ಬೆಳೆಯನ್ನು ತಾನೇ ನಾಶ ಮಾಡಿ ಜಾನುವಾರುಗಳಿಗೆ ಮೇಯಲು ಬಿಟ್ಟ ರೈತ

Public TV
1 Min Read

ಚಿಕ್ಕಮಗಳೂರು: ತೋಟಗಾರಿಕೆ ಇಲಾಖೆ ಬಳಿ ಹೋದರೆ ಸೆಕ್ರೆಟರಿ ಬಳಿ ಹೋಗಿ ಅಂತಾರೆ. ಸೆಕ್ರೆಟರಿ ಬಳಿ ಹೋದರೆ ಅಲ್ಲಿ-ಇಲ್ಲಿ ಹೋಗಿ ಅಂತಾರೆ. ಸರ್ಕಾರ ಕಣ್ಣಿದ್ದು ಕುರುಡಾಗಿದೆ, ನಮ್ಮಂಥವರಿಗೆ ಏನು ಮಾಡ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರೊಬ್ಬರು ಹಗಲಿರುಳು ಕಷ್ಟಪಟ್ಟು ಬೆಳೆದ ಬೆಳೆಯನ್ನು ಟ್ಯಾಕ್ಟರ್ ಹೊಡೆಸಿ ನಾಶ ಮಾಡಿದ್ದಾರೆ.

ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ನಾಗೇನಹಳ್ಳಿ ಅಗ್ರಹಾರ ತಾಂಡ್ಯಾದಲ್ಲಿ ರೈತ ಕಿರಣ್ ಎರಡು ಎಕ್ರೆ ಜಮೀನಿನಲ್ಲಿ ಎಲೆಕೋಸನ್ನ ಬೆಳೆದಿದ್ದರು. ಎರಡು ಎಕ್ರೆ ಎಲೆಕೋಸನ್ನ ಬೆಳೆಯಲು ಸುಮಾರು ಒಂದೂವರೆ ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದರು. ಫಸಲು ಉತ್ತಮವಾಗಿತ್ತು. ಎರಡರಿಂದ ಮೂರು ಲಕ್ಷ ಲಾಭದ ನಿರೀಕ್ಷೆಯಲ್ಲಿ ರೈತರು ಇದ್ದರು. ಆದರೆ ಬೆಳೆ ಕೊಳ್ಳಲು ಯಾರೂ ಮುಂದೆ ಬರದೆ, ದಿನದಿಂದ ದಿನಕ್ಕೆ ಬೆಳೆ ಹಾಳಾಗ್ತಿರೋದನ್ನ ಕಂಡು ಮನನೊಂದ ರೈತ ಕಿರಣ್ ಎರಡು ಎಕ್ರೆಗೂ ಟ್ರ್ಯಾಕ್ಟರ್ ಹೊಡೆಸಿ ಬೆಳೆ ನಾಶ ಮಾಡಿದ್ದಾರೆ.

ಕೊರೊನಾ ಆತಂಕದಿಂದ ದೇಶದಲ್ಲಿ ಲಾಕ್‍ಡೌನ್ ಜಾರಿ ಮಾಡುವ ಮೊದಲು ಹಾಗೂ ಲಾಕ್‍ಡೌನ್ ವೇಳೆಯಲ್ಲೂ ಎಲೆಕೋಸಿಗೆ ಉತ್ತಮ ಬೆಲೆ ಇತ್ತು. ಆದರೆ ಲಾಕ್‍ಡೌನ್ ಹಿನ್ನೆಲೆ ಬೆಳೆ ಖರೀದಿಸೋಕೆ ಮಧ್ಯವರ್ತಿಗಳು ಬರಲಿಲ್ಲ. ಬೇರೆ ಯಾರೂ ಖರೀದಿಗೆ ಮುಂದಾಗಿಲ್ಲ. ಇದರಿಂದ ಮನನೊಂದ ರೈತ ಎರಡು ಎಕ್ರೆ ಎಲೆಕೋಸಿಗೂ ಟ್ರ್ಯಾಕ್ಟರ್ ಹೊಡೆಸಿದ್ದಾರೆ. ಜೊತೆಗೆ ಊರಿನ ಕುರಿ-ಮೇಕೆ, ದನ-ಕರುಗಳನ್ನ ಹೊಲದಲ್ಲೇ ಮೇಯಲು ಬಿಟ್ಟು, ಎಲೆಕೋಸನ್ನ ಕತ್ತರಿಸಿ ಹೊಲದಲ್ಲೇ ಹಾಕುತ್ತಿದ್ದಾರೆ.

ಈ ಗ್ರಾಮದ ಹಲವರು ಹತ್ತಾರು ಎಕ್ರೆಯಲ್ಲಿ ವಿವಿಧ ರೀತಿಯ ಬೆಳೆ ಬೆಳೆದಿದ್ದರು. ಆದರೆ ಬೆಳೆ ಖರೀದಿಗೆ ಯಾರೂ ಬಾರದ ಕಾರಣ ಬಹುತೇಕರು ಬೆಳೆಯನ್ನ ಹಾಳು ಬಿಟ್ಟಿದ್ದಾರೆ. ಕೆಲವರು ಬೆಳೆ ನಾಶ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *