ಬೆಂಗ್ಳೂರಿನ ನಂತ್ರ ಮಂಡ್ಯದಲ್ಲಿ ಭಾರೀ ಶಬ್ದ- ಗಾಬರಿಯಾದ ಜನ

Public TV
2 Min Read

ಮಂಡ್ಯ: ಬುಧವಾರ ಬೆಂಗಳೂರಿನ ಹಲವೆಡೆ ಭಾರೀ ದೊಡ್ಡ ಶಬ್ದ ಕೇಳಿಸಿತ್ತು. ಇದೀಗ ಇಂದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಶಬ್ದ ಕೇಳಿಸುವ ಮೂಲಕ ಜನರು ಆತಂಕಗೊಂಡಿದ್ದಾರೆ.

ಇಂದು ಮಧ್ಯಾಹ್ನ ಸುಮಾರು 1.58ರ ವೇಳೆಯಲ್ಲಿ ಭಾರೀ ಶಬ್ದ ಕೇಳಿದ್ದು, ಸುಮಾರು ನಾಲ್ಕು ಸೆಕೆಂಡ್‍ಗಳ ಕಾಲ ಶಬ್ದ ಕೇಳಿ ಬಂದಿದೆ. ಶಬ್ಧದ ಪರಿಣಾಮ ಭೂ ಕಂಪಿಸಿದ ಅನುಭವ ಕೂಡ ಆಗಿದೆ ಎಂದು ಜನರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರೀ ಶಬ್ದದಿಂದ ಜನರಲ್ಲಿ ಆತಂಕ ಉಂಟಾಗಿದೆ.

ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ವ್ಯಾಪಿಯ 30 ಹಳ್ಳಿಗಳ ಜನರಿಗೆ ಈ ಶಬ್ದ ಕೇಳಿಸಿದೆ. ಆದರೆ ಯಾವ ಕಾರಣಕ್ಕೆ ಶಬ್ದ ಬಂದಿದೆ ಎಂದು ತಿಳಿದಿಲ್ಲ. ಹೀಗಾಗಿ ಮಾಹಿತಿ ತಿಳಿದು ಶಬ್ದ ಎಲ್ಲಿಂದ ಬಂದಿದೆ ಎಂದು ಪೊಲೀಸರು ಹುಡುಕಾಡುತ್ತಿದ್ದಾರೆ.

ಬುಧವಾರ ಮಧ್ಯಾಹ್ನ 1.20ರ ವೇಳೆಗೆ ಬೆಂಗಳೂರಿನ ಹಲವೆಡೆ ದೊಡ್ಡ ಶಬ್ದ ಕೇಳಿಸಿತ್ತು. ಭಯಾನಕ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಜನ ಭಯಗೊಂಡು ಮನೆಯಿಂದ ಹೊರಗಡೆ ಓಡಿ ಬಂದಿದ್ದರು. ಬೆಂಗಳೂರಿನ ಒಂದು ಕಡೆ ಮಾತ್ರ ಕೇಳಿಸಿದ್ರೆ ಯಾವುದೇ ಭಯ ಇರಲಿಲ್ಲ. ಆದರೆ ನಗರದ ಹಲವೆಡೆ ಈ ಶಬ್ದ ಕೇಳಿಸಿತ್ತು. ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಎಚ್‍ಎಎಲ್, ಇಸ್ರೋ ಲೇಔಟ್, ವಸಂತಪುರ, ಬನಶಂಕರಿ, ಸೇರಿದಂತೆ ಹಲವೆಡೆ ಈ ಶಬ್ದ ಕೇಳಿಬಂದಿತ್ತು.

ಇದು ಭೂಕಂಪನವಲ್ಲ. ಗೌರಿಬಿದನೂರಿನ ಕಚೇರಿಗೂ ಕರೆ ಮಾಡಿ ಮಾಹಿತಿ ತೆಗೆದುಕೊಂಡಿದ್ದೇವೆ. ಭೂಕಂಪನದ ತೀವೃತೆ ಯಾವುದೂ ದಾಖಲಾಗಿಲ್ಲ. ಭೂಗರ್ಭದ ಧ್ವನಿಯೋ ಅಥವಾ ಯಾವುದು ಎನ್ನುವುದರ ಬಗ್ಗೆ ನಾವು ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‍ಎನ್‍ಡಿಎಂಸಿ) ತಿಳಿಸಿತ್ತು.

ಆದರೆ ಈ ಸಂಬಂಧ ರಾತ್ರಿ ರಕ್ಷಣಾ ಇಲಾಖೆ ಸ್ಪಷ್ಟನೆ ನೀಡಿದ್ದು, ಏರ್ ಕ್ರಾಫ್ಟ್ ಸಿಸ್ಟಂ ಆಂಡ್ ಟೆಸ್ಟಿಂಗ್ ಎಸ್ಟಾಬ್ಲಿಸ್ಟ್ ಮೆಂಟ್(ಎಎಸ್‍ಟಿಇ) ನ ವಿಮಾನ ಹಾರಾಡಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಸೂಪರ್ ಸೋನಿಕ್ ವಿಮಾನ ನಗರದಿಂದ ಹೊರಗಡೆ ಹಾರಾಟ ನಡೆಸಿತ್ತು. ಪೈಲಟ್ ಗಳು ಮತ್ತು ಎಂಜಿನಿಯರುಗಳು ವಿಮಾನವನ್ನು ಪರೀಕ್ಷೆ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ 36 ಸಾವಿರ ಮತ್ತು 40 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದಾಗ ಸೋನಿಕ್ ಬೂಮ್ ಕೇಳಿಸಿರಬಹುದು. ಸೋನಿಕ್ ಬೂಮ್ ನಡೆದ ಪ್ರದೇಶದಿಂದ ವ್ಯಕ್ತಿ 65 ರಿಂದ 85 ಕಿ.ಮೀ ದೂರದಲ್ಲಿದ್ದರೂ ಈ ಧ್ವನಿ ಕೇಳಿಸುತ್ತದೆ ಎಂದು ಟ್ವೀಟ್ ಸ್ಪಷ್ಟನೆ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *