ಭಾನುವಾರ ರಾಜ್ಯದಲ್ಲಿ ಕರ್ಫ್ಯೂ – ಸಂಡೇ ಬಂದ್ ಹಿಂದಿನ ಕಥೆ ಇಲ್ಲಿದೆ

Public TV
2 Min Read

ಬೆಂಗಳೂರು: ಡೆಡ್ಲಿ `ಮಹಾ’ ವೈರಸ್ ಅನ್ನು ಸ್ವಲ್ಪಮಟ್ಟಿಗಾದ್ರೂ ನಿಯಂತ್ರಿಸಲು ಬಿಎಸ್‍ವೈ ಸರ್ಕಾರ ಸಂಡೇ ಬಂದ್ ಎಂಬ ಅಸ್ತ್ರವನ್ನು ಪ್ರಯೋಗಿಸಿದೆ. ಕೊರೊನಾ ಆರ್ಭಟ ಹೀಗೆ ಮುಂದುವರಿದರೆ ರಾಜ್ಯದಲ್ಲಿ ಕೋವಿಡ್ 19 ಮುಗಿಯುವವರೆಗೂ ಕೊರೋನಾಗಾಗಿ ಸಂಡೇ ಕರ್ಫ್ಯೂ ಹೇರುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆಗಳು ನಡೆದಿದೆ.

ಲಾಕ್‍ಡೌನ್ ಸಡಿಲವಾದ ಬೆನ್ನಲ್ಲೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಇದನ್ನು ಸ್ವಲ್ಪ ಮಟ್ಟಿಗಾದರೂ  ತಡೆಯಬೇಕಾದರೆ ಮುಂದಿನ ಭಾನುವಾರಗಳಂದು ಲಾಕ್‍ಡೌನ್ ಹೇರಬೇಕು ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ವರದಿ ನೋಡಿದ ಸಿಎಂ ಯಡಿಯೂರಪ್ಪ ಮೇ 31ರ ಬಳಿಕವೂ ಪ್ರತಿ ಭಾನುವಾರ ಲಾಕ್‍ಡೌನ್ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಲಾಕ್‍ಡೌನ್ ಹೇರಿದ್ದು ಯಾಕೆ?
ಪ್ರಧಾನಿ ಮೋದಿ ದೇಶಾದ್ಯಂತ ಕರೆ ನೀಡಿದ ಮೊದಲ ಲಾಕ್‍ಡೌನ್ ವೇಳೆ ಕೊರೊನಾ ಸೋಂಕು ನಿಯಂತ್ರಣದಲ್ಲಿತ್ತು. ಲಾಕ್‍ಡೌನ್ 4.0ನಲ್ಲಿ ಕೊರೊನಾ ಔಟ್ ಆಫ್ ಕಂಟ್ರೋಲ್ ಆಗುತ್ತಿದೆ. ಭಾನುವಾರ ಬಹುತೇಕ ಎಲ್ಲರಿಗೂ ರಜೆ ಇರುವ ಕಾರಣ ಜನ ಸಂಚಾರ ಜಾಸ್ತಿ ಇರುತ್ತದೆ. ಈ ವೇಳೆ ವೈರಸ್ ಹಬ್ಬುವ ಪ್ರಮಾಣ ಜಾಸ್ತಿ. ಲಾಕ್‍ಡೌನ್ ಬಿಗಿ ಅವಧಿಯಲ್ಲಿ ವೈರಸ್ ಹಬ್ಬುವುದು ಕಡಿಮೆ. ಜನತಾ ಕರ್ಫ್ಯೂ ರೀತಿಯಲ್ಲೇ ಸಂಡೇ ಕರ್ಫ್ಯೂನಲ್ಲಿ ಬಿಗಿ ಕ್ರಮ. ವಾರದಲ್ಲಿ 1 ದಿನವಾದ್ರೂ ಲಾಕ್‍ಡೌನ್ ಆದ್ರೆ ಸೋಂಕು ಕಡಿಮೆ ಆಗಬಹುದು. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಯಬಹುದು. ಹೀಗಾಗಿ ಪ್ರತಿ ಭಾನುವಾರವೂ ಲಾಕ್‍ಡೌನ್ ಮಾಡುವಂತೆ ತಜ್ಞರು ಶಿಫಾರಸು ನೀಡಿದ್ದರು.

ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?
ಮಾರ್ಚ್ 24ಕ್ಕೆ ಮೊದಲ ಲಾಕ್‍ಡೌನ್ ಆರಂಭಗೊಂಡಿದ್ದಾಗ ಕರ್ನಾಟಕದಲ್ಲಿ 41 ಪ್ರಕರಣಗಳಿದ್ದರೆ ಬೆಂಗಳೂರಿನಲ್ಲಿ 24 ಪ್ರಕರಗಳಿತ್ತು. ಮೊದಲ ಲಾಕ್‍ಡೌನ್ ಅಂತ್ಯಗೊಂಡಿದ್ದು ಏಪ್ರಿಲ್ 14ರಂದು. ಈ 21 ದಿನಗಳ ಲಾಕ್‍ಡೌನ್ ಅಂತ್ಯದ ವೇಳೆ ಕರ್ನಾಟಕದಲ್ಲಿ 260 ಪ್ರಕರಣಗಳಿದ್ದರೆ ಬೆಂಗಳೂರಿನಲ್ಲಿ 69 ಪ್ರಕರಣಗಳಿತ್ತು. 2ನೇ ಲಾಕ್‍ಡೌನ್ ಅಂತ್ಯಗೊಂಡಿದ್ದು ಮೇ 3ಕ್ಕೆ. ಈ ವೇಳೆ ರಾಜ್ಯದಲ್ಲಿ 614 ಮಂದಿಗೆ ಸೋಂಕು ಬಂದಿದ್ದರೆ, ಬೆಂಗಳೂರಿನಲ್ಲಿ 149 ಮಂದಿಗೆ ಸೋಂಕು ಬಂದಿತ್ತು.

3ನೇ ಲಾಕ್‍ಡೌನ್ ಮೇ 17ಕ್ಕೆ ಅಂತ್ಯಗೊಂಡಿದ್ದು, ಕರ್ನಾಟಕದಲ್ಲಿ 1,147 ಮಂದಿಗೆ ಸೋಂಕು ಬಂದಿದ್ದರೆ ಬೆಂಗಳೂರಿನಲ್ಲಿ 216 ಮಂದಿಗೆ ಸೋಂಕು ತಗಲಿತ್ತು. 4ನೇ ಲಾಕ್‍ಡೌನ್ ಆರಂಭಗೊಂಡಿದ್ದು ಮೇ 18ಕ್ಕೆ. ಈ ವೇಳೆ ರಾಜ್ಯದಲ್ಲಿ ಒಟ್ಟು 1,246 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೆ ಬೆಂಗಳೂರಿನಲ್ಲಿ 240 ಮಂದಿಗೆ ಸೋಂಕು ಬಂದಿತ್ತು. ಯಾವಾಗ ಅಂತರ್ ರಾಜ್ಯ ಸಂಚಾರ ಆರಂಭಗೊಂಡಿತೋ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗತೊಡಗಿದೆ. 4ನೇ ಲಾಕ್‍ಡೌನ್ 5ನೇ ದಿನವಾದ ಮೇ 23 ರಂದು ಕರ್ನಾಟಕದಲ್ಲಿ ಒಟ್ಟು 1,959 ಮಂದಿಗೆ ಸೋಂಕು ಬಂದಿದ್ದರೆ ಬೆಂಗಳೂರಿನಲ್ಲಿ 265 ಮಂದಿಗೆ ಸೋಕು ಬಂದಿದೆ. ಒಟ್ಟು ಕರ್ನಾಟಕದಲ್ಲಿ 42 ಮಂದಿ ಕೋವಿಡ್ 19ಗೆ ಮೃತಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *