ಬೆಂಗಳೂರಿನ ಮಳೆಗೆ ವೃಷಭಾವತಿಯ ರೌದ್ರ ನರ್ತನ- ಮೈಸೂರು ರಸ್ತೆಯ ಅರ್ಧ ಭಾಗ ಕುಸಿತ

Public TV
2 Min Read

– ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

ಬೆಂಗಳೂರು: ಸಿನಿಕಾನ್ ಸಿಟಿಯಲ್ಲಿ ಇಂದು ಸುರಿದ ಧಾರಾಕಾರ ಮಳೆ ಭಾರೀ ಅವಾಂತರ ಸೃಷ್ಟಿಸಿದ್ದು, ವೃಷಭಾವತಿ ನದಿಯ ರೌದ್ರ ನರ್ತನಕ್ಕೆ ಕೆಂಗೇರಿ ಬಳಿ ತಡೆಗೋಡೆ ಸೇರಿ ಅರ್ಧ ರಸ್ತೆ ಕೊಚ್ಚಿ ಹೋಗಿದೆ. ಭಾರೀ ಪ್ರಮಾಣದ ನೀರು ರಸ್ತೆಗೆ ನುಗ್ಗಿದ್ದು, ಅರ್ಧ ಬಸ್ ಮುಳುಗಿದರೆ, ಕಾರುಗಳು ತೇಲುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಂಗೇರಿಯಲ್ಲಿ ಬರೋಬ್ಬರಿ 65.5 ಮಿಲಿ ಮೀಟರ್ ಮಳೆ ಬಿದ್ದಿದ್ದು, ಹೀಗಾಗಿ ವೃಷಭಾವತಿ ನದಿಯ ಒಳ ಹರಿವು ಹೆಚ್ಚಾಗಿದೆ. ಇದರಿಂದಾಗಿ ಮೈಸೂರು ರಸ್ತೆ ತಡೆಗೋಡೆ ಕೊಚ್ಚಿ ಹೋಗಿದೆ. ಕೆಂಗೇರಿಯ ದುಬಾಸಿಪಾಳ್ಯ ಬಳಿ ತಡೆಗೋಡೆ ಕೊಚ್ಚಿ ಹೋಗಿದ್ದು, ನದಿಯ ಹರಿವಿನ ರಭಸಕ್ಕೆ ಅರ್ಧ ರಸ್ತೆ ಸಹ ಕುಸಿದಿದೆ. ರಸ್ತೆ ಮೇಲೆ 5 ಅಡಿಯಷ್ಟು ನೀರು ನಿಂತಿದ್ದು, ಕೆಲ ಕಾರುಗಳು ತೇಲುತ್ತಿವೆ. ಬಸ್‍ಗಳು ಸಹ ಅರ್ಧದಷ್ಟು ಮುಳುಗಿವೆ. ಕಾರನ್ನು ರಸ್ತೆಯಲ್ಲಿಯೇ ಬಿಟ್ಟು ಚಾಲಕ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಕಾರು ನಿರಲ್ಲಿ ತೆಲುತ್ತಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಸ್ತೆ ತಡೆಗೋಡೆ ಹಾಗೂ ಅರ್ಧ ರಸ್ತೆ ಕೊಚ್ಚಿ ಹೋಗಿದ್ದರಿಂದ ಕೆಲ ಕಾಲ ಸಂಚಾರವನ್ನು ನಿಷೇಧಿಸಲಾಗಿತ್ತು. ನಂತರ ಏಕಮುಖ ಸಂಚಾರ ವ್ಯವಸ್ಥೆ ಮಾಡಿ ವಾಹನಗಳನ್ನು ಬಿಡಲಾಗುತ್ತಿದೆ. ಮಳೆ ನಿಂತರೂ ನದಿಯಲ್ಲಿ ಪ್ರವಾಹ ಇಳಿದಿಲ್ಲ. ಇದರಿಂದಾಗಿ ವಾಹನ ಸವಾರರು ತೀವ್ರ ಆತಂಕಗೊಂಡಿದ್ದಾರೆ. ಯಾವಾಗಲೂ ಬ್ಯುಸಿಯಾಗಿರುತ್ತಿದ್ದ ರಸ್ತೆ ಕೊಚ್ಚಿ ಹೋಗಿದ್ದರಿಂದ ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಪೊಲೀಸರು ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಮೈಸೂರು ರಸ್ತೆಯಲ್ಲಿ ನದಿಗೆ ಕಟ್ಟಿದ ತಡೆಗೋಡೆ ಬಿದಿದ್ದೆ ಹಾಗೂ ರಸ್ತೆ ಕೂಡ ಕುಸಿದಿದೆ. ಎಂಜಿನಿಯರ್ಸ್ ಪ್ರಕಾರ ಮೆಟ್ರೋ ಪಿಲ್ಲರ್‍ಗೆ ಏನೂ ಆಗುವುದಿಲ್ಲ ಎಂದಿದ್ದಾರೆ. ಜನರಿಗೆ ಏನಾದರೂ ಅಪಾಯವಾಗಿದೆಯೇ ಎಂದು ಪರಿಶೀಲಿಸಲು ಸ್ಥಳಕ್ಕೆ ಬಂದಿದ್ದೇನೆ. ಇದೀಗ ಮೈಸೂರ್ ರಸ್ತೆಯ ಒಂದು ಬದಿಯನ್ನು ಬಂದ್ ಮಾಡಿದ್ದೇವೆ. ಕಾಮಗಾರಿ ಮುಗಿಯುವವರೆಗೂ ರಸ್ತೆ ಬಂದ್ ಮಾಡಲಾಗಿದೆ ಎಂದು ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.

ಮಳೆ ನೀರು ಕಾಲುವೆ ಮುಖ್ಯ ಎಂಜಿನಿಯರ್ ಬಸವರಾಜ್ ಈ ಕುರಿತು ಪ್ರತಿಕ್ರಿಯಿಸಿ, ವೃಷಭಾವತಿ ನದಿಯ ತಡೆಗೋಡೆ 150ಕ್ಕೂ ಹೆಚ್ಚು ಮೀಟರ್ ಕುಸಿದಿದ್ದು, ರಸ್ತೆ ಸಹ ಕುಸಿಯುತ್ತಿದೆ. ನೀರು ಕಡಿಮೆಯಾದ ತಕ್ಷಣ ಕಾಮಗಾರಿ ಪ್ರಾರಂಭ ಮಾಡುತ್ತೇವೆ. ಮೊದಲು ರಸ್ತೆ ಮತ್ತೆ ಕುಸಿಯದಂತೆ ಮರಳಿನ ಚೀಲ ಹಾಕುತ್ತೇವೆ. ಮೆಟ್ರೋ ಪಿಲ್ಲರ್‍ಗೆ ಸದ್ಯಕ್ಕೆ ಯಾವುದೇ ಅಪಾಯ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *