ಬೆಳ್ಳಿ, ಚಿನ್ನ ಆಯ್ತು- ಈಗ ಡೈಮಂಡ್ ಮಾಸ್ಕ್ ಮಾರಾಟ

Public TV
2 Min Read

– 1.5 ಲಕ್ಷದಿಂದ 4 ಲಕ್ಷದ ಬೆಲೆಯ ಮಾಸ್ಕ್

ಗಾಂಧಿನಗರ: ಕೊರೊನಾ ನಂತರ ದೇಶಾದ್ಯಂತ ಫೇಸ್ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಅನೇಕರು ವಿವಿಧ ರೀತಿಯ ಮಾಸ್ಕ್ ತಯಾರಿಸಿಕೊಂಡು ಧರಿಸುತ್ತಿದ್ದಾರೆ. ಈಗಾಗಲೇ ಅನೇಕರು ಬೆಳ್ಳಿ, ಚಿನ್ನದಿಂದ ತಯಾರಿಸಿದ್ದ ಮಾಸ್ಕ್‌ಗಳನ್ನು ಧರಿಸಿದ್ದಾರೆ. ಇದೀಗ ಗುಜರಾತ್‍ನ ಸೂರತ್‍ನಲ್ಲಿ ವಜ್ರದಿಂದ ಮಾಸ್ಕ್ ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

ಸೂರತ್‍ನ ಆಭರಣ ಅಂಗಡಿಯೊಂದು 1.5 ಲಕ್ಷದಿಂದ 4 ಲಕ್ಷದವರೆಗಿನ ವಜ್ರದಿಂದ ತಯಾರಿಸಿರುವ ಮಾಸ್ಕ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನೂ ಓದಿ: 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ ಧರಿಸಿದ ವ್ಯಕ್ತಿ!

ಈ ಬಗ್ಗೆ ಮಾತನಾಡಿದ ಆಭರಣ ಅಂಗಡಿಯ ಮಾಲೀಕ ದೀಪಕ್ ಚೋಕ್ಸಿ, “ಲಾಕ್‍ಡೌನ್ ಸಡಿಲಗೊಳಿಸಿದ ನಂತರ ಗ್ರಾಹಕರೊಬ್ಬರು ನಮ್ಮ ಅಂಗಡಿಗೆ ಬಂದು, ನಮ್ಮ ಮನೆಯಲ್ಲಿ ವಿವಾಹ ನಡೆಯುತ್ತಿದೆ. ವಧು-ವರರಿಗೆ ವಿಶಿಷ್ಟವಾದ ಮಾಸ್ಕ್‌ಗಳನ್ನು ಮಾಡಿಕೊಂಡಿ ಎಂದು ಕೇಳಿಕೊಂಡರು. ಆಗ ವಜ್ರದಿಂದ ಮಾಸ್ಕ್ ತಯಾರಿಸುವ ಯೋಚನೆ ಬಂತು. ಈ ವೇಳೆ ನಮ್ಮ ವಿನ್ಯಾಸಕರಿಗೆ ಹೇಳಿ ವಜ್ರದ ಮಾಸ್ಕ್ ರೆಡಿ ಮಾಡಿಸಿದ್ದೇವೆ. ಅದನ್ನು ಅವರು ಖರೀದಿಸಿದ್ದಾರೆ” ಎಂದು ಹೇಳಿದರು.

ಅಲ್ಲದೇ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ವಜ್ರದ ಮಾಸ್ಕ್ ಬೇಕಾಗಬಹುದು ಎಂದು ಅಂತಹ ಅನೇಕ ಮಾಸ್ಕ್‌ಗಳನ್ನು ತಯಾರಿಸಲಾಗಿದೆ. ಇದರಲ್ಲಿ ವಜ್ರ ಮತ್ತು ಅಮೇರಿಕನ್ ವಜ್ರವನ್ನು ಚಿನ್ನದೊಂದಿಗೆ ಬಳಸಲಾಗಿದೆ. ಅಮೆರಿಕನ್ ವಜ್ರದ ಜೊತೆಗೆ ಮಾಸ್ಕ್‌ನಲ್ಲಿ ಹಳದಿ ಚಿನ್ನವನ್ನು ಬಳಸಲಾಗಿದೆ. ಇದರ ಬೆಲೆ 1.5 ಲಕ್ಷ ರೂಪಾಯಿ ಆಗಿದೆ. ಬಿಳಿ ಚಿನ್ನ ಮತ್ತು ರಿಯಲ್ ವಜ್ರದಿಂದ ಮತ್ತೊಂದು ಮಾಸ್ಕ್ ತಯಾರಿಸಿದ್ದೇವೆ. ಇದರ ಬೆಲೆ 4 ಲಕ್ಷ ರೂಪಾಯಿಗಳು ಎಂದು ಚೋಕ್ಸಿ ತಿಳಿಸಿದರು.

ಈ ಮಾಸ್ಕ್‌ಗಳ ಬಟ್ಟೆಯ ವಸ್ತುಗಳನ್ನು ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ಬಳಸಿದ್ದೇವೆ. ಈ ಮಾಸ್ಕ್‌ಗಳಿಂದ ವಜ್ರ ಮತ್ತು ಚಿನ್ನವನ್ನು ಗ್ರಾಹಕರ ಇಚ್ಛೆಯಂತೆ ತೆಗೆದುಕೊಂಡು ಇತರ ಆಭರಣವನ್ನು ತಯಾರಿಸಲು ಬಳಸಬಹುದು ಎಂದು ಅಂಗಡಿ ಮಾಲೀಕರು ಹೇಳಿದರು.

ನಮ್ಮ ಕುಟುಂಬದಲ್ಲಿ ಮದುವೆ ಇರುವುದರಿಂದ ನಾನು ಆಭರಣ ಖರೀದಿಸಲು ಅಂಗಡಿಗೆ ಬಂದೆ. ಇಲ್ಲ ನಾನು ಆಭರಣಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುವ ವಜ್ರದ ಮಾಸ್ಕ್‌ಗಳನ್ನು ನೋಡಿದೆ. ಆದ್ದರಿಂದ ನಾನು ವಜ್ರದ ಮಾಸ್ಕ್ ಖರೀದಿಸಲು ನಿರ್ಧರಿಸಿದೆ. ಅಲ್ಲದೇ ನನ್ನ ಉಡುಪಿಗೆ ಹೊಂದಾಣಿಕೆಯಾಗುವ ಮಾಸ್ಕ್ ಖರೀಸಿದೆ ಎಂದು ಗ್ರಾಹಕರೊಬ್ಬರು ಹೇಳಿದರು.

ಇತ್ತೀಚೆಗೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ನಿವಾಸಿ ಶಂಕರ್ ಕುರಡೆ ಎಂಬವರು 2.89 ಲಕ್ಷ ಮೌಲ್ಯದ ಮಾಸ್ಕ್ ತಯಾರಿಸಿದ್ದರು. ಶಂಕರ್ ಚಿನ್ನದ ಮಾಸ್ಕ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *