ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ

Public TV
3 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರನ್ನ ವಿಶ್ವಕ್ಕೆ ಪರಿಚಯಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ನಾಡಪ್ರಭುವಿನ ಸಾಧನೆ, ಬೆಂಗಳೂರಿನ ನಿರ್ಮಾಣದ ಇತಿಹಾಸವನ್ನ ಅಮರವಾಗಿಸುವ ನಿಟ್ಟಿನಲ್ಲಿ ಸರ್ಕಾರವು ಕೆಂಪೇಗೌಡರ ಪ್ರತಿಮೆ ನಿರ್ಮಾಣದ ನಿರ್ಧಾರ ಕೈಗೊಂಡಿದೆ.

ನಾಡಪ್ರಭು ಕೆಂಪೇಗೌಡರ 551ನೇ ಜಯಂತಿಗೆ ರಾಜ್ಯ ಸರ್ಕಾರ ಐತಿಹಾಸ ಕಾರ್ಯಕ್ರಮಕ್ಕೆ ಹೆಜ್ಜೆ ಇಟ್ಟಿದೆ. ನಾಡಪ್ರಭುವಿನ ಸಾಧನೆಯನ್ನ ವಿಶ್ವಕ್ಕೆ ಪರಿಚಯ ಮಾಡಲು ಐತಿಹಾಸಿಕ ಕೆಲಸಕ್ಕೆ ಕೈ ಹಾಕಿದೆ. ಈ ಐತಿಹಾಸಿಕ ಕೆಲಸಕ್ಕೆ ನಾಳೆಯೆ ಅಡಿಗಲ್ಲು ಹಾಕುತ್ತಿದೆ.

ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆಯನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುಮಾರು 23 ಎಕರೆ ಜಾಗದಲ್ಲಿ ಸುಮಾರು 66 ಕೋಟಿ ವೆಚ್ಚದಲ್ಲಿ ಪ್ರತಿಮೆ ಜೊತೆಗೆ ಸೆಂಟ್ರಲ್ ಪಾರ್ಕ್ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಶನಿವಾರ ಕೆಂಪೇಗೌಡರ 551ನೇ ಜಯಂತಿ ಈ ಹಿನ್ನಲೆಯಲ್ಲಿ ಕಂಚಿನ ಪ್ರತಿಮೆ ಹಾಗೂ ಸೆಂಟ್ರಲ್ ಪಾರ್ಕ್ ಕಾಮಗಾರಿಗೆ ಚಾಲನೆ ನೀಡಲಾಗ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಅಶ್ವತ್ಥನಾರಾಯಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ ಅವರು, ಕೆಂಪೇಗೌಡರ ಪ್ರತಿಮೆಯ ಮಾದರಿ ವಿನ್ಯಾಸವನ್ನು ಶನಿವಾರ ಬಿಡುಗಡೆ ಮಾಡಲಾಗುತ್ತದೆ. ಸ್ವಾಮೀಜಿಗಳು, ಗಣ್ಯರು, ಸಚಿವರು, ವಿಪಕ್ಷ ನಾಯಕರು ಸೇರಿ ಒಟ್ಟು 50ಕ್ಕೂ ಕಡಿಮೆ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉಳಿದವರು ಆನ್‍ಲೈನ್ ವ್ಯವಸ್ಥೆ ಮೂಲಕ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲಿದ್ದಾರೆ. ಮುಂದಿನ ವರ್ಷ ಕೆಂಪೇಗೌಡರ ಜಯಂತಿಗೆ ಪ್ರತಿಮೆ ಸೆಂಟ್ರಲ್ ಪಾರ್ಕ್ ಉದ್ಘಾಟನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟಾಗಲೇ ಅಲ್ಲಿ ಬೃಹತ್ ಪ್ರತಿಮೆ ಮತ್ತು ಸ್ಮಾರಕ ನಿರ್ಮಾಣ ಮಾಡಬೇಕು ಅಂತ ಪ್ರಸ್ತಾಪ ಇತ್ತು. ಸಿಎಂ ಯಡಿಯೂರಪ್ಪ 2019-20ನೇ ಸಾಲಿನ ಬಜೆಟ್‍ನಲ್ಲಿ ಇದಕ್ಕಾಗಿ ವಿಶೇಷ ಅನುದಾನ ಮೀಸಲಿಟ್ದಿದ್ದರು. ಈಗ ಡಿಸಿಎಂ ಅಶ್ವಥ್ ನಾರಾಯಣ ಅವರ ಕಾಳಜಿಯಿಂದ ಪ್ರತಿಮೆ ನಿರ್ಮಾಣ ಹಾಗೂ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುತ್ತಿದೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಅಡಿಯಲ್ಲಿ ಈ ಕಾಮಗಾರಿ ಪ್ರಾರಂಭವಾಗುತ್ತಿದೆ. ಐಡೆಕ್ ಸಂಸ್ಥೆ ಸೆಂಟ್ರಲ್ ಪಾರ್ಕ್ ನಿರ್ಮಾಣದ ಉಸ್ತುವಾರಿ ಹೊತ್ತಿದೆ. ಖ್ಯಾತ ಕಲಾವಿದ ರಾಮ್ ಸಿತಾರ್ ಕೆಂಪೇಗೌಡರ ಪ್ರತಿಮೆ ನಿರ್ಮಿಸಲಿದ್ದಾರೆ.

ಸೆಂಟ್ರಲ್ ಪಾರ್ಕ್ ಪ್ಲ್ಯಾನ್!
> ಸೆಂಟ್ರಲ್ ಪಾರ್ಕ್ ನಲ್ಲಿ ಕೆಂಪೇಗೌಡರು ನಿರ್ಮಿಸಿದ ನಗರದ ಐತಿಹಾಸಿಕ ಹೆಜ್ಜೆ ಗುರುತುಗಳನ್ನ ಈಗಿನ ಪೀಳಿಗೆಗೆ ಪರಿಚಯ ಮಾಡಿಸುವ ಕೆಲಸ ಮಾಡಲಾಗುತ್ತೆ.
> ವ್ಯಾಪಾರ, ವಾಣಿಜ್ಯ ಉದ್ದೇಶಕ್ಕಾಗಿ ಕೆಂಪೇಗೌಡರು ರಚಿಸಿದ್ದ ಚಿಕ್ಕಪೇಟೆ, ಬಳೆಪೇಟೆ ಸೇರಿದಂತೆ 64ಕ್ಕೂ ಹೆಚ್ಚು ಪೇಟೆಗಳ ಸೊಗಡು ಈ ಪಾರ್ಕ್ ನಲ್ಲಿ ಇರುತ್ತದೆ.
> ಉದ್ಯಾನವನದ ಪ್ರವೇಶ ದ್ವಾರದಲ್ಲಿ ಎರಡು ಎತ್ತರದ ಗೋಡೆಗಳು ಇರಲಿವೆ. ಇದನ್ನು ದಾಟಿ ಒಳಗೆ ಹೋಗುವ ಪ್ರವಾಸಿಗರಿಗೆ ಕೌತುಕ ಮೂಡಿಸುವ ಚಿತ್ರಗಳು ಕಲಾಕೃತಿಗಳು ಕಾಣಿಸಲಿವೆ.
> ಕೆಂಪೇಗೌಡರು ನಿರ್ಮಿಸಿದ್ದ ಮಣ್ಣಿನ ಗೋಡೆಗಳನ್ನು ನೆನಪಿಸುವ ಗೋಡೆಗಳು ಇರಲಿದೆ. ಇದಕ್ಕಾಗಿ ರಾಮ್ಡ್ ಅರ್ಥ್ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ.

> ಸೆಂಟ್ರಲ್ ಪಾರ್ಕ್ ಮಧ್ಯದಲ್ಲಿ ಚಕ್ರಾಕಾರದ ನೀರಿನ ಸಂಗ್ರಹಗಾರ ಇರಲಿದೆ. ಇವು ಕೆಂಪೇಗೌಡರು ನಿರ್ಮಿಸಿದ್ದ ಕಾಲುವೆ ಹಾಗೂ ಕೆರೆಗಳ ವಿನ್ಯಾಸದ ತದ್ರೂಪವಾಗಿರುತ್ತದೆ.
> ನೀರಿನ ಸಂಗ್ರಹಗಾರದ ಸುತ್ತ ತೆರೆದುಕೊಳ್ಳುವ ದಾರಿಗಳು ಚಕ್ರದ ವಿನ್ಯಾಸದಲ್ಲಿ ಇರಲಿದೆ. ಚಕ್ರದ ಕಡ್ಡಿಗಳಂತೆ ಹೊರಭಾಗಕ್ಕೆ ಈ ದಾರಿಗಳು ಮಧ್ಯೆ ಭಾಗಕ್ಕೆ ತೆರೆದುಕೊಳ್ಳಲಿದೆ.
> ಪ್ರತಿಮೆ ಸುತ್ತ ಪೀಠ ಮತ್ತು ಅದರ ಜಗಲಿಯಂತಹ ಪ್ರದೇಶವನ್ನು ವಸುಂದರ ವಿವರಣಾತ್ಮಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತೆ.
> ಪ್ರತಿಮೆ ಸ್ಥಳದಲ್ಲಿ ಮಾಹಿತಿ ಫಲಕ, ಭಿತ್ತಿಚಿತ್ರಗಳ ಮೂಲಕ ಕೆಂಪೇಗೌಡರ ಜೀವನದ ಪ್ರಮುಖ ಘಟನೆಗಳನ್ನ ಬಣ್ಣಿಸಲಾಗುತ್ತೆ. ಜೊತೆ ಕೆಂಪೇಗೌಡರ ಐತಿಹಾಸಿಕ ಮಹತ್ವ ಮತ್ತು ದೂರದೃಷ್ಟಿಯ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುತ್ತೆ.
> ಸೆಂಟ್ರಲ್ ಪಾರ್ಕ್ ನಮ್ಮ ರಾಜ್ಯದ ಧ್ವಜದ ಸಂಕೇತವಾಗಿರುವ ಅರಿಶಿಣ, ಕುಂಕುಮ ಬಣ್ಣಗಳನ್ನು ಒಳಗೊಂಡಿರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *