ಬೆಂಗಳೂರು ಗಲಭೆ – ಕಾಂಗ್ರೆಸ್ ಶೋಧಿಸಿದ ‘ಸತ್ಯ’ ಏನು?

Public TV
2 Min Read

ಬೆಂಗಳೂರು: ರಾಜಧಾನಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಡಿಸಿಎಂ ಜಿ.ಪರಮೇಶ್ವರ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿತ್ತು. ಈ ಸಮಿತಿಯ ವರದಿ ಇನ್ನೆರಡು ದಿನಗಳಲ್ಲಿ ಕೆಪಿಸಿಸಿಯ ಕೈ ಸೇರಲಿದೆ.

ಇಡೀ ಘಟನೆ ಕಾಂಗ್ರೆಸ್ ಮೂವರು ನಾಯಕರ ವಿರುದ್ಧ ಸುತ್ತುತ್ತಿದೆ. ಪಕ್ಷದ ಮುಖಂಡರ ಒಳಜಗಳದಿಂದ ಈ ಗಲಾಟೆಯ ಇಷ್ಟು ದೊಡ್ಡಮಟ್ಟದ ರೂಪ ಪಡೆದುಕೊಂಡಿರುವ ಬಗ್ಗೆ ಸತ್ಯ ಶೋಧನ ಸಮಿತಿ ನೀಡಿದ ವರದಿಯಲ್ಲಿದೆ ಎಂಬುವುದು ತಿಳಿದು ಬಂದಿದೆ.

ಕಾಂಗ್ರೆಸ್ ಶೋಧಿಸಿದ ‘ಸತ್ಯ’: ಬೆಂಗಳೂರು ಗಲಭೆಗೆ ಕಾಂಗ್ರೆಸ್ ನಾಯಕರ ನಡುವಿನ ಒಳ ಜಗಳವೇ ಕಾರಣವಾಗಿದೆ. ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟ ಮೂವರು ನಾಯಕರ ವರ್ತನೆಯಿಂದಾಗಿ ಈ ಪ್ರಮಾಣದ ಗಲಾಟೆ ನಡೆದಿದೆ. ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟ ಕಾಂಗ್ರೆಸ್ ಕಾರ್ಪೊರೇಟರ್ ಗಳು ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಇರಬೇಕು ಎಂದು ಪರಸ್ಪರ ಕತ್ತಿ ಮಸೆದಿದ್ದಾರೆ. ಒಬ್ಬರ ವಿರುದ್ದ ಒಬ್ಬರು ಹಗೆ ಸಾಧಿಸಿ ಎರಡನೇ ಹಂತದ ನಾಯಕರನ್ನ ಎತ್ತಿ ಕಟ್ಟಿದ್ದು ಈ ಗಲಭೆಗೆ ಕಾರಣ ಸಮಿತಿ ನೀಡಿದ ವರದಿಯಲ್ಲಿದೆ ಎನ್ನಲಾಗಿದೆ.

ಶಾಸಕರ ಸಂಬಂಧಿ ಧಾರ್ಮಿಕ ಭಾವನೆ ಕೆರಳಿಸುವ ಪೋಸ್ಟರ್ ಹಾಕಿದ್ದರೂ ಅದನ್ನು ಸರಿಪಡಿಸುವ ಪ್ರಯತ್ನ ಮಾಡದಿರುವುದು. ತಮ್ಮ ಮೇಲೆ ನೇರ ಆರೋಪ ಬರಬಾರದು ಅನ್ನೋ ಕಾರಣಕ್ಕೆ ಬೇರೆ ಬೇರೆ ಸಂಘಟನೆಗಳ ಮೂಲಕ ಗಲಭೆಗೆ ಕುಮ್ಮಕ್ಕು ನೀಡಿರುವ ಸಾಧ್ಯತೆಗಳಿವೆ.

ಸಂಪತ್‍ರಾಜ್ ವಿರುದ್ಧ ಕೈ ಆರೋಪಪಟ್ಟಿ: ಮಾಜಿ ಮೇಯರ್ ಸಂಪತ್‍ರಾಜ್ ವಿರುದ್ಧ ಇಡೀ ಘಟನೆಯ ಪ್ರಮುಖ ಆರೋಪ ಕೇಳಿ ಬಂದಿದೆ. ಸಂಪತ್ ರಾಜ್ ಕಳೆದ ವಿಧಾನಭಾ ಚುನಾವಣೆಯಲ್ಲಿ ಪುಲಿಕೇಶಿನಗರದ ಟಿಕೆಟ್ ಕೇಳಿದ್ದರು. ಆದರೆ ಒಲ್ಲದ ಮನಸ್ಸಿನಿಂದ ಸಿ.ವಿ.ರಾಮನ್ ನಗರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಚುನಾವಣೆ ಸೋತ ನಂತರ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲೆ ಸಂಪತ್‍ರಾಜ್ ಓಡಾಟ ನಡೆಸಿದ್ದರು.

ಸಂಪತ್ ರಾಜ್ ಮುಂದಿನ ಚುನಾವಣೆಗೆ ಪುಲಿಕೇಶಿನಗರ ಟಿಕೆಟ್ ನನಗೆ ಎಂದು ಹೇಳಿಕೊಂಡು ಓಡಾಟ ನಡೆಸಿದ್ದಾರೆ ಎನ್ನಲಾಗಿದೆ. ಮೇಯರ್ ಆಗಿದ್ದ ನಾನು ನಿಮ್ಮ ಮಾತು ಯಾಕೆ ಕೇಳಬೇಕು ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಸೆಡ್ಡು ಹೊಡೆದಿದ್ದರಂತೆ. ತಮ್ಮ ಜೊತೆಗೆ ಕ್ಷೇತ್ರದ ಉಳಿದ ನಾಲ್ವರು ಕಾಂಗ್ರೆಸ್ ಕಾರ್ಪೋರೇಟರ್ ಗಳನ್ನ ಕಟ್ಟಿಕೊಂಡು ಅಖಂಡ ವಿರುದ್ಧ ರಾಜಕಾರಣ ಮಾಡಿದ್ದರು. ಗಲಭೆಗೆ ಕಾರಣವಾದ ದಿನ ಪ್ರಚೋದನೆ ನೀಡಿರುವ ಬಗ್ಗೆ ಪೊಲೀಸರಿಗೆ ಸಂಪತ್ ರಾಜ್ ಬಗ್ಗೆ ಪ್ರಬಲವಾದ ಅನುಮಾನ ವ್ಯಕ್ತವಾಗಿದೆ. ಒಂದು ವೇಳೆ ಪ್ರಕರಣದಲ್ಲಿ ಸಂಪತ್‍ರಾಜ್ ಕೈವಾಡ ಸಾಬೀತಾದರೆ ಕ್ರಮ ಕೈಗೊಳ್ಳಬಹುದು ಎಂದು ಸತ್ಯ ಶೋಧನೆ ವರದಿಯಲ್ಲಿದೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *