ಬೆಡ್ ಬ್ಲಾಕ್ – 17 ಮಂದಿಯನ್ನು ತೆಗೆದು ಹಾಕಿದ್ದು ಯಾಕೆ? ಹೊಸ ಬದಲಾವಣೆ ಏನು? ಗೌರವ್ ಗುಪ್ತಾ ಹೇಳೋದು ಏನು?

Public TV
2 Min Read

ಬೆಂಗಳೂರು:  ದಕ್ಷಿಣ ವಿಭಾಗದ ಕೋವಿಡ್ ವಾರ್ ರೂಂನಲ್ಲಿ ಒಂದೇ ಸಮುದಾಯದ 17 ಮಂದಿಯನ್ನು ತೆಗೆದು ಹಾಕಿದ್ದು ಯಾಕೆ ಎಂಬುದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವಿವರಣೆ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಬಂದಿರುವ ಮಾಹಿತಿಗಳ ಪ್ರಕಾರ ಇವರನ್ನು ಕೆಲವು ದಿನದ ಹಿಂದೆಯೇ ಕೆಲಸದಿಂದ ತೆಗೆದು ಹಾಕಲಾಗಿದೆ. ಇವರು ಒಂದು ಸಂಸ್ಥೆಯ ಮೂಲಕ ಬಂದಿರುವ ವ್ಯಕ್ತಿಗಳು. ಕೋವಿಡ್ 19 ವಾರ್ ರೂಂನಲ್ಲಿರುವವರು ಎಲ್ಲ ತಾತ್ಕಾಲಿಕ ಗುತ್ತಿಗೆ ಸಿಬ್ಬಂದಿ ಎಂದು ತಿಳಿಸಿದರು.

ಯಾಕೆ ಅವರ ಮೇಲೆ ಆಪಾದನೆ ಇದೆ? ಯಾಕೆ ಅವರನ್ನು ತೆಗೆಯಲಾಗಿದೆ? ಎನ್ನುವುದನ್ನು ಸ್ಥಳೀಯವಾಗಿ ಪರಿಶೀಲನೆ ಮಾಡಿ ಹೇಳುತ್ತಾರೆ. ನಮ್ಮ ದಕ್ಷಿಣ ವಲಯದಲ್ಲಿರುವ ವಲಯವಾರು ಕಮಿಷನರ್ ತುಳಸಿ ಮದ್ದಿನೇನಿ ಆ ವಿಚಾರಕ್ಕೆ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ದಕ್ಷಿಣ ವಲಯ ವಾರ್ ರೂಂ ಏಜೆನ್ಸಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಏಜೆನ್ಸಿಗಳ ವರ್ತನೆ, ಅವರು ಯಾವ ರೀತಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದನ್ನೆಲ್ಲಾ ನೋಡಿ ಏಜೆನ್ಸಿಗಳ ಬದಲಾವಣೆ ಬಗ್ಗೆಯೂ ಚಿಂತನೆ ಮಾಡಿದ್ದೇವೆ. ಅಲ್ಲದೆ ಹೊಸ ಸಾಫ್ಟ್ ವೇರ್ ಅಳವಡಿಸಿಕೊಳ್ಳುವ ಬಗ್ಗೆಯೂ ಸಿದ್ಧತೆ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಮೇಲ್ನೋಟಕ್ಕೆ ತಪ್ಪು ನಡೆದಿರುವುದು ಕಂಡು ಬಂದಿದೆ. ಈ ಬಗ್ಗೆ ಪ್ರತ್ಯೇಕ ದೂರುಗಳು ಬಂದಿವೆ. ದಿನಕ್ಕೆ 800 ರಿಂದ 1000 ಪ್ರಕರಣಗಳಲ್ಲಿ ಬೆಡ್ ಅಲಾಟ್ ಮಾಡುತ್ತಿದ್ದೇವೆ. ಕೆಲವು ಪ್ರಕರಣಗಳಲ್ಲಿ ನಾವು ಬೆಡ್ ಹಂಚಿಕೆ ಮಾಡಿದ ನಂತರವೂ ಜನರು ಅಲ್ಲಿಗೆ ಹೋಗುವುದಿಲ್ಲ. ಆಗ ಅದನ್ನು ಅನ್ ಬ್ಲಾಕ್ ಮಾಡಿ ಇನ್ಮೊಬ್ಬರಿಗೆ ಅಲಾಟ್ ಮಾಡುವ ಪ್ರಕ್ರಿಯೆ ಇದೆ ಎಂದು ತಿಳಿಸಿದರು.

ಕಳೆದ ವರ್ಷ ಅಭಿವೃದ್ಧಿ ಮಾಡಿರುವ ಸಾಫ್ಟ್ ವೇರ್ ನಲ್ಲೇ ಬೆಡ್ ಬ್ಲಾಕಿಂಗ್ ಮಾಡಲಾಗುತ್ತಿದೆ. ಸಾಫ್ಟ್ ವೇರ್ ಅಭಿವೃದ್ಧಿಪಡಿಸುವ ಅಗತ್ಯವೂ ಇದ್ದು ಇದಕ್ಕಾಗಿ ತಾಂತ್ರಿಕ ಸಮಿತಿಯನ್ನು ರಚಿಸಿದ್ದೇವೆ. ಪೊನ್ನುರಾಜ್ ನೇತೃತ್ವದಲ್ಲಿರುವ ಸಮಿತಿ ಇವತ್ತು ನಮಗೆ ವರದಿ ನೀಡಲಿದೆ. ಸಾಫ್ಟ್ ವೇರ್ ಸುಧಾರಣೆ ಮಾಡುವ ನಿಟ್ಟಿನಲ್ಲೂ ಈಗಾಗಲೇ ಕ್ರಮವನ್ನ ತೆಗೆದುಕೊಂಡಿದ್ದಾರೆ ಎಂದರು.


ಹಿಂದೆ ವಾರ್ ರೂಂನಲ್ಲಿ ಐಎಎಸ್ ಕೆಎಎಸ್ ಪ್ರೊಬೇಷನರಿಗಳನ್ನು ನೇಮಿಸಲಾಗಿತ್ತು. ವಾರ್ ರೂಮ್ ನಲ್ಲಿ ಸರ್ಕಾರಿ ಅಧಿಕಾರಿ ಖಾಯಂ ಆಗಿ ಇರಬೇಕು. ಹೀಗಿದ್ದಾಗ ವಾರ್ ರೂಂ ಮೇಲುಸ್ತುವಾರಿ ಮಾಡಲು ಸಾಧ್ಯವಾಗುತ್ತದೆ. ಮ್ಯಾನೇಜ್ಮೆಂಟ್ ಸ್ಟ್ರಕ್ಚರ್ಸ್ ನಲ್ಲೂ ಕೆಲವು ಸುಧಾರಣೆ ಮಾಡುತ್ತಿದ್ದೇವೆ. ಇದರಿಂದಾಗಿ ಜನರ ಅನುಮಾನವನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಆಸ್ಪತ್ರೆಗಳಿಗೆ ಎಷ್ಟು ಸಾಮರ್ಥ್ಯ ಇದೆಯೋ ಅದಕ್ಕೆ ತಕ್ಕಷ್ಟು ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳಬೇಕು. ಕೆಲವು ಆಸ್ಪತ್ರೆಗಳಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಆಕ್ಸಿಜನ್ ಇರುವುದಿಲ್ಲ. ಸ್ಟೋರೇಜ್ ವ್ಯವಸ್ಥೆ ಇರುವುದಿಲ್ಲ. ಆದರೂ ಹೆಚ್ಚಿನ ರೋಗಿಗಳನ್ನ ಅಡ್ಮಿಟ್ ಮಾಡುತ್ತಿರುವುದರಿಂದ ತೊಂದರೆ ಆಗುತ್ತಿದೆ ಎಂದು ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *