– ದಿನಕ್ಕೆ 10,000 ಜನರಿಗೆ ಪರೀಕ್ಷೆ
– ದಿನದ 24 ಗಂಟೆಯೂ ಕೋವಿಡ್ ಹೆಲ್ಪ್ ಲೈನ್
ಬೆಂಗಳೂರು: ಕೋವಿಡ್ ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪಶ್ಚಿಮ ವಲಯದಲ್ಲಿ ದಿನಕ್ಕೆ 10,000 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಲ್ಲೇಶ್ವರದ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಯಲ್ಲಿ ನಗರದ ಪಶ್ಚಿಮ ವಲಯದ ಕೋವಿಡ್ ಸ್ಥಿತಿಗತಿಯ ಬಗ್ಗೆ ಅವಲೋಕನ ನಡೆಸಿದ ಅಶ್ವತ್ಥನಾರಾಯಣ ಅವರು, ಸದ್ಯಕ್ಕೆ ದಿನಕ್ಕೆ 6,000 ಜನರಿಗೆ ಪರೀಕ್ಷೆ ಮಾಡಲಾಗುತ್ತಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ದಿನಕ್ಕೆ 8,000 ಜನರನ್ನು ತಪಾಸಣೆಗೆ ಒಳಪಡಿಸಲಾಗುವುದು. ಈ ಪ್ರಮಾಣವನ್ನು 10,000ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಏಪ್ರಿಲ್ 1ರಿಂದ 10ನೇ ತಾರೀಖಿನೊಳಗೆ ಇದ್ದಕ್ಕಿದ್ದ ಹಾಗೆ ಪಶ್ಚಿಮ ವಲಯವೂ ಸೇರಿ ಇಡೀ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಲು ಕಾರಣವೇನು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಅದಕ್ಕಾಗಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯವಾಗಿ, ಯಾರೇ ಓರ್ವ ಸೋಂಕಿತ ಪತ್ತೆಯಾದ ಮೇಲೆ ಆತನ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ನಲ್ಲಿರುವ ಕನಿಷ್ಠ 20 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದು ಮಾಹಿತಿ ಹಂಚಿಕೊಂಡರು.
ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಅವರು ಆಸ್ಪತ್ರೆ ಅಥವಾ ತಮ್ಮ ಮನೆಯಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯಬಹುದು. ಅವರಿಗೆ ಎಲ್ಲ ರೀತಿಯ ಔಷಧೋಪಚಾರ ಮಾಡಲಾಗುವುದು. ಈಗಾಗಲೇ ಈ ವಲಯದಲ್ಲಿ 4,500ಕ್ಕೂ ಹೆಚ್ಚು ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಕೋವಿಡ್ ಮಾರ್ಗಸೂಚಿಯಂತೆ ಮೆಡಿಕಲ್ ಕಿಟ್ ನೀಡಲಾಗಿದ್ದು ಕಾಲಕಾಲಕ್ಕೆ ಅವರ ಮೇಲೆ ನಿಗಾ ಇರಿಸಲಾಗಿದೆ. ಇನ್ನೂ 700 ಜನ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಡಿಸಿಎಂ ತಿಳಿಸಿದರು.
ಹೆಲ್ಪ್ ಲೈನ್
ಈ ವಲಯದಲ್ಲಿ ಎಲ್ಲೆಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ಪ್ರತಿಯೊಬ್ಬ ವ್ಯಕ್ತಿಗೂ ನೀಡಲಾಗುತ್ತದೆ. ನವ ಮಾಧ್ಯಮಗಳ ಮೂಲಕ, ಮಾಧ್ಯಮಗಳ ಮೂಲಕ ಹಾಗೂ ಕರಪತ್ರಗಳ ಮೂಲಕ ಮಾಹಿತಿ ಕೊಡಲಾಗುತ್ತಿದೆ. ಕೋವಿಡ್ ಹೆಲ್ಪ್‍ಲೈನ್ 080-68248454 ಸಂಖ್ಯೆಗೆ ದಿನದ 24 ಗಂಟೆಯೂ ಕರೆ ಮಾಡಬಹುದು. ಜೊತೆಗೆ, ವಲಯದಲ್ಲಿ 84 ಮೊಬೈಲ್ ತಂಡಗಳಿವೆ. ಕೂಡಲೇ ಈ ತಂಡಗಳ ಸಂಖ್ಯೆಯನ್ನು 100ಕ್ಕೇರಿಸಲಾಗುವುದು. ಇನ್ನು ಸೋಂಕಿತರಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂಬುದನ್ನು ಬಹಳ ವೈಜ್ಞಾನಿಕವಾಗಿ ಲೈನಪ್ ಮಾಡಲಾಗಿದೆ. ಇದರೊಂದಿಗೆ ಜನರಿಂದ ಸ್ಯಾಂಪಲ್ ಕಲೆಕ್ಟ್ ಮಾಡಿದ 24 ಗಂಟೆಯೊಳಗೇ ರಿಸಲ್ಟ್ ಕೊಡಲಾಗುತ್ತಿದೆ ಎಂದು ಹೇಳಿದರು.
ಹಾಸಿಗೆಗಳ ಕೊರತೆ ಇಲ್ಲ
ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿದ್ದರೂ ಪಶ್ಚಿಮ ವಲಯದ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಕೊರತೆ ಇಲ್ಲ. ಹೀಗಾಗಿ ಜನರು ಆತಂಕಗೊಳ್ಳಬೇಕಾದ ಅಗತ್ಯವಿಲ್ಲ. ಸರ್ಕರ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಕೊರತೆ ಇಲ್ಲ. ಎಲ್ಲಡೆ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಈ ಸೋಂಕು ಬಂದಾಗ ಇದರ ತೀವ್ರತೆ ಹೆಚ್ಚಾಗಿತ್ತು. ಆದರೆ, ಎರಡನೇ ಅಲೆ ಸಂದರ್ಭದಲ್ಲಿ ಸೋಂಕು ವೇಗವಾಗಿ ಹರಡುತ್ತಿದ್ದರೂ ಆದರ ತೀವ್ರತೆ, ಅಂದರೆ ಜೀವಕ್ಕೆ ಅಪಾಯವಾಗುವ ಪ್ರಮಾಣ ಕಡಿಮೆಯಾಗಿದೆ. ಜೀವಕ್ಕೆ ಅಪಾಯವಿಲ್ಲ. ಹೆದರುವ ಅಗತ್ಯ ಇಲ್ಲ ಎಂದು ತಿಳಿಸಿದರು.
ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗಾಗಿ ಈಗಾಗಲೇ 50 ಐಸಿಯು ಬೆಡ್‍ಗಳಿವೆ. ಇದನ್ನು 100ಕ್ಕೆ ಹೆಚ್ಚಿಸಲಾಗುವುದು. ಈ ಭಾಗದ ಜನರಿಗೆ ಸ್ಥಳೀಯ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಕೋವಿಡ್ ಅಲ್ಲದ ರೋಗಿಗಳಿಗೂ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದ್ದು, ಇತರ ರೋಗಿಗಳಿಗೆ 350 ಬೆಡ್‍ಗಳನ್ನು ಮೀಸಲಿರಿಸಲಾಗಿದೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ 500 ಬೆಡ್‍ಗಳನ್ನು ಕೋವಿಡ್ ಸೋಂಕಿತರಿಗಾಗಿಯೇ ನೀಡಲು ಸಿದ್ಧರಿದ್ದಾರೆ. ಅಲ್ಲಿ ಸದ್ಯಕ್ಕೆ 300 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 100 ಹಾಸಿಗೆ ಖಾಲಿ ಇದೆ. ಹೆಚ್ಚುವರಿಯಾಗಿ 100 ಹಾಸಿಗೆ ನೀಡಲು ಅವರು ಸಿದ್ಧರಿದ್ದಾರೆ. ಅದೇ ರೀತಿ ಗಾಂಧೀನಗರದ ಆಯುರ್ವೇದ ಆಸ್ಪತ್ರೆ, ಗೋವಿಂದರಾಜ ನಗರದ ಆಸ್ಪತ್ರೆಯಲ್ಲೂ ಕೋವಿಡ್ ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ವ್ಯಾಕ್ಸಿನೇಷನ್‍ಗೆ ಉತ್ತಮ ಪ್ರತಿಕ್ರಿಯೆ
ಪಶ್ಚಿಮ ವಿಭಾಗದಲ್ಲಿ ನಿಗದಿ ಮಾಡಿದಂತೆ ಶೇ.45ರಷ್ಟು ವ್ಯಾಕ್ಸಿನೇಷನ್ ಗುರಿ ತಲುಪಲಾಗಿದೆ. ಲಸಿಕೆ ಲಭ್ಯವಿದ್ದು, 45 ವರ್ಷ ಮೇಲ್ಪಟ್ಟವರಿಗೆ ಎಲ್ಲಡೆ ವ್ಯಾಕ್ಸಿನ್ ಕೊಡಲಾಗುತ್ತಿದೆ. ಪ್ರತಿಯೊಬ್ಬರೂ ತಮಗೆ ಸಮೀಪ ಇರುವ ಲಸಿಕಾ ಕೇಂದ್ರಕ್ಕೆ ಹೋಗಿ ವ್ಯಾಕ್ಸಿನ್ ಪಡೆಯಬೇಕು. ವ್ಯಾಕ್ಸಿನ್ ಪಡೆದರೆ ಸೋಂಕಿನ ಸಂಪರ್ಕ ಕೊಂಡಿಯನ್ನು ತುಂಡರಿಸಬಹುದು. ಹೀಗಾಗಿ ಲಸಿಕೆ ಹಾಕುವುದನ್ನು ಮತ್ತಷ್ಟು ವೇಗಗೊಳಿಸಲಾಗುವುದು. ಇದಕ್ಕೆ ಬೇಕಾದ ಎಲ್ಲ ಮಾಹಿತಿಯನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಲಾಕ್‍ಡೌನ್ ಮಾಡುವುದಿಲ್ಲ
ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಾಕ್‍ಡೌನ್ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಜೀವವು ಉಳಿಯಬೇಕು, ಜೀವನವೂ ನಡೆಯಬೇಕು ಎಂಬುದು ಸರಕಾರದ ನಿಲುವು. ಹೀಗಾಗಿ ಕೆಲ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಜನರು ಸರ್ಕಾರ ಕೈಗೊಳ್ಳುವ ಕ್ರಮಗಳನ್ನು, ಕೊಡುವ ಸೂಚನೆಗಳನ್ನು ಪಾಲಿಸಬೇಕು. ಈಗ ವಿಧಿಸಲಾಗಿರುವ ನೈಟ್ ಕಫ್ರ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಆರೋಗ್ಯ ಇಲಾಖೆ ಆಯುಕ್ತ ಡಾ.ತ್ರಿಲೋಕಚಂದ್ರ, ಬಿಬಿಎಂಪಿ ಪಶ್ಚಿಮ ವಲಯದ ಕೋವಿಡ್ ಉಸ್ತುವಾರಿ ಐಎಎಸ್ ಅಧಿಕಾರಿ ಪ್ರಜ್ವಲ್ ಘೋಷ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.