ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಮಳೆ -ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

Public TV
2 Min Read

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಒಂದು ಕಡೆ ಉತ್ತರ ಕರ್ನಾಟಕದಲ್ಲಿ ಮಳೆ ಚುರುಕು ಪಡೆದಿದ್ದು, ಅತ್ತ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರೆಂಜ್ ಅಲಟ್ ಘೋಷಿಸಲಾಗಿದೆ. ಪುಣೆ, ಸತಾರಾದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 20ರವರೆಗೂ ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ಭಾರೀ ಮಳೆ ಆಗುವ ಮುನ್ನೆಚ್ಚರಿಕೆ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂಗಳಿಂದಲೂ ಅಪಾರ ಪ್ರಮಾಣದಲ್ಲಿ ನೀರನ್ನ ಹೊರಬಿಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ನವಿಲು ತೀರ್ಥ ಡ್ಯಾಂನಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಸವದತ್ತಿ ತಾಲೂಕಿನ ಮುನವಳ್ಳಿ ಮನೆ, ಅಂಗಡಿಗಳು ಜಲಾವೃತಗೊಂಡಿವೆ. ಎಂಕೆ ಹುಬ್ಬಳ್ಳಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಜಲಾವೃತಗೊಂಡಿದೆ. ಮಂಡೋಳಿ ರಸ್ತೆಯಲ್ಲಿ ಪ್ರವಾಹದಲ್ಲಿ ಸಿಲುಕಿ ಒದ್ದಾಡ್ತಿದ್ದ ಬೈಕ್ ಸವಾರನನ್ನು ಸ್ಥಳೀಯರು ಬಚಾವ್ ಮಾಡಿದ್ದಾರೆ. ವಡಗಾವಿ, ಓಂನಗರ, ಶಾಹು ನಗರ, ಮಚ್ಷೆ, ಮಾರಿಹಾಳ ಹಳ್ಳಗಳು ತುಂಬಿ ಹರಿಯುತ್ತಿವೆ. ಮಾರಿಹಾಳದಲ್ಲಿ ರಸ್ತೆಯ ಬದಿಯಲ್ಲಿ ಭೂಕುಸಿತ ಉಂಟಾಗಿದ್ದು, ಬೆಳಗಾವಿ-ಗೋವಾ ರಸ್ತೆ ಬಂದ್ ಆಗಿದೆ.

ನವಿಲುತೀರ್ಥ ಡ್ಯಾಂನಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಮಲಪ್ರಭಾ ನದಿ ತಟದಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿಲಾಗಿದೆ. ಕ್ಷೇತ್ರದ ಶಾಸಕರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿ ಕೆ ರಾಜೇಂದ್ರಗೆ ದೂರವಾಣಿ ಕರೆ ಮಾಡಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಗೋವನಕೊಪ್ಪ-ಕೊಣ್ಣೂರು ಮಾರ್ಗದ ಹಳೆ ರಸ್ತೆ ಸೇತುವೆ ಜಲಾವೃತಗೊಂಡಿದೆ. ಸ್ಥಳಕ್ಕೆ ಎಸ್‍ಪಿ ಲೋಕೇಶ್ ಜಗಲಾಸರ್, ಎಸಿ ಗಂಗಪ್ಪ, ಬಾದಾಮಿ ತಹಸೀಲ್ದಾರ ಸುಹಾಸ ಇಂಗಳೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಿಡಕಲ್ ಡ್ಯಾಂನಿಂದ 33 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಿರುವ ಕಾರಣ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು ಮುಧೋಳ ತಾಲೂಕಿನ ಮಾಚಕನೂರಲ್ಲಿರುವ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದೆ.

ತುಂಗಾಭದ್ರಾ ಜಲಾಶಯದ ಕ್ರಸ್ಟ್ ಗೇಟ್‍ನಿಂದ 4,539 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು, ಹಾಲ್ನೊರೆಯಂತೆ ಉಕ್ಕುತ್ತಿರುವ ನೀರು ಬಣ್ಣದ ಬೆಳಕಿನಲ್ಲಿ ಚಿತ್ತಾರ ಮೂಡಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿರುವ ಜಲಾಶಯದ ಭರ್ತಿಗೆ ಅರ್ಧ ಅಡಿಯಷ್ಟೇ ಬಾಕಿ ಇದ್ದು, 1632 ಅಡಿಯಷ್ಟು ನೀರು ಸಂಗ್ರಹಗೊಂಡಿದೆ.

ಯಾದಗಿರಿ ಜಿಲ್ಲೆಯ ನಾರಾಯಣಪುರ ಡ್ಯಾಂನಿಂದ 2 ಲಕ್ಷ 37 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗ್ತಿದೆ. ಹೀಗಾಗಿ ರಾಯಚೂರಲ್ಲಿ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದ್ದು, ಎನ್‍ಡಿಆರ್‍ಎಫ್ ತಂಡ ಆಗಮಿಸಿದೆ. ಧಾರವಾಡ ತಾಲೂಕಿನ ಹೊಸೆಟ್ಟಿಯಲ್ಲಿ ಗ್ರಾಮಕ್ಕೆ ಕೆರೆ ನೀರು ನುಗ್ಗಿದೆ. ವಿಜಯಪುರ ಜಿಲ್ಲೆಯಲ್ಲೂ ಮಳೆ ಆಗಗುತ್ತಿದೆ. ಕಲಬುರಗಿ ಜಿಲ್ಲೆಯ ಸೊನ್ನ ಬ್ಯಾರೆಜ್‍ನಿಂದ ಭೀಮ ನದಿಗೆ 40 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ, ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಗದಗ ಜಿಲ್ಲೆಯಲ್ಲೂ ಪ್ರವಾಹ ಭೀತಿ ಉಂಟಾಗಿದೆ. ಮಲೆನಾಡು ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರಲ್ಲೂ ಮಳೆ ಆಗ್ತಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲೂ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರಲ್ಲೂ ಮೂರು ದಿನ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *