ಬೆಳಗಾವಿ, ಕಾರವಾರಕ್ಕಾಗಿ ‘ಮಹಾ’ ಕ್ಯಾತೆ – ಅಜಿತ್ ಪವಾರ್ ವಿರುದ್ಧ ಪಕ್ಷಾತೀತ ಆಕ್ರೋಶ

Public TV
2 Min Read

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮದ ರಚನೆ ವಿರೋಧಿಸಿ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿರುವ ಹೊತ್ತಲ್ಲೇ, ಕನ್ನಡಿಗರ ಕಿಚ್ಚಿಗೆ ತುಪ್ಪ ಸುರಿಯುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರ ಮಾಡಿದೆ. ಬಾಳಾಠಾಕ್ರೆ ಪುಣ್ಯಸ್ಮರಣೆ ವೇಳೆ ಎನ್‍ಸಿಪಿ ನೇತಾರ, ಡಿಸಿಎಂ ಅಜಿತ್ ಪವಾರ್ ನೀಡಿದ ವಿವಾದಾತ್ಮಕ ಹೇಳಿಕೆ ದಶಕಗಳ ಕಿಚ್ಚನ್ನು ಬಡಿದೆಬ್ಬಿಸುವಂತೆ ಮಾಡಿದೆ.

ಕರ್ನಾಟಕದ ಬೆಳಗಾವಿ, ಕಾರವಾರ, ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆನ್ನುವುದು ಠಾಕ್ರೆ ಅವರ ಕನಸಾಗಿತ್ತು. ಆ ಕನಸನ್ನು ನನಸು ಮಾಡುವ ಕೆಲಸ ನಾವೀಗ ಮಾಡಬೇಕಿದೆ ಎಂದು ನಿನ್ನೆ ನಡೆದ ಸಭೆಯಲ್ಲಿ ಅಜಿತ್ ಪವಾರ್ ಕರೆ ನೀಡಿದ್ದರು. ಅಜಿತ್ ಪವಾರ್ ಹೇಳಿಕೆ ಬೆನ್ನಲ್ಲೇ ಕರ್ನಾಟಕದಲ್ಲಿ ಆಕ್ರೋಶ ಸ್ಫೋಟಗೊಂಡಿದೆ. ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿದೆ.

ಅಜಿತ್ ಪವಾರ್ ಉದ್ಧಟತನದ ಹೇಳಿಕೆ ಸಹಿಸಲ್ಲ ಅಂತಾ ಸಿಎಂ ಎಚ್ಚರಿಸಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಸೂರ್ಯಚಂದ್ರ ಇರೋವರೆಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಚಿವ ಪ್ರಭು ಚವ್ಹಾಣ್ ಫಿಲ್ಮಿ ಸ್ಟೈಲಲ್ಲಿ ಡೈಲಾಗ್ ಹೊಡೆದಿದ್ದಾರೆ.. ಏ ಕರ್ನಾಟಕ ಉಸ್ಕಾ ಬಾಪ್ ಕಾ ನಹೀ.. ಏ ಹಮಾರೆ ಹೈ ಎಂದಿದ್ದಾರೆ. ಅಜಿತ್ ಪವಾರ್ ಸರ್ಕಾರ ಉಳಿಸಿಕೊಳ್ಳೋ ಸಲುವಾಗಿ ಈ ಕುತಂತ್ರದ ಹೇಳಿಕೆ ನೀಡಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ರೇಣುಕಾಚಾರ್ಯ ಅವರಂತೂ ಬೆಳಗಾವಿ ಕಾರವಾರದ ತಂಟೆಗೆ ಬಂದರೆ ತಕ್ಕ ಶಾಸ್ತಿ ಆಗುತ್ತೆ. ತಾಯಿ ಭುವನೇಶ್ವರಿಯ ಮೇಲಾಣೆ ಅಂತಾ ಗುಡುಗಿದ್ದಾರೆ. ಅಜಿತ್ ಪವಾರ್ ಮೆಂಟಲ್. ಕರ್ನಾಟಕದಲ್ಲಿರೋದು ರಾಜಾಹುಲಿ ಸರ್ಕಾರ ಅಂತಾ ಶಾಸಕ ರಾಜೀವ್ ಅಬ್ಬರಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಒಂದಿಂಚು ಜಾಗ ಕೊಡಲ್ಲ. ಹಾಗೇ ನೋಡಿದ್ರೆ ಮಹಾಜನ್ ವರದಿ ಅನ್ವಯ ಜತ್ತ, ಸೊಲ್ಲಾಪುರ ನಮಗೆ ಸೇರಬೇಕು ಎಂದಿದ್ದಾರೆ.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತೀವ್ರ ಆಕ್ರೋಶ ವ್ಯಕ್ತವಾಗ್ತಿರುವ ನಡುವೆಯೂ, ಸರ್ಕಾರ ತನ್ನ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರದ ಹೆಸರನ್ನು ಮರಾಠ ಸಮುದಾಯ ನಿಗಮ ಅಂತಾ ಬದಲಾಯಿಸಿ, ನಿಗಮ ಸ್ಥಾಪನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಒಂದು ಸಮುದಾಯದ ಅಭಿವೃದ್ಧಿ ವಿಚಾರವಾಗಿ ಯಾಕಿಷ್ಟು ವಿರೋಧ ಮಾಡ್ತಿದ್ದಾರೋ ಗೊತ್ತಿಲ್ಲ ಎಂದು ಕನ್ನಡ ಪರ ಸಂಘಟನೆಗಳನ್ನು ಮಾಧುಸ್ವಾಮಿ ಟೀಕಿಸಿದ್ದಾರೆ.

ಸ್ವತಃ ಮುಖ್ಯಮಂತ್ರಿಗಳು ಕೂಡ, ರಾಜ್ಯದಲ್ಲಿರುವ ಮರಾಠಿಗರು ಕೂಡ ಕನ್ನಡಿಗರೇ. ಇದು ಮರಾಠಿಗರ ಅಭಿವೃದ್ಧಿಗೆ ಮಾಡಿರುವ ನಿಗಮ. ಯಾರಾದ್ರೂ ಬಲತ್ಕಾರದ ಬಂದ್ ನಡೆಸಿದ್ರೆ ಜೋಕೆ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಭಾಷೆ, ಗಡಿ ವಿವಾದಕ್ಕೂ ಮರಾಠ ನಿಗಮಕ್ಕೂ ಸಂಬಂಧವಿಲ್ಲ ಎನ್ನುವ ಮೂಲಕ ಸಚಿವ ಎಸ್‍ಟಿ ಸೋಮಶೇಖರ್, ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಇದು ಬೈಎಲೆಕ್ಷನ್ ಗೆಲ್ಲಲು ಬಿಜೆಪಿ ಸರ್ಕಾರ ನಡೆಸಿದ ಷಡ್ಯಂತ್ರ್ಯ ಎಂದು ಕಾಂಗ್ರೆಸ್ಸಿಗರು ಟೀಕಿಸಿದ್ದಾರೆ. ಮರಾಠ ನಿಗಮ ಖಂಡಿಸಿ ಚಾಮರಾಜನಗರ, ಮೈಸೂರು ಸೇರಿದಂತೆ ಹಲವೆಡೆ ಪ್ರತಿಭಟನೆಗಳು ನಡೆದಿವೆ.

Share This Article
Leave a Comment

Leave a Reply

Your email address will not be published. Required fields are marked *