ಬೆಲ್ಜಿಯಂ ಟು ಬೆಂಗಳೂರು – ಸ್ಯಾಂಡಲ್‌ವುಡ್‌ ಡ್ರಗ್ಸ್‌ ಕಹಾನಿ

Public TV
3 Min Read

– ಡ್ರಗ್ಸ್‌ ಮಾರಾಟದ ಕಿಂಗ್‌ಪಿನ್‌ ಅನಿಕಾ ಅರೆಸ್ಟ್‌
– ಒಂದು ಮಾತ್ರೆ 1500 ರೂ.ಗೆ ಮಾರಾಟ
– ಗ್ರಾಹಕರಾಗಿದ್ದಾರೆ ಸ್ಟಾರ್‌ ನಟ, ನಟಿಯರು

ಬೆಂಗಳೂರು: ಸ್ಯಾಂಡಲ್‌ವುಡ್‌ ಸ್ಟಾರ್‌ ನಟ, ನಟಿಯರು, ಸಂಗೀತಗಾರರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್‌ ವಿತರಿಸುತ್ತಿರುವ ಬೃಹತ್‌ ಜಾಲ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

ಇದೇ 21 ರಂದು ಕಲ್ಯಾಣನಗರದ ರಾಯಲ್ ಸೂಟ್ಸ್ ಅಪಾರ್ಟ್ ಮೆಂಟ್ ಮೇಲೆ ಸಿಸಿಬಿಯ ನಾರ್ಕೋಟಿಕ್ಸ್ ಬ್ಯೂರೋ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಾಗಿರುವ ಅನಿಕಾ, ಅನೂಪ್‌, ರವೀಂದ್ರನ್‌ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಯಾಂಡಲ್‌ವುಡ್‌ ತಾರೆಯರು ಇವರ ನಿತ್ಯದ ಗ್ರಾಹಕರಾಗಿದ್ದ ವಿಚಾರ ತಿಳಿದು ಬಂದಿದೆ.

ಏನು ಸಿಕ್ಕಿದೆ?
ಆಗಸ್ಟ್ 21ರಂದು ಬೆಂಗಳೂರಿನ ಕಲ್ಯಾಣ್ ನಗರ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‍ಮೆಂಟ್‍ನಿಂದ 145 ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು ಮತ್ತು 2.20 ಲಕ್ಷಕ್ಕೂ ಹೆಚ್ಚಿನ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನ ನಿಕೊ ಹೌಸ್‍ನಲ್ಲಿ 96 ಎಂಡಿಎಂಎ ಮಾತ್ರೆಗಳು ಮತ್ತು 180 ಎಲ್‍ಎಸ್‌ಡಿ(ಲೈಸರ್ಜಿಕ್ ಆಸಿಡ್‌ ಡೈಥೈಲಾಮೈಡ್) ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಿರುತರೆಯ ನಂಟು ಹೇಗೆ?
ಡ್ರಗ್ಸ್ ದಂಧೆಯ ಕಿಂಗ್ ಪಿನ್ ಅನಿಕಾ ಆಗಿದ್ದು ಆಕೆಗೆ ಕಿರುತೆರೆಯ ನಂಟು ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ವಿಚಾರಣೆಯ ಸಂದರ್ಭದಲ್ಲಿ ಅನಿಕಾ ಕಿರುತೆರೆಯ ನಟರೊಂದಿಗೂ ಸಂಪರ್ಕ ಬೆಳೆಸಿದ್ದ ವಿಚಾರ ತಿಳಿದು ಬಂದಿದೆ. ಆಕೆ ಕೆಲ ಧಾರಾವಹಿಯಲ್ಲೂ ನಟಿಸಿದ್ದು ಹಲವು ನಟ, ನಟಿಯರಿಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದಳು.

ರಾಜೇಶ್‌ ಮತ್ತು ಅನೂಪ್‌ ಮೊಬೈಲ್‌ ಪರಿಶೀಲಿಸಿದ ವೇಳೆ ಒಂದು ತಿಂಗಳಿಗೆ 2 ಸಾವಿರ ಗ್ರಾಹಕರನ್ನು ಸಂಪರ್ಕಿಸಿರುವ ಸ್ಫೋಟಕ ಮಾಹಿತಿ ಸಿಕ್ಕಿದೆ. ಅನಿಕಾ ಜರ್ಮನಿ ಮತ್ತು ಬೆಲ್ಜಿಯಂನಿಂದ ಅರ್ಡರ್ ಮಾಡಿ ಡ್ರಗ್ಸ್‌ ತರಿಸುತ್ತಿದ್ದಳು. ಡಾರ್ಕ್ ವೆಬ್ ನ ಮೂಲಕ ಅನಿಕಾ ಡೀಲ್ ಮಾಡುತ್ತಿದ್ದಳು.

ಕೋವಿಡ್‌ 19 ಲಾಕ್ ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಈ ಸಮಯದಲ್ಲಿ ಡ್ರಗ್ಸ್‌ಗೆ ಬೇಡಿಕೆ ಹೆಚ್ಚಾಗಿತ್ತು. ಈ ತಂಡ ಭಾರೀ ವ್ಯವಹಾರ ನಡೆಸಿದ್ದು ಇಲ್ಲಿಯವರೆಗೆ ಒಟ್ಟು 3 ಕೋಟಿಗೂ ಹೆಚ್ಚು ವ್ಯವಹಾರ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅನಿಕಾ ಹೇಳಿಕೆ ಆಧಾರಿಸಿ ನಟ, ನಟಿಯರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಪಾರ್ಟಿಯಲ್ಲಿ ಬಳಕೆ:
ಎಂಡಿಎಂಎ ಮಾದಕ ವಸ್ತಗಳನ್ನು ನಟ, ನಟಿಯರ ಪಾರ್ಟಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಜೊತೆಗೆ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳ ಟಾರ್ಗೆಟ್ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಪ್ರತಿ ಎಂಡಿಎಂ ಮಾತ್ರೆಗಳನ್ನು ಆರೋಪಿಗಳನ್ನು ೧,೫೦೦ ರಿಂದ ೨,೫೦೦ ರೂ.ಗೆ ಮಾರಾಟ ಮಾಡುತ್ತಿದ್ದರು.

ಕಸ್ಟಮ್ ಅಧಿಕಾರಿಗಳು ಭಾಗಿ
ಎಲ್‌ಎಸ್‌ಡಿ(ಲೈಸರ್ಜಿಕ್ ಆಸಿಡ್‌ ಡೈಥೈಲಾಮೈಡ್) ಡೆನ್ಮಾರ್ಕ್‌, ಬೆಲ್ಜಿಯಂ, ಜರ್ಮನಿಯಲ್ಲಿ ಈ ವ್ಯವಹಾರ ಹಚ್ಚು.ಈ ಎಲ್‌ಎಸ್‌ಡಿಯನ್ನು ಡಾರ್ಕ್‌ ವೆಬ್‌ ಮೂಲಕ ಬುಕ್‌ ಮಾಡಲಾಗುತ್ತಿತ್ತು. ಬೆಲ್ಜಿಯಂ, ಡೆನ್ಮಾರ್ಕ್‌ ಮೂಲಕ ಕೊರಿಯರ್‌ ಬರುತ್ತಿತ್ತು. ದೇಶಕ್ಕೆ ವಿಮಾನದಲ್ಲಿ ಬರುವ ಕೊರಿಯರ್‌ಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲಿಸಬೇಕಾಗುತ್ತದೆ. ಆದರೆ ಸರಿಯಾಗಿ ಪರಿಶೀಲನೆ ನಡೆಸದೇ ಒಳಗಡೆ ಬಿಡುತ್ತಿರುವ ಹಿನ್ನೆಲೆಯಲ್ಲಿ ಕಸ್ಟಮ್ಸ್‌ ಅಧಿಕಾರಿಗಳ ಮೇಲೆಯೇ ಈಗ ಶಂಕೆ ವ್ಯಕ್ತವಾಗಿದೆ.

ಅಂಚೆ ಇಲಾಖೆಯಲ್ಲೂ ಚೋರರು:
ಡೆನ್ಮಾರ್ಕ್, ಬೆಲ್ಜಿಯಂನಿಂದ ಬಂದ ಬಾಕ್ಸ್‌ಗಳು ಅಂಚೆ ಇಲಾಖೆಯಿಂದಲೂ ವಿಲೇವಾರಿಯಾಗುತ್ತದೆ. ಯಾರಿಗೆ ಸೇರಬೇಕೋ ಅವರಿಗೆ ಅಂಚೆ ಇಲಾಖೆಯಿಂದ ಫೋನ್‌ ಹೋಗುತ್ತದೆ. ಫೋನ್ ಮಾಡಿ ಬಾಕ್ಸ್ ಸಂಗ್ರಹಿಸಲು ಗ್ರಾಹಕರನ್ನು ಕರೆಯುತ್ತಾರೆ. ಬಾಕ್ಸ್‌ನಲ್ಲಿ ಬಂದ ವಸ್ತುಗಳನ್ನು ಸ್ಕ್ಯಾನ್‌ ಮಾಡಬೇಕಾಗುತ್ತದೆ. ಆದರೆ ಸ್ಕ್ಯಾನ್‌ ಮಾಡದೇ ಅಂಚೆ ಇಲಾಖೆಯ ಅಧಿಕಾರಿಗಳು ಗ್ರಾಹಕರಿಗೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈಗ ಅವರ ಮೇಲೂ ಅನುಮಾನ ಕಾಣಿಸಿದೆ.

ಏನಿದು ಎಲ್ಎಸ್‌ಡಿ?
ಲೈಸರ್ಜಿಕ್ ಆಸಿಡ್‌ ಡೈಥೈಲಾಮೈಡ್( ಎಲ್ಎಸ್‌ಡಿ) ಮತ್ತು ಬರುವ ಮಾದಕ ವಸ್ತು ಆಗಿದ್ದು, ಒಮ್ಮೆ ಇದನ್ನು ಸೇವಿಸಿದರೆ ರಕ್ತದ ಒತ್ತಡ ಹೆಚ್ಚಾಗುತ್ತದೆ. ದೇಹದ ಉಷ್ಣಾಂಶ ಏರುತ್ತದೆ. ಅರ್ಧ ಗಂಟೆಯಲ್ಲಿ ಕಿಕ್ ಕೊಡಲು ಆರಂಭಿಸುತ್ತದೆ. ಈ ಮಾದಕ ವಸ್ತು 12 ಗಂಟೆಗಳ ಮನುಷ್ಯ ದೇಹದಲ್ಲಿರುತ್ತದೆ. ನಾಲಿಗೆ ಮೂಲಕ ಎಲ್‌ಎಸ್‌ಡಿಯನ್ನು ಸೇವಿಸಬಹುದು. ಹಲವು ದೇಶಗಳಲ್ಲಿ ಎಲ್‌ಎಸ್ ಡಿ ಮಾದಕ ದ್ರವ್ಯವನ್ನು ನಿಷೇಧ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *