ಬೈಪಾಸ್‍ಗೆ ಮನೆ ಬಲಿಯಾಗುತ್ತೆಂದು 35 ಲಕ್ಷ ಕೊಟ್ಟು ಮನೆಯನ್ನೇ ಶಿಫ್ಟ್ ಮಾಡಿಸಿದ್ರು

Public TV
2 Min Read

– ಹಾಸನದಲ್ಲಿ 120 ಮೀಟರ್ ಮುಂದಕ್ಕೆ ಮನೆ ಶಿಫ್ಟ್

ಹಾಸನ: ಅದು ತುಂಬಾ ಪ್ರೀತಿಯಿಂದ ಕಟ್ಟಿದ ಸುಂದರವಾದ ಮನೆ. ಸುಂದರ ನೆನಪುಗಳಿರುವ ಆ ಮನೆ ಬೈಪಾಸ್ ಕಾರಣಕ್ಕೆ ಒಡೆಯುತ್ತಾರೆ ಎಂಬ ಸುದ್ದಿ ಕೇಳಿ ಮನೆಯ ಯಜಮಾನ ಅಕ್ಷರಶಃ ನೊಂದು ಹೋಗಿದ್ದರು. ಹೇಗಾದರೂ ಮಾಡಿ ಪ್ರೀತಿಯ ಮನೆ ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿದ ಮನೆಯ ಯಜಮಾನ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆಯನ್ನೇ 120 ಅಡಿ ಮುಂದಕ್ಕೆ ಶಿಫ್ಟ್ ಮಾಡಿಸುತ್ತಿದ್ದಾರೆ.

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆಯವರಾದ ಲೋಕೇಶ್ 2003ರಲ್ಲಿ ಸುಮಾರು ಒಂದು ಕೋಟಿಯಷ್ಟು ಹಣ ಖರ್ಚು ಮಾಡಿ ಬಾಳ್ಳುಪೇಟೆಯಲ್ಲಿ ಒಂದು ಸುಂದರ ಮನೆ ಕಟ್ಟಿಕೊಂಡಿದ್ದರು. ರಸ್ತೆ ಪಕ್ಕದಲ್ಲೇ ಇವರ ವಿಶಾಲವಾದ ಜಾಗವಿತ್ತು. ಒಂದು ವೇಳೆ ರಸ್ತೆ ಅಗಲೀಕರಣ ಆದರೆ ಮನೆ ಒಡೆಯುವ ಸಂದರ್ಭ ಬರಬಾರದೆಂದು, ರಸ್ತೆಯಿಂದ ಸುಮಾರು 100 ಮೀಟರ್ ಬಿಟ್ಟು ಮನೆ ಕಟ್ಟಿದ್ದರು.

ಅದೇ ಮನೆಯಲ್ಲಿ ಲೋಕೇಶ್ ಅವರ ಮಕ್ಕಳು ಬೆಳೆದು ದೊಡ್ಡವರಾಗಿದ್ರು. ಉತ್ತಮವಾಗಿ ಓದಿ ಒಳ್ಳೇ ಪದವಿ ಪಡೆದಿದ್ದರು. ಲೋಕೇಶ್ ಆ ಮನೆಯಲ್ಲೇ ಮಕ್ಕಳ ಮದುವೆ ಕೂಡ ಮಾಡಿದ್ದರು. ಇಷ್ಟೆಲ್ಲ ಸುಂದರ ನೆನಪುಗಳಿರುವ ಮನೆಯನ್ನು ರಾಷ್ಟ್ರೀಯ ಹೆದ್ದಾರಿ 75ರ ಹಾಸನದಿಂದ ಬಿಸಿ ರೋಡ್‍ವರೆಗೆ ಬೈಪಾಸ್ ರಸ್ತೆ ನಿರ್ಮಿಸುವ ಸಲುವಾಗಿ ಒಡೆಯಬೇಕು ಎಂಬ ವಿಷ್ಯ ಕೇಳಿ ಮನೆ ಯಜಮಾನ ಲೋಕೇಶ್ ನೊಂದು ಹೋಗಿದ್ದರು. ಸಿಕ್ಕ ಸಿಕ್ಕ ಅಧಿಕಾರಿಗಳು, ರಾಜಕಾರಣಿಗಳ ಬಳಿ ತೆರಳಿ ಮನೆ ಉಳಿಸಿಕೊಳ್ಳಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು. ಆದರೆ ಅಂತಿಮವಾಗಿ ಬೈಪಾಸ್ ರಸ್ತೆಯ ನಕ್ಷೆ ಬದಲಿಸಲು ಸಾಧ್ಯವಿಲ್ಲ ಎಂದು ತಿಳಿದ ಲೋಕೇಶ್ ಈಗ ಪ್ರೀತಿಯ ಮನೆ ಉಳಿಸಿಕೊಳ್ಳಲು ಮನೆಯನ್ನೇ ಮುಂದಕ್ಕೆ ಶಿಫ್ಟ್ ಮಾಡಿಸುತ್ತಿದ್ದಾರೆ.

ಲೋಕೇಶ್ ಅವರ ಮನೆಯಯನ್ನು ಅದು ಇದ್ದ ಜಾಗದಿಂದ ಸುಮಾರು 120 ಅಡಿ ಮುಂದಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಸುಮಾರು 35 ಲಕ್ಷ ವೆಚ್ಚದಲ್ಲಿ ಟಿಡಿಬಿಡಿ ಕಂಪೆನಿಯವರು ಮನೆ ಶಿಫ್ಟ್ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಮನೆ ಶಿಫ್ಟ್ ಮಾಡುವಾಗ ಏನಾದರು ಸಮಸ್ಯೆ ಆದರೆ ಅದಕ್ಕೆ ಕಂಪೆನಿಯವರೇ ಸಂಪೂರ್ಣ ಹೊಣೆ ಹೊರಬೇಕಾಗುತ್ತೆ. ಇಷ್ಟುದಿನ ಕೊರೊನಾ ಕಾರಣದಿಂದ ಮನೆ ಶಿಫ್ಟಿಂಗ್ ತಡವಾಗಿದ್ದು ಈಗ ಮನೆ ಶಿಫ್ಟ್ ಕಾರ್ಯ ಸಂಪೂರ್ಣಗೊಳ್ಳುವ ಹಂತ ತಲುಪಿದೆ.

ಇನ್ನೇನು ತುಂಬಾ ಪ್ರೀತಿಯಿಂದ ಕಟ್ಟಿದ ಮನೆ ಬೈಪಾಸ್ ರಸ್ತೆ ಕಾರಣಕ್ಕೆ ನಾಶವಾಗಿ ಹೋಗುತ್ತೆ ಎಂಬ ನೋವಿನಲ್ಲಿದ್ದ ಲೋಕೇಶ್ ಕುಟುಂಬಕ್ಕೆ ಮನೆ ಶಿಫ್ಟ್ ಮಾಡಿಸುತ್ತಿರುವುದು ಸಂತಸ ತಂದಿದೆ. ತಮ್ಮ ಸಾವಿರಾರು ಸುಂದರ ನೆನಪುಗಳೊಂದಿಗೆ ಮತ್ತೆ ತಮ್ಮ ಪ್ರೀತಿಯ ಹಳೆ ಮನೆಯಲ್ಲೇ ವಾಸ ಮಾಡಲು ಸಾಧ್ಯವಾಗಿದ್ದು ಅವರ ಸಂತಸ ಇಮ್ಮಡಿಗೊಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *