ಬೆಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ – ತನ್ನ ಪಾಲನ್ನು ಮಾರಲು ಮುಂದಾದ ಕೇಂದ್ರ

Public TV
2 Min Read

– ದೇಶದ 13 ವಿಮಾನ ನಿಲ್ದಾಣ ಮಾರಾಟಕ್ಕೆ ಸಿದ್ಧತೆ
– 2.5 ಲಕ್ಷ ಕೋಟಿ ರೂ. ಸಂಗ್ರಹಣೆಯ ಗುರಿ

ನವದೆಹಲಿ: ಬೆಂಗಳೂರು ಸೇರಿದಂತೆ ಖಾಸಗೀಕರಣಕ್ಕೆ ಗುರುತಿಸಲಾಗಿರುವ 13 ವಿಮಾನ ನಿಲ್ದಾಣಗಳಲ್ಲಿರುವ ತನ್ನ ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳಲ್ಲಿನ ತನ್ನ ಉಳಿಕೆ ಪಾಲಿನ ಷೇರನ್ನೂ ಮಾರಾಟ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ. 2021-22ರ ಹಣಕಾಸು ವರ್ಷದಲ್ಲಿ ಆಸ್ತಿಗಳ ನಗದೀಕರಣದ ಮೂಲಕ 2.5 ಲಕ್ಷ ಕೋಟಿ ರೂ. ಸಂಗ್ರಹಣೆ ಸಂಬಂಧ ತನ್ನ ಪಾಲನ್ನು ಮಾರಾಟ ಮಾಡಲು  ಸಿದ್ಧತೆ ನಡೆಸಿದೆ.

ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ(ಎಎಐ) ಷೇರು ಹಿಂತೆಗೆತ ಸಂಬಂಧ ವಿಮಾನಯಾನ ಸಚಿವಾಲಯ ಅನುಮೋದನೆ ನೀಡುವ ನಿರೀಕ್ಷೆ ಇದ್ದು, ಈ ವಿಷಯವು ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರ್ಕಾರ ಶೇ.13 ಹಾಗೂ ದೆಹಲಿ ವಿಮಾನ ನಿಲ್ದಾಣದಲ್ಲಿ ಶೇ.26ರಷ್ಟು ಷೇರನ್ನು ಹೊಂದಿದೆ. ವಿಮಾನ ನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆಗಳನ್ನು ಈಗಾಗಲೇ ಸಚಿವಾಲಯ ಆರಂಭಿಸಿದ್ದು, ಸಂಪುಟದ ಅಂಗೀಕಾರ, ವಿವಿಧ ಇಲಾಖೆಗಳ ಅನುಮೋದನೆ ಪಡೆಯುವ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ.

ಕಳೆದ ವರ್ಷ ನಡೆದ ಮೊದಲ ಹಂತದ ಖಾಸಗೀಕರಣದಲ್ಲಿ ಮಂಗಳೂರು, ಲಕ್ನೋ, ಅಹಮದಾಬಾದ್‌, ಜೈಪುರ, ಗುವಾಹಟಿ ಮತ್ತು ತಿರುವನಂತಪುರ ಸೇರಿ 6 ವಿಮಾನ ನಿಲ್ದಾಣಗಳನ್ನು ಅದಾನಿ ಗ್ರೂಪ್‌ ತನ್ನ ತೆಕ್ಕೆಗೆ ಪಡೆದುಕೊಂಡಿತ್ತು.

ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರ ಮಾಡಲಾಗಿದ್ದು, ಕಳೆದ ನವೆಂಬರ್‌ನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಕಂಪನಿ ನಿರ್ವಹಿಸುತ್ತಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಶೇ.74ರಷ್ಟು ಷೇರು ಅದಾನಿ ಗ್ರೂಪ್‌ನಲ್ಲಿ ಇದ್ದರೆ ಶೇ.26ರಷ್ಟು ಷೇರು ಎಎಐನಲ್ಲಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಶೇ.54ರಷ್ಟು ಷೇರು ಜಿಎಂಆರ್‌ ಗ್ರೂಪ್‌, ಎಎಎ ಬಳಿ ಶೇ. 26 ಮತ್ತು ಫ್ರಾಪೋರ್ಟ್‌ ಎಜಿ ಮತ್ತು ಎರ್ಮಾನ್‌ ಮಲೇಷ್ಯಾ ಶೇ.10 ರಷ್ಟು ಪಾಲನ್ನು ಹೊಂದಿದೆ.

2021-22ರ ಬಜೆಟ್‌ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸರ್ಕಾರದ ಬಳಿ ಇರುವ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುವುದು ಎಂದು ಹೇಳಿದ್ದರು.

ಮೋದಿ ಹೇಳಿದ್ದು ಏನು?
ಈ ಹಿಂದೆ ದೇಶದ ಉದ್ಯಮಿಗಳು, ಆರ್ಥಿಕ ತಜ್ಞರು ಭಾಗವಹಿಸಿದ್ದ ವೆಬಿನಾರ್‌ನಲ್ಲಿ ಪ್ರಧಾನಿ ಮೋದಿ ತಮ್ಮ ಸರ್ಕಾರದ ಖಾಸಗೀಕರಣದ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ದೇಶದಲ್ಲಿರುವ ಹಲವು ಸಾರ್ವಜನಿಕ ವಲಯದ ಉದ್ಯಮಗಳು ನಷ್ಟದಲ್ಲಿದೆ. ಇಷ್ಟೇ ಅಲ್ಲದೇ ಹಲವು ಸರ್ಕಾರಿ ವಲಯದ ಉದ್ಯಮಗಳಿಗೆ ಆರ್ಥಿಕ ಬೆಂಬಲದ ಅಗತ್ಯವಿದೆ. ಇದು ದೇಶದ ಆರ್ಥಿಕತೆ ಮೇಲೆ ಭಾರೀ ಹೊಡೆತ ತರುತ್ತಿದೆ. ಜನರ ತೆರಿಗೆ ಹಣವನ್ನು ಇವುಗಳಿಗೆ ಬಳಸುವುದು ಸರಿಯಲ್ಲ. ಈ ಉದ್ಯಮಗಳಲ್ಲಿ ಸರ್ಕಾರ ಇರಬೇಕಾದ ಅಗತ್ಯವಿಲ್ಲ. ಉದ್ಯಮಗಳನ್ನು ನಡೆಸುವುದು ಸರ್ಕಾರದ ಕೆಲಸವಲ್ಲ ಎಂದು ಪ್ರತಿಪಾದಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *