ಬೆಡ್ ಬ್ಲಾಕ್ ದಂಧೆ – ಡೀಲ್ ಹೇಗೆ ನಡೆಯುತ್ತಿತ್ತು?

Public TV
2 Min Read

ಬೆಂಗಳೂರು: ಬಿಬಿಎಂಪಿಯ ಬೆಡ್ ಬ್ಲಾಕಿಂಗ್ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಆಗುತ್ತಿದ್ದಂತೆ ತನಿಖೆ ಚುರುಕುಗೊಂಡಿದೆ.

ಕಳೆದ ರಾತ್ರಿ ಜಯನಗರ ಪೊಲೀಸ್ ಠಾಣೆಗೆ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿ ಬೆಡ್ ಬ್ಲಾಕಿಂಗ್ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇಂದು ಬಂಧಿತ ಆರೋಪಿಗಳಾದ ನೇತ್ರಾವತಿ(42) ಮತ್ತು ರೋಹಿತ್(32) ಅವರನ್ನು ವಶಕ್ಕೆ ಪಡೆದು ಇವತ್ತು ಮತ್ತಷ್ಟು  ವಿಚಾರಣೆ ನಡೆಸಲಿದ್ದಾರೆ.

ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಂಸದ ತೇಜಸ್ವಿ ಸೂರ್ಯ ಇದರಲ್ಲಿ ವಾರ್ ರೂಂ ಸಿಬ್ಬಂದಿ ಮಾತ್ರ ಅಲ್ಲ ಬಿಬಿಎಂಪಿ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಸೋಂಕಿತರು ಡಿಸ್ಚಾರ್ಜ್ ಆದ 30 ಸೆಕೆಂಡ್‍ನಲ್ಲೇ ಬೆಡ್‍ಗಳು ಬ್ಲಾಕ್ ಆಗಿತ್ತು.  ಹೋಂ ಐಸೋಲೇಷನ್‍ನಲ್ಲಿ ಇರುವವರು, ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವವರ ಹೆಸರಲ್ಲಿ ಬೆಡ್‍ಗಳು ಬ್ಲಾಕ್‍ಗಳು ಆಗುತ್ತಿತ್ತು. ಒಬ್ಬೊಬ್ಬರ ಹೆಸರಲ್ಲಿ 10 ಬೆಡ್‍ಗಳು ಬ್ಲಾಕ್‍ಗಳು ಆಗಿರುವುದು ಕಂಡು ಬಂದಿದೆ.

ನೇತ್ರಾವತಿ ಮತ್ತು ರೋಹಿತ್ ಅವರ ಜೊತೆ ಹಲವರು ಸಂಪರ್ಕದಲ್ಲಿದ್ದಾರೆ. ಈಗ ಪೊಲೀಸರು ಇವರ ಜೊತೆ ಸಂಪರ್ಕದಲ್ಲಿದ್ದವರ ಪತ್ತೆಗೆ ಮುಂದಾಗುತ್ತಿದ್ದಂತೆ ಹಲವರು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಬಂಧಿತ ನೇತ್ರಾವತಿ ಮತ್ತು ರೋಹಿತ್ ನೆರೆಮನೆ ನಿವಾಸಿಯಾಗಿದ್ದಾರೆ. ನಾನು ಸಾಮಾಜಿಕ ಕಾರ್ಯಕರ್ತೆ ಎಂದು ಪೊಲೀಸರ ಬಳಿ ನೇತ್ರಾವತಿ ಹೇಳಿದ್ದಾಳೆ.

ಡೀಲ್ ಹೇಗೆ ನಡೆಯುತ್ತಿತ್ತು?
ಕೋವಿಡ್ ಸೋಂಕಿತರಿಗೆ ನೆರವು ನೀಡುವ ಉದ್ದೇಶದಿಂದ ವಾಟ್ಸಪ್ ಗ್ರೂಪ್ ಮಾಡಲಾಗಿತ್ತು. ಆ ಎಲ್ಲ ಗ್ರೂಪಿನಲ್ಲಿ ನೇತ್ರಾವತಿ ಸದಸ್ಯಳಾಗಿದ್ದಳು. ಗ್ರೂಪಿನಲ್ಲಿ ಹಾಸಿಗೆ ಬೇಕು ಎಂದು ಮನವಿ ಬಂದ ಕೂಡಲೇ ನೇತ್ರಾವತಿ ಅಲರ್ಟ್ ಆಗಿ ಕೂಡಲೇ ಅವರನ್ನು ಸಂಪರ್ಕಿಸುತ್ತಿದ್ದಳು.

ಬಿಬಿಎಂಪಿ ಮತ್ತು ಖಾಸಗಿ ಕೋಟಾದಲ್ಲಿ ಬೆಡ್ ಇದೆ ಎಂದು ಹೇಳಿ ಕೊನೆಗೆ ಬಿಬಿಎಂಪಿ ಬೆಡ್ ಸಿಗುವುದು ಕಷ್ಟ, ಖಾಸಗಿಯಲ್ಲಿ ಬೆಡ್ ಸಿಗುತ್ತದೆ. ಅದಷ್ಟು ಬೇಗ ತಿಳಿಸಬೇಕು. ಇಲ್ಲದಿದ್ದರೆ ಸಿಗುವ ಬೆಡ್ ಸಹ ಫುಲ್ ಆಗುತ್ತದೆ ಎಂದು ಹೆದರಿಸುತ್ತಿದ್ದಳು. ಭಯಗೊಂಡ ರೋಗಿಗಳ ಸಂಬಂಧಿಕರು ಕೊನೆಗೆ ಈಕೆಯ ಖಾತೆಗೆ ಹಣವನ್ನು ಹಾಕುತ್ತಿದ್ದರು.

ನೇತ್ರಾವತಿ ಜಯನಗರದ ಎರಡು ಖಾಸಗಿ ಆಸ್ಪತ್ರೆಯಲ್ಲಿ 50 ಸಾವಿರಕ್ಕೆ 2 ಬೆಡ್ ಬುಕ್ ಮಾಡಿದ್ದಳು. ಅನುಮಾನಗೊಂಡ ಪೊಲೀಸರು ಸೋಂಕಿತರ ಸಂಬಂಧಿ ನೆಪದಲ್ಲಿ ನೇತ್ರಾವತಿಯನ್ನು ಸಂಪರ್ಕಿಸಿದಾಗ ಸತ್ಯ ಬಯಲಾಗಿದೆ.

ಬಿಬಿಎಂಪಿ ವಾರ್ ರೂಮಿನಲ್ಲಿ ಈಕೆ ಹಲವರ ಜೊತೆ ಸಂಪರ್ಕದಲ್ಲಿರುವುದು ಖಚಿತವಾಗಿದೆ. ಈ ದಂಧೆಯ ಹಿಂದೆ ದೊಡ್ಡ ಜಾಲವೇ ಇರುವುದು ಮೇಲ್ನೋಟಕ್ಕೆ ಸಿಸಿಬಿ ಗಮನಕ್ಕೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *