ಬೆಂಗ್ಳೂರು ಗಲಭೆ ಪ್ರಕರಣದಲ್ಲಿ ಎಸ್‍ಡಿಪಿಐ ಪಾತ್ರವಿದೆ: ಸುರೇಶ್ ಕುಮಾರ್

Public TV
1 Min Read

– ಶಾಲಾ, ಕಾಲೇಜು ಆರಂಭದ ಬಗ್ಗೆ ಸ್ಪಷ್ಟನೆ

ಚಾಮರಾಜನಗರ: ಬೆಂಗಳೂರಿನ ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್‍ಡಿಪಿಐ ಪಾತ್ರ ಬಹಳಷ್ಟಿದೆ. ಈ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

 

ಚಾಮರಾಜನಗರದಲ್ಲಿ ಬಿಜೆಪಿ ಕಚೇರಿ ನೂತನ ಕಟ್ಟಡ ಶಿಲಾನ್ಯಾಸದ ವೇಳೆ ಮಾತನಾಡಿದ ಅವರು, ಎಸ್‍ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಈ ಸಂಘಟನೆಯನ್ನು ನಿಷೇಧಿಸಬೇಕೆಂಬುದು ಎಲ್ಲರೂ ಒಪ್ಪುವ ಬೇಡಿಕೆಯಾಗಿದೆ. ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆ ನಿಷೇಧಕ್ಕೆ ನನ್ನ ಸಂಪೂರ್ಣ ಸಹಮತವಿದೆ.ಈಗ ಎಸ್‍ಡಿಪಿಐ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ದೃಢ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ. ಗೃಹ ಸಚಿವರು ಕೇಂದ್ರದೊಂದಿಗೆ ಸಮಾಲೋಚನೆ ನಡೆಸಿ ಗಟ್ಟಿಯಾದ ನಿಲುವು ಪ್ರಕಟಿಸಲಿದ್ದಾರೆ ಎಂದು ಸಚಿವರು ಹೇಳಿದರು.

ಯುಪಿ ಮಾದರಿಯ ಕಾನೂನನ್ನು ರಾಜ್ಯದಲ್ಲೂ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಈಗಾಗಲೇ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ಗಳ ಆದೇಶ ಸಹ ಇದೆ. ಯಾರು ಬಂದ್ ಕರೆ ಕೊಡುತ್ತಾರೊ ಆ ಸಮಯದಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ನಷ್ಟ ಆದ್ರೆ ಅವರ ಕೈಯಲ್ಲಿ ಕಟ್ಟಿಸಬೇಕೆಂಬ ಆದೇಶವಿದೆ. ಇದೇ ಮಾದರಿಯಲ್ಲಿ ಡಿ.ಜೆ ಹಳ್ಳಿ ಗಲಭೆಯಲ್ಲಿ ಆಗಿರುವ ನಷ್ಟವನ್ನು ಸಂಬಂಧಿಸಿದವರಿಂದಲೇ ಭರಿಸಬೇಕಾಗಿದೆ ಎಂದರು.

ರಾಜ್ಯದಲ್ಲಿ ಆಗಸ್ಟ್ 31 ರವರಗೆ ಶಾಲಾ ಕಾಲೇಜುಗಳನ್ನು ತೆರೆಯಲು ಅವಕಾಶವಿಲ್ಲ. ಶಾಲೆಗಳನ್ನು ತೆರೆಯುವ ಬಗ್ಗೆ ಕೇಂದ್ರ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದೇವೆ. ಈ ಆದೇಶ ಬಂದ ಕೂಡಲೇ ಮುಂದಿನ ನಮ್ಮ ನಿರ್ಧಾರವನ್ನ ಪ್ರಕಟಿಸುತ್ತೇವೆ. ಸೆಪ್ಟೆಂಬರ್‍ವರೆಗೆ ಶಾಲಾ-ಕಾಲೇಜು ಆರಂಭವಾಗುವುದಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಇದೇ ವೇಳೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *