ಬೆಂಗ್ಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ತಪ್ಪಿದ ದುರಂತ – ಆಕ್ಸಿಜನ್ ಕೊರತೆಯಿಂದ ರೋಗಿಗಳ ಪರದಾಟ

Public TV
2 Min Read

– ಟ್ಯಾಂಕರ್‌ನಲ್ಲಿ ಆಕ್ಸಿಜನ್ ರವಾನೆ, ರೋಗಿಗಳು ಶಿಫ್ಟ್

ಬೆಂಗಳೂರು: ಕೋವಿಡ್ ಆಸ್ಪತ್ರೆಯೂ ಆಗಿರುವ ಕಿಮ್ಸ್‌ನಲ್ಲಿ ಆಕ್ಸಿಜನ್ ಕೊರತೆಯಿಂದ ಉಂಟಾಗಿದ್ದ ಆತಂಕ ಕೊನೆಗೂ ನಿವಾರಣೆ ಆಗಿದೆ. ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಎರಡು ಟ್ಯಾಂಕರ್‌ಗಳ ಮೂಲಕ ಆಸ್ಪತ್ರೆಗೆ ಆಕ್ಸಿಜನ್ ಪೊರೈಕೆ ಮಾಡಲಾಗಿದೆ.

ಕಿಮ್ಸ್‌ನಲ್ಲಿ ಸೋಂಕಿತರು, ಸೋಂಕಿತರಲ್ಲದ ರೋಗಿಗಳು ಒಳಗೊಂಡಂತೆ 350 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇವರಲ್ಲಿ 210 ಮಂದಿ ಸೋಂಕಿತರು ಸೇರಿದ್ದಾರೆ. 100ಕ್ಕೂ ಹೆಚ್ಚು ಮಂದಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 28 ಕಂದಮ್ಮಗಳು ಸೇರಿದಂತೆ 47 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ 2 ದಿನಗಳಿಂದ ಆಸ್ಪತ್ರೆಗೆ ಸೂಕ್ತ ಪ್ರಮಾಣದಲ್ಲಿ ಆಕ್ಸಿಜನ್ ಪೊರೈಕೆ ಆಗುತ್ತಿರಲಿಲ್ಲ. ಈ ಬಗ್ಗೆ ಆಡಳಿತ ಮಂಡಳಿ ತಿಳಿಸಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿರಲಿಲ್ಲ.

ಸೋಮವಾರ ಸಂಜೆ ಆಕ್ಸಿಜನ್ ಖಾಲಿ ಆಗುತ್ತಿದ್ದಂತೆ ಆಡಳಿತ ಮಂಡಳಿ ರೋಗಿಗಳನ್ನ ಮುನ್ನೆಚ್ಚರಿಕೆಯಿಂದ ಬೌರಿಂಗ್, ವಿಕ್ಟೋರಿಯಾ, ರಾಜೀವ್ ಗಾಂಧಿ ಆಸ್ಪತ್ರೆಗಳಿಗೆ ಅಂಬುಲೆನ್ಸ್‌ಗಳ ಮೂಲಕ ರವಾನೆ ಮಾಡಲಾಗಿತ್ತು. ಘಟನೆಯ ಬಳಿಕ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಎರಡು ಟ್ಯಾಂಕರ್‌ಗಳ ಮೂಲಕ ಆಸ್ಪತ್ರೆಗೆ ಆಕ್ಸಿಜನ್ ಪೊರೈಕೆ ಮಾಡಲಾಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಿಮ್ಸ್ ಡಾ.ವಿನೋದ್, ಸಂಜೆ 4 ಗಂಟೆ ಸುಮಾರಿಗೆ ಆಕ್ಸಿಜನ್ ಕೊರತೆ ಎದುರಾಗಿತ್ತು. 47 ಜನ ರೋಗಿಗಳಿಗೆ ಆಕ್ಸಿಜನ್ ಸಮಸ್ಯೆ ಎದುರಾಗಿತ್ತು. ಎಲ್ಲರನ್ನೂ ಬೌರಿಂಗ್, ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ದಿನನಿತ್ಯ 1,800 ಕ್ಯುಬಿಕ್ ಆಕ್ಸಿಜನ್ ಅಗತ್ಯವಿದೆ. ಯೂನಿವರ್ಸಲ್ ಗ್ಯಾಸ್ ಏಜೆನ್ಸಿನಿಂದ ಆಕ್ಸಿಜನ್ ಪೊರೈಕೆ ಆಗುತ್ತಿತ್ತು. ಆದರೆ 2 ದಿನಗಳಿಂದ ಕಡಿಮೆ ಆಕ್ಸಿಜನ್ ಪೊರೈಕೆ ಆಗುತ್ತಿದೆ. ಇಂದು ಆಕ್ಸಿಜನ್ ಕೊರತೆ ಬಂದ ತಕ್ಷಣ ಸರ್ಕಾರಕ್ಕೆ ಮಾಹಿತಿ ನೀಡಿದ್ದೆವು. ನಮ್ಮ ಮಾಹಿತಿಗೆ ಸರ್ಕಾರ ಸ್ಪಂದಿಸಿದ್ದು, ಸಮಸ್ಯೆ ಬಗೆಹರಿದಿದೆ ಎಂದು ಹೇಳಿದ್ದಾರೆ.

ಘಟನೆಯ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದು, “ಕಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಕೋವಿಡ್ ಸೋಂಕಿತರೂ ಸೇರಿದಂತೆ ಕೆಲವು ರೋಗಿಗಳು ಪರದಾಡುತ್ತಿರುವ ಸುದ್ದಿ ಗಮನಕ್ಕೆ ಬಂದಿದೆ. ಈ ಸಂಬಂಧ ಈಗಾಗಲೇ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ರೋಗಿಗಳನ್ನು ಆಕ್ಸಿಜನ್ ಲಭ್ಯವಿರುವ ಆಸ್ಪತ್ರೆಗಳಿಗೆ ರವಾನಿಸಲು ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.

ಅಲ್ಲದೇ ಕೆಲವರನ್ನು ಈಗಾಗಲೇ ವಿಕ್ಟೋರಿಯಾ, ಬೌರಿಂಗ್ ಮತ್ತು ರಾಜೀವ್ ಗಾಂಧಿ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಆಮ್ಲಜನಕ ಕೊರತೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿರುವ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶ್ರೀರಾಮುಲು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *