ಚಾಮರಾಜನಗರ: ಮಹಾರಾಷ್ಟ್ರದವರು ಹೇಳೋದು ಹೊಸದೇನಲ್ಲ. ಸುಮಾರು ವರ್ಷದಿಂದ ಇದನ್ನೇ ಹೇಳ್ತಿದ್ದಾರೆ. ಹೊಸ ಸರ್ಕಾರ ಬಂದ ವೇಳೆ ಇಂತಹ ಹೇಳಿಕೆ ಕೊಡ್ತಾರೆ. ಅದು ಮುಗಿದು ಹೋಗಿರುವ ಅಧ್ಯಾಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರದಿಂದ ಗಡಿ ಕ್ಯಾತೆ ಕುರಿತು ಕೊಳ್ಳೇಗಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಕ್ಷ್ಯಚಿತ್ರ ರಿಲೀಸ್ ಮಾಡಿದ್ರೆ ಏನಾಯ್ತು. ನಾವೂ ಬೆಳಗಾವಿಯನ್ನು ಬಿಡೊಕ್ಕಾಗುತ್ತಾ. ಬೆಳಗಾವಿ ಕರ್ನಾಟಕದಲ್ಲಿದೆ, ಇಲ್ಲೆ ಇರುತ್ತೆ. ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ನಾನು ಕೂಡ ಹಲವು ಬಾರಿ ಈ ವಿಚಾರ ಮಾತನಾಡಿದ್ದೀವಿ. ಈಗ ಬಿಜೆಪಿ ಸರ್ಕಾರವಿರೋದ್ರಿಂದ ಅವರೇ ಈ ಕುರಿತು ಮಾತನಾಡಬೇಕು. ಮೂರು ರಾಜ್ಯದಲ್ಲೂ ಕೂಡ ಅವರದ್ದೇ ಸರ್ಕಾರವಿದೆ. ಆದರೆ ಯಾಕೆ ಮಹಾದಾಯಿ ವಿಚಾರ ಬಗೆಹರಿಸಿಲ್ಲ. ಇದು ರಾಜ್ಯ ಇಶ್ಯಾ ಇದೆ ಎಂದು ಕಿಡಿಕಾರಿದರು.
ಮಹಾರಾಷ್ಟ್ರ ಸರ್ಕಾರಕ್ಕೆ ಕೇಳುವ ಹಕ್ಕಿದೆ. ಅದೇ ರೀತಿ ನಮಗೂ ಕೂಡ ಹಕ್ಕಿದೆ. ಕಾಂಗ್ರೆಸ್ಸಿನವರೂ ಬೆಳಗಾವಿ ಬಿಟ್ಟುಕೊಡಕ್ಕಾಗುತ್ತಾ? ನಾವೆಲ್ಲಾ ಬಿಡ್ತೀವಾ? ಬಿಟ್ಟುಕೊಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಬೆಳಗಾವಿ ಲೋಕಸಭಾ ಉಪ ಚುನಾವಣೆ ಸ್ಪರ್ಧೆ ವಿಚಾರದ ಕುರಿತು ಮಾತನಾಡಿದ ಅವರು, ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡಲೇಬೇಕು, ಬೇರೆ ದಾರಿಯಿಲ್ಲ. ಪಕ್ಷ ಜವಾಬ್ದಾರಿ ವಹಿಸಿದ್ರೆ ಅದಕ್ಕೆ ಬದ್ಧನಾಗಿರುತ್ತೀನಿ ಎಂದರು.
ಎಸ್‍ಟಿ ಸಮುದಾಯಕ್ಕೆ ಕಾಂಗ್ರೆಸ್ ಏನೂ ಕೊಟ್ಟಿಲ್ಲ ಅನ್ನೋ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕುರ್ಚಿಯ ಮೇಲೆ ಕುಳಿತ 24 ತಾಸಿನೊಳಗೆ ಏನೋ ಕೊಡ್ತೀನಿ ಅಂದ್ರು. ಡಿಸಿಎಂ ಕೊಡ್ತೀನಿ ಅಂತ ನಾಯಕರನ್ನು ಬುಟ್ಟಿಗೆ ಹಾಕಿಕೊಂಡ್ರು. ಇದೀಗ ಡಿಸಿಎಂ ಕೊಟ್ಟಿದ್ದಾರಾ? ಇಲ್ಲ. ಅಲ್ಲದೇ ಏಳೂವರೆ ಪರ್ಸೆಂಟ್ ಮೀಸಲಾತಿ ಕೊಡ್ತೀನಿ ಸಿಎಂ ಭಾಷಣ ಕೂಡ ಮಾಡಿದ್ದರು. ಭಾಷಣ ಮಾಡಿ ವೋಟ್ ಕೂಡ ಹಾಕಿಸಿಕೊಂಡಿದ್ದಾರೆ. ಯಾವಾಗ ಮೀಸಲಾತಿ ಕೊಡ್ತಾರೆ ಅಂತಾ ಅವರನ್ನೇ ಕೇಳಿ ಎಂದು ಹೇಳಿದರು.