ಭರ್ತಿಯಾಗುತ್ತಿರುವ ಕನ್ನಂಬಾಡಿ- ಸೋಮವಾರದಿಂದ ವಿಸಿ ನಾಲೆಗೆ ನೀರು ಹರಿಸಲು ಸಚಿವ ನಾರಾಯಣಗೌಡ ಸೂಚನೆ

Public TV
2 Min Read

ಮಂಡ್ಯ: ಕಾವೇರಿ ಕಣಿವೆ ಸುತ್ತ ಸಾಕಷ್ಟು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಜಲಾಶಯ ಭರ್ತಿಯಾಗುತ್ತಿದೆ. ಈಗಾಗಲೇ 106 ಅಡಿಗೂ ಹೆಚ್ಚು ನೀರು ಜಲಾಶಯಕ್ಕೆ ಹರಿದು ಬಂದಿದೆ. ಹೀಗಾಗಿ ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ನಾಲೆಗಳಿಗೆ ನೀರು ಹರಿಸುವಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಾವೇರಿ ನೀರನ್ನು ಅವಲಂಬಿಸಿ ಕೃಷಿ ಚಟುವಟಿಕೆ ನಡೆಸುವ ರೈತರಿಗೆ ಸಂತಸದ ಸುದ್ದಿ ಇದು. ಕೆಆರ್ ಸ್ ಅಣೆಕಟ್ಟಿನ 124 ಅಡಿಗಳ ಪೈಕಿ 106 ಅಡಿ ನೀರು ತುಂಬಿದೆ. 35 ಸಾವಿರ ಕ್ಯೂಸೆಕ್ಸ್ ಒಳ ಹರಿವಿನ ಪ್ರಮಾಣ ಇದೆ. ಕೇವಲ 24 ಗಂಟೆಯಲ್ಲಿ ಎರಡು ಅಡಿಯಷ್ಟು ನೀರು ಭರ್ತಿಯಾಗಿದೆ. 6 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಗಡೆ ಬಿಡಲಾಗುತ್ತಿದೆ. ಈಗಾಗಲೇ ಹೇಮಾವತಿ ನಾಲೆಗೆ ನೀರು ಬಿಡಲಾಗಿದ್ದು, ಸೋಮವಾರಿಂದ ವಿಸಿ ನಾಲೆಗೆ ನೀರು ಹರಿಸುವ ಮೂಲಕ ಮುಂಗಾರು ಕೃಷಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.

ಸಬ್ಸಿಡಿಯಲ್ಲಿ ಭತ್ತದ ಬೀಜ ವಿತರಣೆ ಪ್ರಾರಂಭ:
ಸಕ್ಕರೆ ನಾಡು ಎಂದು ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯಲ್ಲಿ ಕಬ್ಬಿಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. 40 ಸಾವಿರ ಹೆಕ್ಟೇರ್ ನಲ್ಲಿ ಕಬ್ಬು ಬೆಳೆದರೆ 65 ಸಾವಿರ ಹೆಕ್ಟೇರ್ ನಲ್ಲಿ ಭತ್ತ ಬೆಳೆಯಲಾಗುತ್ತದೆ. ಮುಂಗಾರು ಕೃಷಿ ಆರಂಭಿಸಲು ನಾಲೆಗಳಿಗೆ ನೀರು ಬಿಡುವ ಸಮಯವನ್ನೇ ಎದುರು ನೋಡಲಾಗುತ್ತಿತ್ತು. ಕೆಆರ್ ಎಸ್ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈಗ ನೀರು ಹರಿಸಲಾಗುತ್ತಿದೆ. ಹೀಗಾಗಿ ಕೃಷಿ ಇಲಾಖೆ ಸಹ ಸಬ್ಸಿಡಿಯಲ್ಲಿ ಭತ್ತದ ಬೀಜವನ್ನು ವಿತರಿಸುವ ಕಾರ್ಯ ಆರಂಭಿಸಲಿದೆ. ಮುಂದಿನ ಬುಧವಾರದಿಂದ ರೈತರಿಗೆ ಭತ್ತದ ಬೀಜ ವಿತರಣೆ ಶುರುವಾಗಲಿದೆ. ಸುಮಾರು 4 ಸಾವಿರ ಹೆಕ್ಟೇರ್ನಲ್ಲಿ ನೀರಾವರಿ ರಾಗಿ ಹಾಗೂ 500 ಹೆಕ್ಟೇರ್ ನಲ್ಲಿ ಅಲಸಂದೆ ಕೂಡ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ಗೊಬ್ಬರ ಸಹ ದಾಸ್ತಾನು ಇದ್ದು, ಪ್ರತಿ ತಿಂಗಳು ನಿಗದಿತ ಪ್ರಮಾಣದಲ್ಲಿ ಸರಬರಾಜು ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಉಳಿಸಬೇಕಾದರೆ ಕಾಂಗ್ರೆಸ್ ಕಿತ್ತೊಗೆಯಬೇಕೆಂದ ಸಿದ್ದರಾಮಯ್ಯ- ಮತ್ತೆ ಎಡವಟ್ಟು

ವರುಣನ ಕೃಪೆಯಿಂದ ರೈತರ ಬದುಕು ಹಸನಾಗಲಿ:
ಮಂಡ್ಯ ಜಿಲ್ಲೆಯಲ್ಲಿ ವ್ಯವಸಾಯವೇ ಪ್ರಧಾನ ಕಸುಬು. ಸಂಪೂರ್ಣ ಜಿಲ್ಲೆ ಕೃಷಿಯಿಂದ ಆವೃತವಾಗಿದೆ. ರೈತನ ಬದುಕಿಗೆ ನೀರೇ ಪ್ರಧಾನ. ಕಳೆದ ಮೂರು ವರ್ಷಗಳಿಂದ ಸತತವಾಗಿ ಕೆ.ಆರ್.ಎಸ್. ಜಲಾಶಯ ಭರ್ತಿಯಾಗುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಕಾವೇರಿ ನದಿ ತುಂಬಿ ಹರಿದರೆ ರೈತರ ಜೀವನ ಕೂಡ ಸಂತಸದಿಂದ ತುಂಬಿರುತ್ತದೆ. ಸಾಕಷ್ಟು ಮಳೆಯಾಗಿ, ಜಲಾಶಯ ತುಂಬುತ್ತಿರುವ ಕಾರಣ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ರೈತರು ನೀರನ್ನು ಪೋಲು ಮಾಡದೆ ಸದುಪಯೋಗಪಡಿಸಿಕೊಳ್ಳಬೇಕು. ರೈತರು ಅಂದುಕೊಂಡಂತೆ ಉತ್ತಮ ಬೆಳೆಯಾಗಲಿ. ವರುಣ ಕೃಪೆಯಿಂದ ನೀರಿನ ಕೊರತೆಯಾಗದೆ ಯಥೇಚ್ಚ ಫಸಲು ಬರಲಿ. ಆ ಮೂಲಕ ರೈತರ ಬದುಕು ಹಸನಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹಾರೈಸಿದ್ದಾರೆ. ಇದನ್ನೂ ಓದಿ: ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಕೋವಿಡ್ ಲಸಿಕೆ – ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ

Share This Article
Leave a Comment

Leave a Reply

Your email address will not be published. Required fields are marked *