ಬೊಮ್ಮಾಯಿ ಸ್ವತಂತ್ರವಾಗಿ ಆಡಳಿತ ನಡೆಸೋದು ಸಾಧ್ಯನಾ?: ಸಿದ್ದರಾಮಯ್ಯ

Public TV
1 Min Read

– ಸಿಎಂ ಬದಲಾದ ತಕ್ಷಣ ಬಜೆಪಿ ಐಡಿಯಾಲಜಿ ಬದಲಾಗುತ್ತಾ?

ಮೈಸೂರು: ನೂತನ ಸಿಎಂ ಬಸವರಾಜ ಬೊಮ್ಮಾಯಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯನಾ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಹೆಸರು ಸೂಚಿಸಿರುವುದು ಯಡಿಯೂರಪ್ಪ. ಈ ಕಾರಣದಿಂದ ಸರ್ಕಾರದ ಮೇಲೆ ಬಿಎಸ್‍ವೈ ಸಹಜವಾಗಿಯೇ ಹಿಡಿತ ಹೊಂದಿರುತ್ತಾರೆ. ಹೀಗಿರುವಾಗ ಬೊಮ್ಮಾಯಿ ಸ್ವತಂತ್ರವಾಗಿ ಸರ್ಕಾರ ನಡೆಸಲು ಸಾಧ್ಯವಾ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಈ ಕ್ಷಣದಲ್ಲೇ ನಾನು ಬೊಮ್ಮಯಿ ಬಗ್ಗೆ ಏನೂ ಹೇಳುವುದಿಲ್ಲ. ಅವರ ಆಡಳಿತವನ್ನು ಕಾದು ನೋಡೋಣ. ಈಗಲೇ ಅವರನ್ನು ಸುಮ್ಮನೆ ದೂರುವುದಿಲ್ಲ ಎಂದರು.

ಬೊಮ್ಮಾಯಿ ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸುತ್ತೇನೆ. ಎಸ್.ಆರ್ ಬೊಮ್ಮಾಯಿಯವರ ಗುಣ ಮಗನಿಗೆ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಮಹಾತ್ಮ ಗಾಂಧಿ ಮಗ ಕುಡುಕನಾದ. ಗಾಂಧಿ ಮಗ ಗಾಂಧಿಯಾಗಲಿಲ್ಲ. ಅದೇ ರೀತಿ ಬೊಮ್ಮಾಯಿ ಮಗ ತಂದೆಯಂತೆ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ತಂದೆಯ ಗುಣ ಕೆಲವು ಮಕ್ಕಳಿಗೆ ಬರುವುದಿಲ್ಲ ಎಂದು ವಿಶ್ಲೇಷಿಸಿದರು. ಇದನ್ನೂ ಓದಿ: 2023ಕ್ಕೆ ವಿಜಯೇಂದ್ರರನ್ನ ಸಿಎಂ ಮಾಡಲು ಬೊಮ್ಮಾಯಿ ಆಯ್ಕೆ: ಆನಂದ್ ಆಸ್ನೋಟಿಕರ್

ಮುಖ್ಯಮಂತ್ರಿ ಬದಲಾದರೆ ಎಲ್ಲವೂ ಬದಲಾಗುತ್ತಾ? ಯಡಿಯೂರಪ್ಪ ಇಳಿದಿದ್ದಾರೆ. ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದ ಮಾತ್ರಕ್ಕೆ ಬಿಜೆಪಿಯ ಐಡಿಯಾಲಜಿ ಬದಲಾಗುತ್ತಾ? ಕೋಮುವಾದ ಹೊರಟುಹೋಗುತ್ತಾ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

ಹಿಂದುತ್ವದ ಅವರ ಅಜೆಂಡಾ ಬದಲಾಗುತ್ತಾ? ಬಿಜೆಪಿಯವರು ಯಾವತ್ತಿಗೂ ಅಲ್ಪಸಂಖ್ಯಾತರು, ದಲಿತರು, ಬಡವರ ಪರವಾಗಿ ಇಲ್ಲ. ಹಾಗಾಗಿ ಬಿಜೆಪಿ ಸರ್ಕಾರದಿಂದ ಯಾವುದೇ ನಿರೀಕ್ಷೆ ಮಾಡುವುದಿಲ್ಲ. ಆದರೆ ಬೊಮ್ಮಾಯಿ ಆರ್.ಎಸ್.ಎಸ್ ನಿಂದ ಬಂದವರಲ್ಲ ಅವರಿಗೆ ಒಂದು ಅವಕಾಶ ಸಿಕ್ಕಿದೆ. ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಆಡಳಿತ ನೀಡಲಿ ಎಂದು ಅಭಿಪ್ರಾಯಪಟ್ಟರು.

ಸೂಪರ್ ಸಿಎಂ ಎಂಬ ಆರೋಪದಿಂದ ಮುಕ್ತನಾದೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಅಂದ್ರೆ ಸೂಪರ್ ಸಿಎಂ ಆಗಿದ್ದೆ ಎಂಬುದು ಅವರ ಮಾತಿನ ಅರ್ಥನಾ? ಅದನ್ನು ಒಪ್ಪಿಕೊಂಡಂತೆ ಅಲ್ವ? ಇನ್ನೂ ಮೂರು ತಿಂಗಳು ಏನು ಮಾತನಾಡಲ್ಲ ಮುಂದೆ ನೋಡೋಣ ಎಂದರು.

Share This Article
Leave a Comment

Leave a Reply

Your email address will not be published. Required fields are marked *