– 3 ಲಕ್ಷಕ್ಕೂ ಅಧಿಕ ಜನರ ಸೇರಿಸಲು ಸಾಹುಕಾರ್ ಪ್ಲಾನ್
– ದೊಡ್ಡವರಿಗೆ ಕೊರೊನಾ ನಿಯಮ ಅನ್ವಯವಾಗಲ್ವಾ?
ಬೆಳಗಾವಿ: ಇಂದು ಬೆಳಗಾವಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ಸ್ವಾಗತಕ್ಕೆ ಬೆಳಗಾವಿ ಜಿಲ್ಲಾ ಬಿಜೆಪಿ ಸಜ್ಜಾಗುತ್ತಿದೆ. ಇಂದು ನಡೆಯಲಿರುವ ಜನಸೇವಕ ಸಮಾವೇಶ ಸಮಾರೋಪ ಸಮಾರಂಭಕ್ಮೆ ಮೂರು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸುವ ಪ್ಲಾನ್ ನಡೆಯುತ್ತಿದ್ದು ಇದಕ್ಕೆ ಆರಂಭಿಕ ವಿಘ್ನ ಎದುರಾಗಿದೆ.
ಕುಂದಾನಗರಿ ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಜನಸೇವಕ ಸಮಾವೇಶ ಸಮಾರೋಪ ಸಮಾರಂಭ ನಡೆಯಲಿದ್ದು, ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿ ಸಚಿವರಾದ ಮೇಲೆ ಪಕ್ಷದ ಅತಿ ದೊಡ್ಡ ಕಾರ್ಯಕ್ರಮ ಇದಾಗಿದೆ. ಇದಕ್ಕಾಗಿ ರಮೇಶ್ ಜಾರಕಿಹೊಳಿ ಸಮಾವೇಶದ ಯಶಸ್ವಿಗೆ ಮೂರರಿಂದ ನಾಲ್ಕು ಲಕ್ಷ ಜನ ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಖುದ್ದು ಬೆಳಗಾವಿಯಲ್ಲೇ ಠಿಕಾಣಿ ಹೂಡಿ ಸಮಾವೇಶದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಬೆಳಗ್ಗೆ 10 ಗಂಟೆ ಸುಮಾರಿಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಕ್ಕೆ ಆಗಮಿಸಿ ಅಲ್ಲಿಂದ ನೇರವಾಗಿ ಬಾಗಲಕೋಟೆಗೆ ತೆರಳಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮಧ್ಯಾಹ್ನ ಬೆಳಗಾವಿಗೆ ಆಗಮಿಸಲಿರುವ ಅಮಿತ್ ಶಾ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಸಂಜೆ ಇತ್ತೀಚೆಗೆ ನಿಧನರಾದ ದಿವಂಗತ ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿ ಸುರೇಶ್ ಅಂಗಡಿಯವರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಸಂಜೆ ಏಳು ಗಂಟೆ ಸುಮಾರಿಗೆ ಬೆಳಗಾವಿಯ ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಲಿದ್ದು, ರಾಜ್ಯದ ನಾಯಕರೊಂದಿಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಜನಸೇವಕ ಸಮಾವೇಶ ನಡೆಯಲಿರುವ ಬೆಳಗಾವಿ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಿದ್ಧತೆಗಳನ್ನು ಪರಿಶೀಲಿಸಿದರು. ಇನ್ನು ಸಮಾರಂಭಕ್ಕೆ ಮೂರರಿಂದ ನಾಲ್ಕು ಲಕ್ಷ ಕಾರ್ಯಕರ್ತರನ್ನು ಸೇರಿ ಅದ್ಧೂರಿಯಾಗಿ ಕಾರ್ಯಕ್ರಮ ನೆರವೇರಿಸೋದಾಗಿಯೂ ತಿಳಿಸಿದ್ದಾರೆ.
ದೊಡ್ಡವರಿಗೆ ಕೊರೊನಾ ರೂಲ್ಸ್ ಇಲ್ವಾ?:
ಮೂರರಿಂದ ನಾಲ್ಕು ಲಕ್ಷ ಕಾರ್ಯಕರ್ತರನ್ನ ಸೇರಿಸುತ್ತಿರುವ ಬಿಜೆಪಿ ನಾಯಕರ ಈ ಕಾರ್ಯಕ್ಕೆ ಬಹುತೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್ ಆತಂಕದ ನಡುವೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರನ್ನ ಸೇರಿಸುತ್ತಿರುವುದು ಯಾಕೆ? ಕೊರೊನಾ ಮಾರ್ಗಸೂಚಿಗಳು ಈ ಕಾರ್ಯಕ್ರಮಕ್ಕೆ ಅನ್ವಯ ಆಗುತ್ತಿಲ್ಲ ಎಂಬ ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿಯ ಜನಸೇವಕ ಸಮಾವೇಶ ರದ್ದುಪಡಿಸಿ ಇಲ್ಲ ಅಥವಾ ಕೋವಿಡ್ ಮಾರ್ಗಸೂಚಿ ಹಿಂಪಡೆಯಬೇಕು. ಇಲ್ಲವಾದ್ರೆ ಸರ್ಕಾರದ ವಿರುದ್ಧ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇವೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆರ್‍ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಪತ್ರ ಬರೆದಿದ್ದಾರೆ.
ಕೋವಿಡ್ ಮಾರ್ಗಸೂಚಿಯಂತೆ ದೇವಸ್ಥಾನ ಪ್ರವೇಶ, ಜಾತ್ರೆ ರದ್ದು ಮಾಡಲಾಗಿದೆ. ಕಳೆದ 10 ತಿಂಗಳಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನ ಬಂದ್ ಇದ್ರೇ ಇತ್ತ ಕೋವಿಡ್ ನಿಯಂತ್ರಣಕ್ಕಾಗಿ ಲಕ್ಷಾಂತರ ಕೋಟಿ ಹಣ ಖರ್ಚು ಮಾಡ್ತಿದೆ. ಮಾಸ್ಕ್ ಧರಿಸದ ಸಾಮಾನ್ಯ ಜನರಿಗೆ ದಂಡ ವಿಧಿಸಲಾಗುತ್ತಿದೆ ಜ.17ರಂದು ನಾಲ್ಕು ಲಕ್ಷ ಸೇರಿ ಸಮಾವೇಶ ನಡೆಸೋದಾಗಿ ಬಿಜೆಪಿಯವರು ಹೇಳಿದ್ದು ರಾಜಕಾರಣಿಗಳಿಗೆ ಒಂದು ಕಾನೂನು, ಜನಸಾಮಾನ್ಯರಿಗೆ ಒಂದು ಕಾನೂನಾ ಎಂಬುದನ್ನ ಪ್ರಶ್ನಿಸುತ್ತಿದ್ದಾರೆ. ಜನಸೇವಕ ಸಮಾವೇಶ ರದ್ದುಗೊಳಿಸಿ ಇಲ್ಲವಾದ್ರೆ ಕೋವಿಡ್ ಮಾರ್ಗಸೂಚಿ ಹಿಂಪಡೆಯಬೇಕು ಎಂದು ಸಾರ್ವಜನಿಕರು ಸೇರಿದಂತೆ ಸಾಕಷ್ಟು ಜನರು ಒತ್ತಾಯಿಸುತ್ತಿದ್ದಾರೆ.
ಒಟ್ಟಾರೆಯಾಗಿ ಅತಿ ಹೆಚ್ಚು ಜನರನ್ನು ಸೇರಿಸಿ ಅಮಿತ್ ಶಾ ಎದುದು ಶಕ್ತಿ ಪ್ರದರ್ಶನಕ್ಕೆ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ. ಇತ್ತ ಮಹಾಮಾರಿ ಕೊರೊನಾ ಆತಂಕದ ನಡುವೆ ಇಷ್ಟೊಂದು ಜನರನ್ನು ಸೇರಿಸಿ ಸಮಾವೇಶ ಮಾಡುವ ಅಗತ್ಯವಾದರೂ ಏನು ಅಂತಾ ಆರ್‍ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಪ್ರಶ್ನಿಸಿದ್ದು ಆರೋಗ್ಯ ಇಲಾಖೆ ಸಲಹೆ ಪಡೆದು ಮುಂಜಾಗ್ರತಾ ಕ್ರಮ ಅನುಸರಿಸಿ ಸಮಾವೇಶ ನಡೆಸೋದಾಗಿ ಬಿಜೆಪಿ ನಾಯಕರು ಹೇಳುತ್ತಿದೆ. ಸಾಮಾನ್ಯ ಜನರಿಗೆ ಒಂದು ನ್ಯಾಯ ರಾಜಕೀಯ ನಾಯಕರಿಗೆ ಒಂದು ನ್ಯಾಯವಾ ಅಂತಾ ಸಾರ್ವಜನಿಕರು ಪ್ರಶ್ನಿಸುತ್ತಿರುವುದಂತೂ ಸುಳ್ಳಲ್ಲ.