಗಳನ್ನು ಗೆದ್ದು ಒಲಿಂಪಿಕ್ಸ್ ಪ್ರವೇಶಿಸಿದ್ದರು.

ಸೆಮಿಫೈನಲ್‍ನಲ್ಲಿ ಕಝಖಿಸ್ತಾನದ ನುರಿಸ್ಲಾಮ್ ಸನಯೆವ್ ವಿರುದ್ಧ ಆರಂಭಿಕ ಹಿನ್ನಡೆ ಅನುಭವಿಸಿದರೂ ಭರ್ಜರಿ ಕಮ್‍ಬ್ಯಾಕ್ ಮಾಡುವ ಮೂಲಕ ರವಿ ದಹಿಯಾ ರೋಚಕ ಗೆಲುವಿನೊಂದಿಗೆ ಫೈನಲ್ ಅರ್ಹತೆ ಪಡೆದುಕೊಂಡಿದ್ದರು.

ಹರಿಯಾಣದ ಸೋನಿಪತ್ ಜಿಲ್ಲೆಯ ನಹ್ರಿ ಗ್ರಾಮದಲ್ಲಿ ಜನಿಸಿದ ರವಿ ದಹಿಯಾ ಈ ಹಿಂದೆ 2019ರ ವಿಶ್ವ ಚಾಂಪಿಯನ್‍ಷಿಪ್‍ನ 57 ಕೆಜಿ ವಿಭಾಗದಲ್ಲಿ ಕಂಚು, 2020ರ ಏಷ್ಯನ್ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನ, 2021ರ ಏಷ್ಯನ್ ಚಾಂಪಿಯನ್‍ಷಿಪ್‍ನಲ್ಲಿ ಸ್ವರ್ಣ, 2018ರ ಅಂಡರ್ 23 ಚಾಂಪಿಯನ್‍ಷಿಪ್‍ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.

ಕುಸ್ತಿ ಕಮಾಲ್: 2012ರ ಲಂಡನ್ ಒಲಿಂಪಿಕ್ಸ್‍ನಲ್ಲಿ ಸುಶೀಲ್ ಕುಮಾರ್ ಭಾರತಕ್ಕೆ ಬೆಳ್ಳಿ ಗೆದ್ದುಕೊಟ್ಟಿದ್ದರು. ಅದೇ ವರ್ಷ ಯೋಗೀಶ್ವರ್ ದತ್ ಕಂಚಿನ ಪದಕ ಗೆದ್ದರೆ, 2016ರ ರಿಯೊ ಒಲಿಂಪಿಕ್ಸ್‍ನಲ್ಲಿ ಸಾಕ್ಷಿ ಮಲಿಕ್ ಕಂಚು ಗೆದ್ದಿದ್ದರು. 1952ರಲ್ಲಿ ಕೆ.ಡಿ ಜಾಧವ್ ಕಂಚಿನ ಪದಕ ಗೆದ್ದಿದ್ದರು.

Share This Article
Leave a Comment

Leave a Reply

Your email address will not be published. Required fields are marked *